Advertisement

MIM: ಕಾಂಗ್ರೆಸ್, ಬಿಜೆಪಿಗೆ ಬೆಂಬಲಿಸಿದ ಆರೋಪ: ಎಂಐಎಂ ಪಾಲಿಕೆ ಸದಸ್ಯರ ಉಚ್ಛಾಟನೆ

01:20 PM Oct 28, 2023 | Team Udayavani |

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂದು ಪಕ್ಷ ನಿರ್ಧರಿಸಿಲ್ಲ. ಅದಕ್ಕೂ ಮುನ್ನವೇ ಕಾಂಗ್ರೆಸ್ ಬೆಂಬಲಿಸಿರುವ, ಬಿಜೆಪಿ ಬೆಂಬಲಕ್ಕೆ ನಿಂತಿರುವ ಸುದ್ದಿಯ ಹಿನ್ನೆಲೆಯಲ್ಲಿ ಪಕ್ಷದಿಂದ ಪಾಲಿಕೆಗೆ ಆಯ್ಕೆಯಾಗಿರುವ ಇಬ್ಬರೂ ಸದಸ್ಯರನ್ನು ಉಚ್ಛಾಟಿಸಲಾಗಿದೆ ಎಂದು ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಲತೀಫ್‍ಖಾನ್ ಅಮೀರಖಾನ್ ಪಠಾಣ ಪ್ರಕಟಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಠಾಣ, ನಮ್ಮ ಪಕ್ಷದ ಮಟ್ಟಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ತತ್ವ-ಸಿದ್ಧಾಂತದಲ್ಲಿ ಒಂದೇ ನಾಣ್ಯದ ಎರಡು ಮುಖಗಳು. ಆದರೆ ಅಭಿವೃದ್ಧಿ ರಾಜಕೀಯ ಹೊಂದಾಣಿಕೆ ಹಂತದಲ್ಲಿ ಪಕ್ಷದ ನಿರ್ಧಾರಕ್ಕೆ ಮುನ್ನವೇ ಈ ಸದಸ್ಯರು ಬೇರೆ ಬೇರೆ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸಿಡುಕಿದರು.

ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಪಡೆದು, ಪಕ್ಷದ ಚಿನ್ಹೆಯ ಮೇಲೆ ನಾಲ್ವರು ಸ್ಪರ್ಧಿಸಿದ್ದರು. ಇರದಲ್ಲಿ ರಿಜ್ವಾನಾ ಇನಮದಾರ ಹಾಗೂ ಸುಫಿಯಾ ವಾಟಿ ಇಬ್ಬರು ಆಯ್ಕೆಯಾಗದ್ದರು. ಇದೀಗ ಇಬ್ಬರೂ ಸದಸ್ಯರು ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಿಲುವು ಪ್ರಕಟಿಸುವ ಕುರಿತು ಚರ್ಚೆಗೆ ಕರೆ ಮಾಡಿದರೂ ಇಬ್ಬರೂ ಸದಸ್ಯರು ಪಕ್ಷದ ನಾಯಕರಿಗೆ ಸ್ಪಂದಿಸಿಲ್ಲ ಎಂದು ದೂರಿದರು.

ಪಾಲಿಕೆಯ ಅಧಿಕಾರ ಹಿಡಿಯುವ ವಿಷಯದಲ್ಲಿ ಹುಬ್ಬಳ್ಳಿ ಹಾಗೂ ಇತರೆ ಕಡೆಗಳಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಆದ್ಯತೆ ಇತ್ತು. ವಿಜಯಪುರದಲ್ಲೂ ಅಂಥ ಅವಕಾಶ ಇತ್ತು. ಆದರೆ ಪಕ್ಷ ನಿರ್ಧಾರ ಕೈಗೊಳ್ಳುವ ಮುನ್ನವೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಸೂಚನೆ ಮೇರೆಗೆ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಅಕ್ಟೋಬರ್ 11 ರಂದು ಪಕ್ಷೇತರರ ಸೇರಿದಂತೆ ವಿಜಯಪುರ ಮಹಾನಗರ ಪಾಲಿಕೆಯ 7 ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬರೆದುಕೊಂಡಿದ್ದರು. ಎಲ್ಲಿಯೂ ನಮ್ಮ ಪಕ್ಷದ ಹೆಸರನ್ನು ಉಲ್ಲೇಖಿಸಲಿರಲಿಲ್ಲ. ಆದರೆ ಸದರಿ ಫೋಟೋದಲ್ಲಿ ನಮ್ಮ ಪಕ್ಷದ ಪಾಲಿಕೆಯ ಸದಸ್ಯರ ಕುಟುಂಬ ಸದಸ್ಯರು ಕಾಣಿಸಿಕೊಂಡಿದ್ದರು ಎಂದರು.

Advertisement

ಇದನ್ನು ಆಧರಿಸಿ ಪಕ್ಷದ ವಿಜಯಪುರ ಜಿಲ್ಲೆಯ ನಾಯಕರು ಪಕ್ಷದ ಪಾಲಿಕೆಯ ಸದಸ್ಯೆಯರನ್ನೇ ನೇರವಾಗಿ ಸಂಪರ್ಕಿಸಿದಾಗ ಅವರು ತಾವು ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ ಬಿಜೆಪಿ ಬೆಂಬಲಿಸಲು ನಿರ್ಧರಿಸಿರುವ ವರದಿಗಳೂ ಬಂದಿವೆ. ಈ ಎಲ್ಲ ಅಂಶಗಳನ್ನು ಆಧರಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಓವೈಸಿ ಅವರಿಗೆ ಮಾಹಿತಿ ನೀಡಿದ್ದೆವು. ರಾಷ್ಟ್ರೀಯ ಅಧ್ಯಕ್ಷ ಸೂಚನೆ ಮೇರೆಗೆ ಪಾಲಿಕೆಯಲ್ಲಿನ ಪಕ್ಷದ ಇಬ್ಬರೂ ಸದಸ್ಯರನ್ನು ಉಚ್ಛಾಟಿಸಲಾಗಿದೆ ಎಂದು ವಿವರಿಸಿದರು.

ಎಂಐಎಂ ಪಕ್ಷದ ನಾಯಕರು, ಕಾರ್ಯರ್ತರ ಪರಿಶ್ರಮ, ನಗರದ ಜನತೆ, ಮತದಾರರು ನಮ್ಮ ಪಕ್ಷದ ಮೇಲೆ ಇರಿಸಿದ್ದ ವಿಶ್ವಾಸಕ್ಕೆ ಈ ಇಬ್ಬರು ಸದಸ್ಯರು ದ್ರೋಹ ಬಗೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ಇವರಿಗೆ ನಮ್ಮ ಪಕ್ಷ ಪಕ್ಷಕ್ಕೆ ದುಡಿದವರನ್ನು ಬಿಟ್ಟು ಇವರಿಗೆ ಟಿಕೆಟ್ ನೀಡಿತ್ತು. ಆದರೂ ಇವರು ಪಕ್ಷ ಹಾಗೂ ಮತದಾರರಿಗೆ ದ್ರೋಹ ಬಗೆದಿದ್ದಾರೆ ಎಂದು ಟೀಕಿಸಿದರು.
ಪ್ರಸಕ್ತ ಸಂದರ್ಭದಲ್ಲಿ ದೇಶದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಲೋಕಸಭೆ ಚುನಾವಣೆ ಪೂರ್ವದಲ್ಲಿ ಹೊಂದಾಣಿಕೆ ರಾಜಕೀಯ ಅನಿವಾರ್ಯ. ಹೀಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರಿಗೆ ನಮ್ಮ ಭಾವನೆಗಳನ್ನು ತಿಳಿಸಿದ್ದೇವೆ. ಇದರ ಹೊರತಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಓವೈಸಿ ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ದವಾಗಿದ್ದೇವೆ ಎಂದರು.

ಎಐಎಂಐಎಂ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಧೀಕ ಬೇಪಾರಿ, ನಗರ ಘಟಕದ ಅಧ್ಯಕ್ಷ ಮುನ್ನಾ ಬಾಂಗಿ, ಕಾರ್ಯದರ್ಶಿ ದಾದಾಪೀರ, ಶಾರೂಖ್ ಪಟೇಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: IFFI: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ಕಾಂತಾರ.. ಇಲ್ಲಿದೆ ಸಿನಿಮಾಗಳ ಪಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next