ಬೀದರ್ : ಧಾರವಾಡ-ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷರಾದ ಮಾತೆ ಗಂಗಾದೇವಿ ಅವರು ತಮ್ಮನ್ನು ಬಸವ ಧರ್ಮ ಪೀಠ ಹಾಗೂ ಸಂಘಟನೆಯಿಂದ ತೆಗೆದು ಹಾಕಿರುವುದಾಗಿ ಹೇಳಿಕೆ ನೀಡಿರುವುದು ಅಮಾನವೀಯ ಮತ್ತು ಕಾನೂನು ಬಾಹಿರವಾಗಿದೆ ಎಂದು ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ೩೦ ವರ್ಷಗಳಿಂದ ತಾವು ಈ ಬಸವ ಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವದಳ ಸಂಘಟನೆಗಾಗಿ ಸರ್ವಸಂಗ ಪರಿತ್ಯಾಗಿಯಾಗಿ, ತನು-ಮನ ಧನದಿಂದ ಪ್ರಮಾಣಿಕವಾಗಿ ದುಡಿದಿದ್ದೇನೆ. ಧರ್ಮಸಮ್ಮೇಳನ, ಲಿಂಗಾಯತ ಮಹಾ ರ‍್ಯಾಲಿಗಳನ್ನು ಸಂಘಟಿಸಿದ್ದೇನೆ. ಲಕ್ಷಾಂತರ ಜನರಿಗೆ ದೀಕ್ಷೆ ನೀಡಿ ಭಕ್ತರನ್ನು ತಯಾರಿಸಿ, ಕೋಟ್ಯಾಂತರ ರೂಪಾಯಿ ಹಣವನ್ನು ಕಾಣಿಕೆ ಮೂಲಕ ಸಂಗ್ರಹಿಸಿ ಸಂಸ್ಥೆಗೆ ತಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾತೆ ಮಹಾದೇವಿ ಅವರು ಲಿಂಗೈಕ್ಯರಾದ ಬಳಿಕ ಬಸವ ಧರ್ಮ ಪೀಠ ವೇರಿದ ಮಾತೆ ಗಂಗಾದೇವಿ ಅವರು ತಮ್ಮ ಅಧಿಕಾರ ದರ್ಪದಿಂದ ಒಬ್ಬರನ್ನಾಗಿ ಜಂಗಮ ಮೂರ್ತಿ ಹಾಗೂ ಶರಣರನ್ನು ಸಂಸ್ಥೆಯಿಂದ ಸಂಘಟನೆಯಿಂದ ದೂರ ಹಾಕುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಲಿಂ. ಮಾತಾಜಿ ಅವರು ಸಂಶೋಧನೆ ಮಾಡಿ ಬಸವಣ್ಣನವರ ವಚನಗಳಲ್ಲಿ ಲಿಂಗದೇವರ ಅಳವಡಿಸಿದ್ದರು. ವಿವಾದವು ಸುಪ್ರೀಂ ಕೋರ್ಟ್‌ವರೆಗೆ ಹೋಗಿ ತೀರ್ಪು ಸಹ ಬಂದ್ದು, ಅದನ್ನು ಸ್ವತಃ ಮಾತೆ ಮಹಾದೇವಿಯವರೆ ತೀರ್ಪಿಗೆ ಗೌರವ ಕೊಡುವುದಾಗಿ ಹೇಳಿದ್ದರು, ತಾವು ಸಹ ಅದನ್ನು ಸ್ವಾಗತಿಸಿದ್ದೇವು. ಅದು ಈಗ ವಿವಾದವೇ ಅಲ್ಲ. ಆದರೆ, ಮಾತೆ ಗಂಗಾದೇವಿ ಅವರು ಡಿ. ೨೮ರಂದು ಬಾಗಲಕೋಟೆಯಲ್ಲಿ ಲಿಂಗದೇವ ಹಿಂಪಡೆದಿದ್ದೇವೆ ಎಂದು ಹೇಳುವ ಅಗತ್ಯವೇ ಇರಲಿಲ್ಲ. ಪತ್ರಿಕಾಗೋಷ್ಠಿಯ ನಂತರ ಯಾರೊಂದಿಗೂ ಮಾತನಾಡದೆ ೧೮ ದಿವಸ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಉಳಿದುಕೊಂಡಿದ್ದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದಿದ್ದಾರೆ.
ತಾವು ಯಾವುದೇ ಕಾರಣಕ್ಕೂ ಬಸವಧರ್ಮ ಪೀಠವನ್ನು ಬಿಟ್ಟು ಹೋಗಬೇಡಿ ಎಂದು ಲಕ್ಷಾಂತರ ಭಕ್ತರು ಒತ್ತಾಯಿಸಿದ್ದಾರೆ. ಆದ್ದರಿಂದ ತಾವು ಸಂಸ್ಥೆಯಲ್ಲಿ ಇದ್ದುಕೊಂಡು ಧರ್ಮ ಪ್ರಚಾರ ಮಾಡುವುದಾಗಿ ಹೇಳಿರುವ ಸ್ವಾಮೀಜಿ, ಲಕ್ಷಾಂತರ ಭಕ್ತರ ಹೃದಯ ಪೀಠದಿಂದ ನನ್ನನ್ನು ಯಾರು ಉಚ್ಚಾಟನೆ ಮಾಡಲು ಸಾಧ್ಯವಿಲ್ಲ. ಕಟ್ಟಿಗೆಯಿಂದ ಮಾಡಿದ ಜಗದ್ಗುರು ಪೀಠ ಭೌತಿಕ ವಾದದ್ದು, ಸೃಷ್ಟಿಕರ್ತ ಲಿಂಗದೇವನ ಚೈತನ್ಯವಿರುವ ಭಕ್ತಹೃದಯ ಪೀಠವೇ ಶಾಶ್ವತವಾದದ್ದು ಎಂದು ತಿಳಿಸಿದ್ದಾರೆ.