Advertisement
ಶಿವಮೊಗ್ಗ ಬಳಿಯ ಹುಣಸೋಡು ಬಳಿಕಲ್ಲುಕೋರೆಯಲ್ಲಿ ನಿಲ್ಲಿಸಿದ್ದ ಸ್ಫೋಟಕ ತುಂಬಿದ ಬೊಲೆರೋ ಸ್ಫೋಟಗೊಂಡಿರುವುದು ಖಚಿತವಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಮೃತರನ್ನು ಭದ್ರಾವತಿಯ ಪ್ರವೀಣ್, ಮಂಜುನಾಥ್, ಪವನ್, ಜಾವಿದ್ ಎಂದು ಅಂದಾಜಿಸಲಾಗಿದೆ. ಘಟನೆ ವೇಳೆ 8 ಮಂದಿ ಇದ್ದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.
Related Articles
Advertisement
ಸ್ಫೋಟ ಪ್ರಕರಣ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಫೋಟದ ಸ್ಥಳದಿಂದ 100 ಕಿ.ಮೀ. ದೂರದವರೆಗೂ ಕಂಪನ ದಾಖಲಾಗಿದ್ದು, ಜಿಲೆಟಿನ್‌ಗಿಂತಲೂ ಸುಧಾರಿತವಾದ, ಹೆಚ್ಚು ಶಕ್ತಿಯುಂಟು ಮಾಡುವ ಜೆಲ್ ಮಾದರಿಯ ಬೂಸ್ಟರ್‌ಗಳನ್ನು ಬಳಸಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಈವರೆಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಜಿಲೆಟಿನ್, ಡಿಟೋನೇಟರ್‌ಗಳಿಗಿಂತಲೂ ಸುಧಾರಿತ ಬೂಸ್ಟರ್‌ಗಳು ಹೆಚ್ಚು ಪರಿಣಾಮಕಾರಿ ಹಾಗೂ ಶಕ್ತಿಶಾಲಿಯಾಗಿದ್ದು ಕಡಿಮೆ ಶಕ್ತಿಯಿಂದಲೂ ಹೊತ್ತಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಇದೇ ಈ ಭಾರೀ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
5 ಲಕ್ಷ ರೂ. ಪರಿಹಾರ :
ಅನಾಹುತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಉನ್ನತ ಮಟ್ಟದ ತನಿಖೆಗೂ ಆದೇಶಿಸಲಾಗಿದೆ. ಸಿಎಂ ಯಡಿಯೂರಪ್ಪ ಅಧಿಕಾರಿ ಗಳೊಂದಿಗೆ ಸಂಪರ್ಕದಲ್ಲಿದ್ದು, ರಕ್ಷಣ ಕಾರ್ಯಾಚರಣೆಗೆ ಸೂಚಿಸಿದ್ದಾರೆ.
ಮೂವರು ವಶಕ್ಕೆ :
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಕಲ್ಲು ಕೋರೆ ಮಾಲಕ ಸುಧಾಕರ್ ಸಹಿತ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ.
ಸ್ಫೋಟಗೊಂಡದ್ದು ಹೇಗೆ? :
ಈ ಭಾಗದ ಕೋರೆಗಳಲ್ಲಿ ಸ್ಫೋಟಕ್ಕಾಗಿ ಜಿಲೆಟಿನ್ ಕಡ್ಡಿಗಳನ್ನು ಪೂರೈಸಲು ತಮಿಳುನಾಡಿನಿಂದ ಈ ಜೀಪ್ ಬಂದಿತ್ತು. ಇದರಲ್ಲಿ 50ಕ್ಕೂ ಹೆಚ್ಚು ಬಾಕ್ಸ್‌ಗಳಷ್ಟು ಜಿಲೆಟಿನ್ ಕಡ್ಡಿಗಳಿದ್ದವು ಎನ್ನಲಾಗಿದೆ. ರಾತ್ರಿ ಕೋರೆಗಳಿಗೆ ಅಗತ್ಯವಿರುವ ಸ್ಫೋಟಕ ಒಯ್ಯಬೇಕಿತ್ತು. ಅದರ ನಡುವೆ ಸ್ಫೋಟ ಸಂಭವಿಸಿದೆ.
ಅಮೋನಿಯಂ ನೈಟ್ರೇಟ್? :
ಜೀಪಿನಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಇತರ ಸ್ಫೋಟಕ ವಸ್ತುಗಳೂ ಇದ್ದವು ಎಂದೂ ಹೇಳಲಾಗಿದೆ.
ಮೋದಿ, ರಾಹುಲ್ ಸಂತಾಪ :
ಸ್ಫೋಟದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಸಂತಾಪ ಸೂಚಿಸಿದ್ದಾರೆ.