ರಾಮನಗರ: ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ದಶಪಥ ರಸ್ತೆ ಕಾಮಗಾರಿಯ ಅವ್ಯವಸ್ಥೆಯನ್ನು ಸರಿಪಡಿಸಲು ಕೊನೆಗೂ ಎನ್‌ಎಚ್‌ಎಐ ಮುಂದಾಗಿದ್ದು, ಹೆದ್ದಾರಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 688 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದಿದೆ.
ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯಲ್ಲಿ 6 ಪಥಗಳ ಆಕ್ಸೆಸ್ ಕಂಟ್ರೋಲ್ ಹೈವೆ ಮತ್ತು ಎರಡೂ ಬದಿ ದ್ವಿಪಥ ಸವೀಸ್ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಕಾಮಗಾರಿ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಹೆದ್ದಾರಿ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರದ ಪ್ರತ್ಯೇಕ ತಂಡಗಳು ಪರಿಶೀಲನೆ ನಡೆಸಿ ಸುರಕ್ಷತಾ ಮಾನ ದಂಡಗಳನ್ನು ಸಮರ್ಪಕವಾಗಿ ಅಳವಡಿಕೆ ಮಾಡಿಲ್ಲ ಎಂದು ವರದಿ ನೀಡಿದ್ದ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ಕಳೆದ ಜು.19ರಂದು 3 ಮಂದಿ ರಸ್ತೆ ಸುರಕ್ಷತಾ ತಜ್ಞರ ತಂಡವನ್ನು ಕಳುಹಿಸಿ ಹೆದ್ದಾರಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಿತ್ತು. ಇದೀಗ ವರದಿಯನ್ವಯ ಸುರಕ್ಷತಾ ಕಾಮಗಾರಿಗಳನ್ನು ಎನ್‌ಎಚ್‌ಎಐ ಕೈಗೊಂಡಿದೆ.
ಏನೆಲ್ಲಾ ಕೆಲಸ ಕೈಗೊಳ್ಳಲಿದ್ದಾರೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ಕಚೇರಿಯಿಂದ 688 ಕೋಟಿ ರೂ.ಅಂದಾಜು ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಈ ಹಣದಲ್ಲಿ ವಿವಿಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಈ ಮೊತ್ತದಲ್ಲಿ 23 ಕಿಮೀ ನಷ್ಟು ಉದ್ದ ಕಾಮಗಾರಿ ನಡೆಯಲಿದೆ ಎಂದು ಎನ್‌ಎಚ್‌ಎಐ ತಿಳಿಸಿದ್ದು, ಅಪಘಾತ ವಲಯಗಳಲ್ಲಿ ರಸ್ತೆ ವಿನ್ಯಾಸ ಬದಲಾವಣೆ, ರಸ್ತೆಯನ್ನು ಎತ್ತರಿಸುವುದು, ಕೆಲವೆಡೆ ರಸ್ತೆ ಮಧ್ಯಭಾಗದ ಮೀಡಿಯ ಎತ್ತರವನ್ನು ಹೆಚ್ಚಿಸುವುದು, 24 ಕಡೆ ಪ್ರಯಾಣಿಕರ ಪಾದಚಾರಿಗಳು ಸಂಚರಿಸಲು ಅನುಕೂಲವಾಗುವಂತೆ ಪಾದಚಾರಿ ಮೇಲ್ಸೇತುವೆ, ಕೆಲವೆಡೆ ಪ್ರಯಾಣಿಕರಿಗೆ ಸೂಚನಾ ಫಲಕಗಳು, ಎಕ್ಸೀಟ್ ಮತ್ತು ಎಂಟ್ರಿ ಬಳಿ ಕಾಮಗಾರಿಗಳು ಸೇರಿದಂತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
25 ಬ್ಲಾಕ್ಸ್ ಸ್ಪಾಟ್‌ಗಳ ಸುಧಾರಣೆ: ಬೆಂ-ಮೈ ದಶಪಥ ರಸ್ತೆಯಲ್ಲಿ 25 ಸ್ಥಳಗಳನ್ನು ಅಪಘಾತ ವಲಯ(ಬ್ಲಾಕ್‌ಸ್ಪಾಟ್) ಎಂದು ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇನ್ನು ಕೆಲವೆಡೆ ಇರುವ ಹತ್ತು-ತಗ್ಗುಗಳನ್ನು ಸರಿಪಡಿಸುವ ಜೊತೆಗೆ, ವಾಹನ ಸಂಚಾರಕ್ಕೆ ಎಲೆಲ್ಲಿ ಅಡ್ಡಿಯಾಗುತ್ತಿದೆ ಎಂಬುದನ್ನು ಗುರುತಿಸಿ ಅಲ್ಲಿ ಸರಿಪಡಿಸುವ ಕೆಲಸವನ್ನು ಹೆಚ್ಚುವರಿ ಕಾಮಗಾರಿಯಲ್ಲಿ ಕೈಗೊಳ್ಳಲಾಗುವುದು.
ಪೊಲೀಸ್ ಇಲಾಖೆಗೂ 3.5ಕೋಟಿ ರೂ. ಅನುದಾನ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಸುರಕ್ಷತಾ ಉಪಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸಹ 3.5 ಕೋಟಿ ರೂ.ಅನುದಾನವನ್ನು ಹೆದ್ದಾರಿ ಪ್ರಾಧಿಕಾರದ ವತಿಯಿಂದ ಬಿಡುಗಡೆ ಮಾಡ ಲಾಗಿದೆ. ಈ ಹಣದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡ್ಯ, ರಾಮನಗರ ಮತ್ತು ಮೈಸೂರು ಜಿಲ್ಲಾ ಪೊಲೀಸರು ಕ್ಯಾಮೆರಾ ಅಳವಡಿಕೆ, ಝೀಬ್ರಾ ಪಟ್ಟಿ, ಸರ್ವೀಸ್ ರಸ್ತೆಯಲ್ಲಿ ಸಿಗ್ನಲ್ ಮತ್ತು ಹಂಪ್‌ಗ್ಳಿಗೆ ವೈಟ್ ಪೇಯಿಂಟಿಂಗ್ ಸೇರಿದಂತೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಎಕ್ಸ್‌ಪ್ರೆಸ್ ವೇನಲ್ಲಿ ಅಗತ್ಯ ಕಾಮಗಾರಿ: ಕೈಗೊಳ್ಳಲಿ ಬೆಂಗಳೂರು, ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸುರಕ್ಷತಾ ಕಾಮಗಾರಿಗಳ ಜೊತೆಗೆ ರೆಸ್ಟ್ ಏರಿಯಾ, ಕೆಫೆಟೇರಿಯಾ, ಟ್ರಾಮಾಸೆಂಟರ್, ಪೆಟ್ರೋಲ್ ಬಂಕ್, ಶೌಚಾಲಯ, ತುರ್ತು ಪಾರ್ಕಿಂಗ್ ವ್ಯವಸ್ಥೆ, ಹೆಚ್ಚಿನ ಆ್ಯಂಬುಲೆನ್ಸ್ ಸೇವೆ, ಎಂಟ್ರಿ ಮತ್ತು ಎಕ್ಸಿಟ್‌ಗಳ ಅವ್ಯವಸ್ಥೆ ಸರಿಪಡಿಸು ವುದು, ಸರ್ವಿಸ್ ರಸ್ತೆಗಳ ಅವ್ಯವಸ್ಥೆ ನಿವಾರಣೆ ಹೀಗೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಿ ಎಂದು ಪ್ರಯಾಣಿಕರು ಸಲಹೆ ನೀಡಿದ್ದಾರೆ.
– ಸು.ನಾ.ನಂದಕುಮಾರ್