ಭಾಲ್ಕಿ: ಯಾವುದೇ ಸಮಾಜ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸುಭದ್ರವಾಗಬೇಕಾದರೆ ಸ್ವಜನಪಕ್ಷಪಾತ ಮರೆತು ಒಗ್ಗಟ್ಟು ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಜನಾರ್ಧನರಾವ್ ಬಿರಾದಾರ ಹೇಳಿದರು.
ಪಟ್ಟಣದ ಶಾಹು ನಗರದಲ್ಲಿ ಮರಾಠಾ ಸಮುದಾಯದ ವತಿಯಿಂದ ಆಯೋಜಿಸಿದ್ದ ರಾಜಮಾತಾ ಜೀಜಾವು ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಮಕರ ಸಂಕ್ರಾಂತಿ ನಿಮಿತ್ತ ವೈರತ್ವ ಅಳಿಸಿ, ಸ್ನೇಹತ್ವ ಬೆಳೆಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಸೌಲಭ್ಯ ಪಡೆಯಲು ಮರಾಠಾ ಸಮುದಾಯವನ್ನು 3ಬಿ ವರ್ಗದಿಂದ 2ಎ ಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ತರುವುದು ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಮುಖಂಡರಾದ ನಾಮದೇವರಾವ್ ಪವಾರ, ರಾಮರಾವ್ ವರವಟ್ಟಿಕರ್, ಬಾಬುರಾವ್ ಜೋಳದಾಪ್ಕೆ, ರಮೇಶ ಪಾಟೀಲ, ಡಿ.ಜಿ. ಜಗತಾಪ, ವಿಠಲರಾವ್ ಸಾಳುಂಕೆ, ದತ್ತಾತ್ರಿ ತುಗಾಂವಕರ್, ನರಸಿಂಗರಾವ್ ಮಹಾರಾಜ ತೋರಣೆಕರ್, ಸಂದೀಪ ತೆಲಗಾಂವಕರ್ ಅವರು ಸ್ವಾಮಿ ವಿವೇಕಾನಂದ ಹಾಗೂ ರಾಜಮಾತಾ ಜೀಜಾವು ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ದಿಗಂಬರಾವ್ ಮಾನಕಾರಿ ಮಾತನಾಡಿ, ಸ್ವಾಮಿ ವಿವೇಕಾನಂದರು ಬುದ್ಧಿಶಕ್ತಿಯಿಂದ ರಾಷ್ಟ್ರದ ಕೀರ್ತಿಯನ್ನು ವಿದೇಶದಲ್ಲಿ ಪಸರಿಸಿದರು. ರಾಜಾಮಾತಾ ಜೀಜಾವು ಅವರ ಶಿಕ್ಷಣ ಪದ್ಧತಿ ಈಗಿನ ಮಹಿಳೆಯರಿಗೆ ಆದರ್ಶಪ್ರಾಯವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸಂಸ್ಕಾರಯುತ, ಸ್ವಾಲಂಬಿ ಜೀವನ ಸಾಗಿಸುವ ಕಲೆ ತಿಳಿಸಿಕೊಡುವುದು ಅವಶ್ಯಕವಾಗಿದೆ. ಸಮಾಜದ ಏಳ್ಗೆಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯುವ ಕುರಿತು ಪ್ರತಿಯೊಬ್ಬರಿಗೆ ತಿಳಿಸಿಕೊಡಬೇಕಾಗಿದೆ. ಪ್ರಸ್ತುತವಾಗಿ ತಾಲೂಕಿನ ಮರಾಠಾ ಸಮುದಾಯದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ, ಸಮುದಾಯ ಭವನ ನಿರ್ಮಿಸುವಂತೆ ಶಾಸಕರ ಮೇಲೆ ಒತ್ತಡ ತರಬೇಕು. ಸಮಾಜ ಒಗ್ಗಟ್ಟಿನಿಂದ ಇದ್ದರೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕಿಶನರಾವ್ ಪಾಟೀಲ ಇಂಚೂರಕರ್, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಪ್ರತಾಪರಾವ್ ಪಾಟೀಲ, ರಮೇಶ ಪಾಟೀಲ, ಅಶೋಕರಾವ್ ಪಾಟೀಲ ಮೇಹಕರ್, ಶೇಷರಾವ್ ಕಣಜಿಕರ್, ಭಾವುರಾವ್ ಪಾಟೀಲ, ಬಾಬುರಾವ್ ಹುಲಸೂರೆ, ವೆಂಕಟರಾವ್ ನೆಲವಾಡೆ, ಶಿವಾಜಿರಾವ್ ಭೊಸ್ಲೆ, ದಯಾನಂದರಾವ್ ಸೂರ್ಯವಂಶಿ, ಮಾಧವರಾವ್ ಪಾಟೀಲ, ಶಾಹುರಾಜ ಸಾಯಗಾಂವಕರ್, ಪಿ.ಎಸ್.ಬಿರಾದಾರ, ಸುಧಾಕರರಾವ್ ಜಾಧವ, ಶಾಮರಾವ್ ಕಾದೆಪುರೆ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತುಕಾರಾಮ ಮೋರೆ ನಿರೂಪಿಸಿದರು. ಪಿ.ಎಸ್.ಬಿರಾದಾರ ವಂದಿಸಿದರು.