Advertisement

ಅಭಿವ್ಯಕ್ತಿ ಎನ್ನುವುದು ಹಕ್ಕಲ್ಲ, ಜವಾಬ್ದಾರಿ

01:46 AM Feb 03, 2019 | |

ಇಂದು ಬಹು ಚರ್ಚಿತವಾಗುತ್ತಿರುವ; ಸಂಘರ್ಷಕ್ಕೂ ಒಳಗಾಗುತ್ತಿರುವ ಪದವೆಂದರೆ ಅಭಿವ್ಯಕ್ತಿ. ಈ ಅಭಿವ್ಯಕ್ತಿ ಎಂಬ ಪದಕ್ಕೆ ತನ್ನದೇ ಆದ ಅರ್ಥವಿಲ್ಲ. ಈ ಪದ ಯಾವುದಾದರೊಂದಿಗೆ ಸೇರಿಕೊಂಡಾಗ ಅದಕ್ಕೊಂದು ಅರ್ಥ ಪ್ರಾಪ್ತವಾಗುತ್ತದೆ. ಇಲ್ಲಿ ಅಭಿವ್ಯಕ್ತಿ ಅನ್ನುವುದು ಒಂದು ಸಾಧನವೇ ಹೊರತು ಅದೊಂದು ಅಂತಿಮ ಪದವಲ್ಲ; ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

Advertisement

ಅಭಿವ್ಯಕ್ತಿ ಎಂಬ ಪದವನ್ನು ಸರಳವಾಗಿ ವಿವರಿಸುವುದಾದರೆ, ನಮ್ಮ ಭಾವನೆಗಳನ್ನು ಪ್ರಕಟಪಡಿಸುವ ದಾರಿ. ನಮ್ಮ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತ ಪಡಿಸುವುದಕ್ಕೆ ವಾಕ್‌ ಸ್ವಾತಂತ್ರ್ಯವೆಂದು ಕರೆಯುತ್ತೇವೆ. ಅಭಿವ್ಯಕ್ತಿ ಎಂಬ ಸಾಧನವನ್ನು ಲೇಖನಿ ಹಿಡಿದು ಪ್ರಕಟಪಡಿಸಬಹುದು; ಚಿತ್ರದ ಮೂಲಕವೂ ವ್ಯಕ್ತಪಡಿಸಬಹುದು; ಕವನದ ರೂಪದಲ್ಲೂ ಹೊರಗೆ ಹಾಕಬಹುದು. ಈ ಎಲ್ಲ ದಾರಿಗಳ ಮೂಲಕ ಪ್ರಕಟಪಡಿಸುವುದೇ ಅಭಿವ್ಯಕ್ತಿ ಅನ್ನಿಸಿಕೊಳ್ಳುತ್ತದೆ. ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ.

ಇಷ್ಟೊಂದು ಸರಳ ಸುಲಭ ಸಾಧನ ಇಂದಿನ ಪ್ರಜಾಸತ್ತಾತ್ಮಕ ಬದುಕಿನಲ್ಲಿ ಇಷ್ಟೊಂದು ಬೆಂಕಿಯ ಚೆಂಡಿನಂತೆ ಉರಿಯುತ್ತಿರುವುದಾದರೂ ಏಕೆ ಅನ್ನುವುದೇ ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಅಭಿವ್ಯಕ್ತಿ ಎಂಬ ಪದವನ್ನು ಸ್ವಾತಂತ್ರ್ಯ ಎಂಬ ಶಬ್ದದೊಂದಿಗೆ ಜೋಡಿಸಿದಾಗ ಅದಕ್ಕೊಂದು ಸಂವಿಧಾನಿಕ ಸ್ಥಾನಮಾನ ದಕ್ಕುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೊಂದು ದೊಡ್ಡ ಇತಿಹಾಸವೇ ಇದೆ. ಫ್ರಾನ್ಸಿನಲ್ಲಿ ಆದ ಕ್ರಾಂತಿ, ಅಮೆರಿಕದ ಸ್ವಾತಂತ್ರ್ಯ ಚಳವಳಿ, ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಇವುಗಳೆಲ್ಲವೂ ಅಭಿವ್ಯಕ್ತಿ ಎಂಬ ಹಕ್ಕಿನ ಕೂಗೇ ಆಗಿತ್ತು ಅನ್ನುವುದನ್ನು ರಾಜಕೀಯ ಇತಿಹಾಸವೇ ದಾಖಲಿಸಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ತನ್ನ ಅರ್ಥವನ್ನು ವಿಸ್ತರಿಸಿಕೊಂಡಿದೆ ಅಂದರೆ ಮಾನವ ಹಕ್ಕುಗಳ ಕೂಗಿನಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೊದಲ ಆದ್ಯತೆ ಇದೆ. ಫ್ರಾನ್ಸ್‌ನ ಚಿಂತಕ ವಾಲ್ಟೇರ್‌ ಹೇಳಿರುವ ಹಾಗೆ ‘ನಿನ್ನ ಯಾವ ಮಾತನ್ನೂ ನಾನು ಒಪ್ಪುವುದಿಲ್ಲ; ಆದರೆ ನಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಉಸಿರಿರುವರೆಗೆ ಸಮರ್ಥಿಸುತ್ತೇನೆ’ ಎಂಬ ಅಂದಿನ ಮಾತನ್ನು ಇಂದಿಗೂ ಸಮರ್ಥಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ವಾದಿಸಬೇಕಾದ ಅಗತ್ಯ ಇದೆ.

ಅಭಿವ್ಯಕ್ತಿ ಎಂಬ ಮುಕ್ತ ಪರಿಸರವನ್ನು ಬರೇ ಮನುಷ್ಯ ಜೀವಿ ಮಾತ್ರ ಬಯಸುವುದಲ್ಲ ಜೀವ ಜಗತ್ತಿನ ಪ್ರತಿಯೊಂದು ಜೀವಿ ಕೂಡಾ ತನ್ನ ಬೇಡಿಕೆಗಳನು,್ನ ಭಾವನೆಗಳನ್ನು ಹೊರಸೂಸಲು ತನ್ನದೇ ವಿಧಾನವನ್ನು ಬಳಸಿಕೊಳ್ಳುತ್ತದೆ ಅನ್ನುವುದು ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದು ಬರುವ ಸತ್ಯಾಂಶ. ಇಲ್ಲಿ ಮನುಷ್ಯನಿಗೂ ಮತ್ತು ಇತರ ಜೀವಿಗಳಿಗೂ ಇರುವ ವ್ಯತ್ಯಾಸವೆಂದರೆ ಮನುಷ್ಯನ ಅಭಿವ್ಯಕ್ತಿಯ ಒಳಗೆ ಸ್ವಾರ್ಥ, ಲಾಭ ನಷ್ಟಗಳ ಲೆಕ್ಕಾಚಾರಗಳೇ ತುಂಬಿಕೊಂಡಿರುತ್ತದೆ. ಆದರೆ ಮನುಷ್ಯನಲ್ಲದ ಜೀವ ಜಗತ್ತಿನ ಅಭಿವ್ಯಕ್ತಿಯ ಒಳಗೆ ಸಮುದಾಯದ ಕಾಳಜಿ ತುಂಬಿರುತ್ತದೆ. ಹಂಚಿ ತಿನ್ನುವ; ಸುಖಕಷ್ಟಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ; ಪರಿಸರವನ್ನು ಇನ್ನಷ್ಟು ಕಂಪಾಗಿಸುವ; ತಂಪಾಗಿಸುವ ಸಹಜವಾದ ಧ್ವನಿ ಅಲ್ಲಿ ಪ್ರತಿಧ್ವನಿಸುತ್ತದೆ. ಅಭಿವ್ಯಕ್ತಿಯ ಮೌಲ್ಯವನ್ನು ನಾವು ಪ್ರಕೃತಿಯಿಂದಲೂ ಕಲಿಯಬೇಕಾಗಿದೆ. ಅಭಿವ್ಯಕ್ತಿ ಪ್ರಕಟಪಡಿಸುವಾಗ ಅದಕ್ಕೊಂದು ಸಂಸ್ಕಾರವಿದೆ. ಪ್ರಜಾಸತ್ತಾತ್ಮಕವಾದ ದಾರಿ ಇದೆ. ಮನುಷ್ಯತ್ವದ ಲೇಪನವಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳದೇ ಇರುವುದು ದುರಂತವೇ ಸರಿ. ಬಾಯಿ ಇದೆ ಎಂಬ ಒಂದೇ ಕಾರಣಕ್ಕಾಗಿ ಏನನ್ನಾದರೂ ಮಾತಾಡಬಹುದು; ಲೇಖನಿ ಕೈಯಲ್ಲಿದೆ ಎಂಬ ಕಾರಣಕ್ಕಾಗಿ ಏನನ್ನೂ ಬರೆಯಬಹುದು; ಕುಂಚ ಇದೆ ಎಂದ ಮಾತ್ರಕ್ಕೆ ಯಾವ ಚಿತ್ರವನ್ನು ಬಿಡಿಸಬಹುದು ಎಂದು ತಿಳಿದಿರುವುದು ಇಂದಿನ ಅಭಿವ್ಯಕ್ತಿ ಸ್ವಾತಂತ್ರ್ಯ ದಿಕ್ಕು ತಪ್ಪಲು ಪ್ರಮುಖ ಕಾರಣ .

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ತರವಾದ ಅರ್ಥವಿದೆ. ಹಾಗಾಗಿ ಪ್ರತಿಯೊಂದು ಪ್ರಜಾಪ್ರಭುತ್ವದ ಗಟ್ಟಿತನ ಅಳೆಯುವುದೇ ಈ ಅಭಿವ್ಯಕ್ತಿ ಎಂಬ ಸಾಧನದಿಂದ ಅನ್ನುವುದು ಕೂಡಾ ಅಷ್ಟೇ ಸತ್ಯ. ಇಂದು ಸಂವಿಧಾನವನ್ನು ಒಪ್ಪಿಕೊಂಡ ಎಲ್ಲ ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೊದಲ ಸಾಲಿನ ಮನ್ನಣೆ ದೊರೆತಿದೆ.

Advertisement

ಅಭಿವ್ಯಕ್ತಿ ಎಂಬ ಸಂಕಲ್ಪ ಭಾರತದ ಸಂವಿಧಾನದಲ್ಲಿ ಯಾವುದೇ ಗೊಂದಲಕ್ಕಾಗಲಿ; ಸಂಘರ್ಷಕ್ಕಾಗಲಿ ಎಡೆಮಾಡಿ ಕೊಡಬಾರದು ಎಂಬ ಕಾರಣಕ್ಕಾಗಿ ಸಂವಿಧಾನದ ಭಾಗ 3ರಲ್ಲಿ ಅನುಚ್ಛೇದ 19(1)ಎ ಹಾಗೂ 19(2)ಬಿನಲ್ಲಿ ಸ್ಪಷ್ಟವಾಗಿ ಕೆತ್ತಲಾಗಿದೆ. ವಿಪರ್ಯಾಸವೆಂದರೆ ಇಂದು ಮಾತು ಮಾತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ; ಚ್ಯುತಿ ಬಂದಿದೆ; ಅಪಾಯವಿದೆ ಎಂದು ಬೊಬ್ಬಿಡುವವರು ಸಂವಿಧಾನದ 19(1)ಎ ಪರಿಚ್ಛೇದವನ್ನು ಮಾತ್ರ ಓದಿ ಅರ್ಥ ಮಾಡಿಕೊಳ್ಳದಿರುವುದೇ ಅಭಿವ್ಯಕ್ತಿಯ ಹೆಸರಿನಲ್ಲಿ ನಡೆಯುವ ಎಲ್ಲ ಅವಾಂತರಗಳಿಗೂ ಕಾರಣವಾಗಿದೆ. ಭಾರತೀಯ ಸಂವಿಧಾನಕ್ಕೆ ನಾವು ಎಡ-ಬಲ ದೃಷ್ಟಿಕೋನದವರು ಎಂಬ ಸಂಕುಚಿತ ಭಾವವಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಸಮಾನ ಅವಕಾಶವಿದೆ. ಇಂತಹ ಹಕ್ಕಿನಿಂದಲೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂಬ ನಂಬಿಕೆಯೂ ಸಂವಿಧಾನಕ್ಕೆ ಇದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ ಎಂಬ ಎಚ್ಚರಿಕೆಯನ್ನು ಸಂವಿಧಾನದ 19(2)ಬಿಯಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ನಮ್ಮ ಮಾತುಕತೆ ಬೇರೆಯವರ ಮನಸ್ಸು ಭಾವನೆಗಳನ್ನು ಘಾಸಿಗೊಳಿಸುವುದಾಗಲಿ; ಸಮಾಜದ, ರಾಷ್ಟ್ರದ ಭದ್ರತೆ ಐಕ್ಯತೆಗೆ ಧಕ್ಕೆ ತರುವಂತಿದ್ದರೆ ಅದಕ್ಕೆ ತಡೆ ಒಡ್ಡುವ ಅಧಿಕಾರ ಸರಕಾರಕ್ಕೆ ಇದೆ ಅನ್ನುವುದನ್ನು ಸ್ಪಷ್ಟವಾಗಿ ಸಂವಿಧಾನದಲ್ಲಿ ಉಲ್ಲೇಖೀಸಲಾಗಿದೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಲೇಬೇಕು.

ಅಭಿವ್ಯಕ್ತಿ ಹಕ್ಕು ಬರೇ ವೈಯಕ್ತಿಕ ಹಕ್ಕು ಅನ್ನುವ ತರದಲ್ಲಿ ಬಳಸದೇ ಸಮುದಾಯ ಹಿತಾಸಕ್ತಿಗೂ ನನ್ನ ಹಕ್ಕು ಪೂರಕವಾಗಿರಬೇಕು ಎಂದು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಧರ್ಮ, ಜಾತಿ, ದೇವರು, ಆಚರಣೆಗಳು ಒಂದು ಆರೋಗ್ಯಪೂರ್ಣ ಸಮಾಜವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ನನಗೆ ಅದರ ಮೇಲೆ ನಂಬಿಕೆ ಇಲ್ಲ ಎಂಬ ಕಾರಣಕ್ಕೆ ಕೀಳಾಗಿ ಹೀಯಾಳಿಸಿ ಮಾತನಾಡುವುದು ಸಮುದಾಯದ ಭಾವನೆಗಳಿಗೆ ನೋವು ಉಂಟು ಮಾಡುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ನಮ್ಮಲ್ಲಿರಬೇಕು. ಹಾಗಂದ ಮಾತ್ರಕ್ಕೆ ಇವುಗಳಿಂದಾಗಿ ಶೋಷಣೆ, ಅಸಮಾನತೆಗೆ ಎಡೆಮಾಡಿ ಕೊಡುತ್ತದೆ ಎಂದಾಗ ಅದನ್ನು ಆರೋಗ್ಯ ಪೂರ್ಣವಾಗಿ ಪ್ರಶ್ನಿಸುವ, ಪ್ರತಿಭಟಿಸುವ ಹಕ್ಕನ್ನು ಕೂಡಾ ತಳ್ಳಿ ಹಾಕಲಾಗದು.

ವ್ಯಕ್ತಿಯ ಹಕ್ಕು ಮತ್ತು ಸಮಾಜದ ನಡುವೆ ಸಮತೋಲನವಿರಬೇಕು. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಡೀ ಸಮಾಜದ ಆರೋಗ್ಯವನ್ನು ಕೆಡಿಸುವ ತರದಲ್ಲಿ, ರಾಷ್ಟ್ರದ ಭದ್ರತೆಯನ್ನು ಅಪಾಯಕ್ಕೊಡ್ಡುವ ಹಾಗೇ ಅಭಿವ್ಯಕ್ತಿ ಹಕ್ಕನ್ನು ಹರಿಯಬಿಡುವುದು ರಾಷ್ಟ್ರದ ಹಿತದೃಷ್ಟಿಯಿಂದ ಸಂವಿಧಾನ ಬಾಹಿರ ಆಗಿರುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಷ್ಟು ವಿಸ್ತಾರವಾಗಿದೆ ಅನ್ನುವುದಕ್ಕೆ ಆಂಗ್ಲ ಭಾಷಾ ಮಾತಿನ ಧಾಟಿ ನೋಡಿ “your freedom ends where, my nose begins’ ಅಂದರೆ ನನ್ನ ಮೂಗು ಪ್ರಾರಂಭವಾಗುವಲ್ಲಿ ನಿನ್ನ ಸ್ವಾತಂತ್ರ್ಯ ಕೊನೆಗೊಳ್ಳುತ್ತದೆ. ಈ ಮಾತು ನಿಜಕ್ಕೂ ನಾವು ಕಂಡುಕೊಂಡ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಇತಿಮಿತಿಯನ್ನು ಸ್ಪಷ್ಟವಾಗಿ ತೋರಿಸಿದೆ. ಒಂದಂತೂ ಸತ್ಯ ಭಾರತದ ಸಂವಿಧಾನವನ್ನು ಬರೇ ಎಡಗಣ್ಣಿನಿಂದಲೋ ಅಥವಾ ಬಲಗಣ್ಣಿನಿಂದಲೋ ನೋಡಿ ಓದಿ ಅರ್ಥೈಸುವುದನ್ನು ಬಿಟ್ಟು ಎಡ-ಬಲ ಎರಡು ದೃಷ್ಟಿಗಳನ್ನು ಒಂದಾಗಿಸಿ ಮುಕ್ತ ಮುಗ್ಧ ಮನಸ್ಸಿನಿಂದ ಸಂವಿಧಾನವನ್ನು ತೆರೆದು ಓದಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಅಮೂಲ್ಯ ಹಕ್ಕುಗಳ ಲೋಕ ದರ್ಶನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

 ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next