ಮಂಗಳೂರು: ದೇಶವು ಕಳೆದ ಆರ್ಥಿಕ ವರ್ಷದಲ್ಲಿ 17.81 ಲಕ್ಷ ಮೆಟ್ರಿಕ್ ಟನ್ ಸಾಗರೋತ್ಪನ್ನಗಳ ರಫ್ತಿನ ಮೂಲಕ ಏರಿಕೆ ದಾಖಲಿಸಿದ್ದರೆ, ರಾಜ್ಯದ ಸಾಗರೋತ್ಪನ್ನಗಳ ರಫ್ತಿನಲ್ಲಿ ಈ ಬಾರಿ ಇಳಿಕೆ ಕಂಡಿದೆ.
2022-23ರಲ್ಲಿ ರಾಜ್ಯದಿಂದ 3,12,347.18 ಟನ್ ಸಾಗರೋತ್ಪನ್ನಗಳು ರಫ್ತು ಆಗಿದ್ದರೆ, 2023-24ರಲ್ಲಿ ಇದು 3,01,183.43ಕ್ಕೆ ಇಳಿಕೆಯಾಗಿದೆ.
ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಕರ್ನಾಟಕ ಘಟಕದ ಅಂಕಿಅಂಶಗಳ ಪ್ರಕಾರ, ಈ ಬಾರಿಯ ರಫ್ತಿನಲ್ಲಿ ಸುಮಾರು ಶೇ. 3.57 ಪ್ರಮಾಣದಷ್ಟು ಇಳಿಕೆ ಕಂಡುಬಂದಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗದಲ್ಲಿ ಮತ್ಸ್ಯಕ್ಷಾಮದ ಹಿನ್ನೆಲೆಯಲ್ಲಿ ಸಾಗರೋತ್ಪನ್ನಗಳಲ್ಲಿ ರಫ್ತು ಕಡಿಮೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬಾರಿ ರಾಜ್ಯದಿಂದ ರಫ್ತಾದ ಸಾಗರೋತ್ಪನ್ನಗಳ ಭಾರತೀಯ ಮೌಲ್ಯದಲ್ಲಿ ಮಾತ್ರ ಕೊಂಚ ಏರಿಕೆ ಕಾಣಲಾಗಿದೆ. ಕಳೆದ ವರ್ಷ ರಫ್ತಾದ ಸಾಗರೋತ್ಪನ್ನಗಳ ಮೌಲ್ಯ 4,73,722.95 ಲಕ್ಷ ರೂ.ಗಳಾಗಿದ್ದರೆ, 2023-24ನೇ ಸಾಲಿನಲ್ಲಿ ರಫ್ತಾದ ಸಾಗರೋತ್ಪನ್ನಗಳ ಮೌಲ್ಯ 4,78,504.60 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ.
ರಾಜ್ಯದ ಸಾಗರೋತ್ಪನ್ನಗಳ ರಫ್ತಿನಲ್ಲಿ 2ನೆ ಅತಿ ದೊಡ್ಡ ಸಾಗರೋತ್ಪನ್ನವಾದ ಶೀತಲೀಕರಿಸಿದ ಮೀನುಗಳ ರಫ್ತಿನ ಪ್ರಮಾಣದಲ್ಲಿ ಶೇ. 20.34ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಕರ್ನಾಟಕದಿಂದ 35,495.86 ಟನ್ ರಫ್ತಾಗಿದ್ದರೆ, ಈ ಬಾರಿ ಆ ಪ್ರಮಾಣ 27,241.99ಕ್ಕೆ ಕುಸಿದಿದೆ.
ಆದರೆ ಶೀತಲೀಕರಿಸಿದ ಸಿಗಡಿ ರಫ್ತಿನ ಪ್ರಮಾಣದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಳವಾಗಿದೆ. 2022-23ರಲ್ಲಿ 1,676.25 ಟನ್ ರಫ್ತಾಗಿದ್ದರೆ, ಈ ಬಾರಿ 2,431.70 ಟನ್ ಸಿಗಡಿ ರಾಜ್ಯದಿಂದ ರಫ್ತಾಗುವ ಮೂಲಕ ಶೇ. 45.07ರಷ್ಟು ಏರಿಕೆ ದಾಖಲಾಗಿದೆ. ಯುಎಸ್‌ಎ ಮತ್ತು ಚೀನದಲ್ಲಿ ಭಾರತದ ಶೀತಲೀಕರಿಸಿದ ಸಿಗಡಿಗೆ ಭಾರೀ ಬೇಡಿಕೆ ಇದ್ದ ಕಾರಣದಿಂದ ಇದರಲ್ಲಿ ಏರಿಕೆ ಆಗಿದೆ.