ಕೊಪ್ಪಳ: ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಕಡಲೆ (ಹುಳಿಗಡಲೆ) ಖರೀದಿಗೆ ಆದೇಶ ಮಾಡಿ, ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಆದರೆ ನೋಂದಣಿಗೆ ಕೇವಲ 11 ದಿನ ಮಾತ್ರ ಅವಕಾಶ ಕಲ್ಪಿಸಿದ್ದು, ಇದರಿಂದ ರೈತರಿಗೆ ತೊಂದರೆಯಾಗಿದೆ. ನೋಂದಣಿ ದಿನಾಂಕ ವಿಸ್ತರಿಸಿ, ಪ್ರತಿ ರೈತರಿಂದ 20 ಕ್ವಿಂಟಲ್ ಕಡಲೆ ಖರೀದಿಸಿ ಎಂಬ ಒತ್ತಾಯವೂ ಕೇಳಿಬಂದಿದೆ.
ಸರ್ಕಾರವು ಬಹು ವರ್ಷಗಳ ಬಳಿಕ ಕಡಲೆಯನ್ನು ಖರೀದಿ ಮಾಡಲು ಮನಸ್ಸು ಮಾಡಿದೆ. ಇದು ರೈತರಿಗೆ ಖುಷಿ ತಂದಿದೆಯಾದರೂ ಸರ್ಕಾರದ ಕೆಲವೊಂದು ನಿರ್ಧಾರಗಳು ರೈತರಿಗೆ ಸಂಕಷ್ಟ ತಂದಿವೆ. ಪ್ರಮುಖವಾಗಿಯರೆ ಭೂಮಿಯ ಭಾಗದಲ್ಲಿ ಪ್ರತಿವರ್ಷ ಹಿಂಗಾರು ಹಂಗಾಮಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ (ಕಡಲೆ) ಹುಳಿಗಡಲೆಯನ್ನು ಬೆಳೆಯಲಾಗುತ್ತದೆ. ಕೆಲವು ಸಂದರ್ಭದಲ್ಲಿ ಮಳೆ ಕೊರತೆಯಲ್ಲಿ ಅಳಿದುಳಿದ ಬೆಳೆಯೂ ಕೈ ಸೇರುವುದಿಲ್ಲ. ಕೆಲವು ಬಾರಿ ಉತ್ತಮ ಮಳೆಯಾಗಿ ಬೆಳೆ ಬಂದರೂ ಮಾರುಕಟ್ಟೆಯಲ್ಲಿ ದರವೇ ಇರುವುದಿಲ್ಲ. ಕಳೆದ ಮುಂಗಾರು
ಹಂಗಾಮಿಗಿಂತ ಹಿಂಗಾರು ಹಂಗಾಮು ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯ ಯಲಬುರ್ಗಾ, ಕೊಪ್ಪಳ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆದಿದ್ದಾರೆ. ಎಕರೆಗೆ 4-5 ಕ್ವಿಂಟಲ್ ಇಳುವರಿಯೂ ಬಂದಿವೆ. 20 ಕ್ವಿಂಟಲ್ ಖರೀದಿಸಿ: ರಾಜ್ಯ ಸರ್ಕಾರವು ರೈತರ ಹಿತ ಕಾಯಲು ಕಡಲೆ ಖರೀದಿ ಕೇಂದ್ರ ಆರಂಭ ಮಾಡಿರುವುದು ರೈತರಿಗೆ ಖುಷಿ ತಂದಿದೆಯಾದರೂ 3 ಎಕರೆ ಭೂಮಿ ಹೊಂದಿದ ರೈತನ ಕಡಲೆಯನ್ನು 10 ಕ್ವಿಂಟಲ್ ವರೆಗೂ ಮಾತ್ರ ಕಡಲೆ ಖರೀದಿಗೆ ಅವಕಾಶ ಕಲ್ಪಿಸಿದೆ. ಅಂದರೆ ಎಕರೆಗೆ 3 ಕ್ವಿಂಟಲ್ ಖರೀದಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಸಣ್ಣ ರೈತರಿಗಿಂತ ದೊಡ್ಡ ಹಿಡುವಳಿದಾರರೇ ಹೆಚ್ಚಿದ್ದಾರೆ. 15-20 ಎಕರೆ ಜಮೀನಿನಲ್ಲಿ ಕಡಲೆ ಬೆಳೆದಿದ್ದಾರೆ. ಸರ್ಕಾರ ಕೇವಲ 10 ಕ್ವಿಂಟಲ್ ಖರೀದಿ ಮಾಡಿದರೆ ಇನ್ನುಳಿದ ಕಡಲೆಯನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕು. ಇದರಿಂದ ನಷ್ಟವಾಗಲಿದೆ. ಕನಿಷ್ಟ 20 ಕ್ವಿಂಟಲ್ ಖರೀದಿ ಮಾಡಬೇಕು ಎನ್ನುವುದು ರೈತರ ಒತ್ತಾಯ.
ನೋಂದಣಿ ದಿನಾಂಕ ವಿಸ್ತರಿಸಿ: ಸರ್ಕಾರ ಈಗಾಗಲೇ ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್‌ಗಳಲ್ಲಿ ಕಡಲೆ ಖರೀದಿಗೆ ಮಾ. 2ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಮಾ. 13ಕ್ಕೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಲಿದೆ. ಕೇವಲ 11 ದಿನಗಳು ಮಾತ್ರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಸರ್ಕಾರಿ ರಜೆ, ಹೋಳಿ ಹುಣ್ಣಿಮೆ ಹೊರತುಪಡಿಸಿದರೆ 9 ದಿನ ಸಿಗಲಿವೆ. ಅದಲ್ಲದೇ ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಮೇವು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದು, ತಕ್ಷಣ ನೋಂದಣಿ ಪ್ರಕ್ರಿಯೆ ದಿನಾಂಕ ವಿಸ್ತರಣೆ ಮಾಡಬೇಕೆಂಬ ಒತ್ತಾಯ ರೈತಾಪಿ ವಲಯದಿಂದ ಕೇಳಿ ಬಂದಿದೆ. ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯಿಂದ ಕೂಡಲೇ ಕಡಲೆ ನೋಂದಣಿ ಪ್ರಕ್ರಿಯೆಯ ದಿನಾಂಕವನ್ನು ವಿಸ್ತರಣೆ ಮಾಡುವ ಜೊತೆಗೆ ಪ್ರತಿ ರೈತರಿಂದ 10 ಕ್ವಿಂಟಲ್ ಬದಲಿಗೆ 20 ಕ್ವಿಂಟಲ್ ಖರೀದಿಗೆ ಮುಂದಾಗಬೇಕಿದೆ.
ನಮ್ಮಲ್ಲಿ ಈ ಬಾರಿ ಹಿಂಗಾರು ಮಳೆ ಉತ್ತಮವಾಗಿದ್ದರಿಂದ ಕಡಲೆಯನ್ನು ಹೆಚ್ಚು ಬೆಳೆಯಲಾಗಿದೆ. ಇಳುವರಿಯೂ ಹೆಚ್ಚು ಬಂದಿದೆ. ಸರ್ಕಾರ ಪ್ರತಿ ರೈತರಿಂದ ಎಕರೆಗೆ 3 ಕ್ವಿಂಟಲ್, ಗರಿಷ್ಟ 10 ಕ್ವಿಂಟಲ್ ಖರೀದಿಗೆ ಮುಂದಾಗಿದೆ. ನೋಂದಣಿ ಪ್ರಕ್ರಿಯೆ ವಿಸ್ತರಿಸುವ ಜೊತೆಗೆ ಪ್ರತಿ ರೈತರಿಂದ 20 ಕ್ವಿಂಟಲ್ ಖರೀದಿಯ ನಿರ್ಧಾರ ಪ್ರಕಟಿಸಬೇಕು
. -ಶಿವಣ್ಣ ರಾಯರಡ್ಡಿ, ರೈತ ಮುಖಂಡ
ರಾಜ್ಯ ಸರ್ಕಾರ ಈಗಾಗಲೇ ಕಡಲೆ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಮಾ. 13ಕ್ಕೆ ಕೊನೆಯ ದಿನವಾಗಿದ್ದು, ರೈತರ ಹಿತದೃಷ್ಟಿಯಿಂದ ನೋಂದಣಿ ದಿನಾಂಕ ವಿಸ್ತರಣೆ ಮಾಡುವಂತೆ ಹಾಗೂ ಪ್ರತಿ ರೈತರಿಂದ 20 ಕ್ವಿಂಟಲ್ ಖರೀದಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆಯುವೆ. –
ಹಾಲಪ್ಪ ಆಚಾರ್, ಯಲಬುರ್ಗಾ ಶಾಸಕ
-ದತ್ತು ಕಮ್ಮಾರ