ಕುಂದಾಪುರ: ದೇವಲ್ಕುಂದ ಗ್ರಾಮದ ಮಲ್ಪೆ ಫ್ರೆಶ್ ಮರೇನ್ ಎಕ್ಸ್‌ಪೋರ್ಟ್ ಸಂಸ್ಥೆಯಿಂದ ಮೀನು ರಫ್ತು ಮಾಡಿಸಿ ಹಣ ಕೊಡಿಸದೇ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.
ಗುಜರಾತ್‌ನ ಇಲಿಯಾಸ್ ವಜೀರ್ ಬಾಯ್ ಎಂಬಾತ ಸೂಚಿಸಿದ ಕಂಪೆನಿಗೆ ಮೀನು ಕಳುಹಿಸುತ್ತಿದ್ದು, ಮೀನು ಖರೀದಿಸಿದ ಹಣವನ್ನು ಸಂಸ್ಥೆಯವರು ಫಿಶ್ ಫ್ಯಾಕ್ಟರಿಯ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದರು. ಇಲಿಯಾಸ್ ಚೀನಾದ ಪುಜಿಯನ್ ಪ್ರವಿನ್ಸ್ ಚೂಸನ್ ಇಂಪೋರ್ಟ್ ಆ್ಯಂಡ್ ಎಕ್ಸ್‌ಪೋರ್ಟ್ ಟ್ರೇಡ್ ಕಂಪೆನಿ ಲಿಮಿಟೆಡ್‌ಗೆ 4 ಕಂಟೇನರ್ ಮೀನು ಕಳುಹಿಸಲು ಸೂಚಿಸಿದಂತೆ 2021 ಸೆ. 10ರಂದು 1 ಲಕ್ಷದ 3 ಸಾವಿರದ 670 ಕೆ.ಜಿ. ಮೀನನ್ನು ಹಡಗಿನಲ್ಲಿ ಕಳುಹಿಸಲಾಗಿತ್ತು.
ಅದರ ಬೆಲೆ 1,33,68,712 ರೂ.ಗಳನ್ನು ಕೊಡಬೇಕಾಗಿದ್ದು, ಮೀನು ಖರೀದಿಸಿದ ಕಂಪೆನಿ ಫ್ಯಾಕ್ಟರಿಯ ಬ್ಯಾಂಕ್ ಅಕೌಂಟ್‌ಗೆ 53,91,036 ರೂ. ಹಾಗೂ 64,62,840 ರೂ.ಗಳನ್ನು ಎರಡು ಕಂತುಗಳಲ್ಲಿ ಪಾವತಿಸಿದ್ದರು.
ಬಾಕಿ ಉಳಿದ 16,65,594 ರೂ.ಗಳನ್ನು ಕೊಡದೇ ಇದ್ದಾಗ ಆರೋಪಿ ಇಲಿಯಾಸ್ ಸತಾಯಿಸಿ ಇದುವರೆಗೂ ಕೊಟ್ಟಿಲ್ಲ. ಫಿಶ್ ಖರೀದಿಸಿದ ಚೀನಾದ ಸಂಸ್ಥೆಗೂ, ಫ್ಯಾಕ್ಟರಿಯವರಿಗೂ ನೇರ ಸಂಪರ್ಕ ಇಲ್ಲ. ಆರೋಪಿಯಲ್ಲಿ ಚೀನಾದ ಸಂಸ್ಥೆಯ ಸಂಪರ್ಕ ಮಾಡಿಕೊಡಲು ಕೇಳಿದಾಗಲೂ ಒಪ್ಪಿಲ್ಲ. ಈ ಬಗ್ಗೆ ಇಲಿಯಾಸ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ನಂಬಿಸಿ ವಂಚಿಸಿದ ಪ್ರಕರಣ ದಾಖಲಾಗಿದೆ.