ಮುಂಬಯಿ : ಕೋಲ್ಕತ-ಮುಂಬಯಿ ಶಾಲಿಮಾರ್ ಎಕ್ಸ್‌ಪ್ರೆಸ್ ರೈಲು ಇಂದು ಬುಧವಾರ ಇಲ್ಲಿಗೆ ಆಗಮಿಸಿದಾಗ ಅದರೊಳಗೆ ಸ್ಫೋಟಕ ರೀತಿ ವಸ್ತು ಪತ್ತೆಯಾಯಿತು ಎಂದು ರೈಲ್ವೇ ಮತ್ತು ನಗರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲನ್ನು ಕುರ್ಲಾ ಕಾರ್ ಶೆಡ್ ನಲ್ಲಿ ಸ್ವಚ್ಚಗೊಳಿಸುತ್ತಿದ್ದಾಗ ಏಳು ಪ್ಲಾಸ್ಟಿಕ್ ಪೈಪ್ ಗಳು ಕಂಡು ಬಂದವು. ಈ ಪ್ಲಾಸ್ಟಿಕ್ ಪೈಪೊಳಗೆ ಸುಡುಮದ್ದು ಪುಡಿಯಂತಹ ವಸ್ತು ತುಂಬಿತ್ತು. ಇವುಗಳನ್ನು ವೈರ್ ಮೂಲಕ ಬ್ಯಾಟರಿಗೆ ಜೋಡಿಸಲಾಗಿತ್ತು ಎಂದು ಮುಂಬಯಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ಲಾಸ್ಟಿಕ್ ಪೈಪುಗಳ ಜತೆಗೆ ಮೊಬೈಲ್ ನಂಬರ್ ಮತ್ತು ಅಪರಿಚಿತ ವ್ಯಕ್ತಿಯೊಬ್ಬನ ಫೋ ಟೋ ಇರುವ ಪತ್ರವೊಂದು ಪತ್ತೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ತಿಲಕನಗರ ಪೊಲೀಸ್ ಠಾಣೆ ಹಿರಿಯ ಇನ್ಸ್‌ಪೆಕ್ಟರ್ ಸುಶೀಲ್ ಕಾಂಬ್ಳೆ ತಿಳಿಸಿದ್ದಾರೆ.
ನಾವು ಪತ್ರವನ್ನು ಸೂಕ್ಷ್ಮ ವಾಗಿ ಪರಿಶೀಲಿಸುತ್ತಿದ್ದು ಅದರಲ್ಲಿರುವ ಮೊಬೈಲ್ ನಂಬರ್ ಸಂಪರ್ಕಿಸುವ ಯತ್ನ ಮಾಡುತ್ತಿದ್ದೇವೆ ಎಂದವರು ಹೇಳಿದರು.
ಜಿಲೆಟಿನ್ ಕಡ್ಡಿಗಳಂತೆ ಕಂಡು ಬಂದಿದ್ದ ಶಂಕಿತ ವಸ್ತುಗಳು ಅನಂತರ ಪ್ಲಾಸ್ಟಿಕ್ ಪೈಪುಗಳೆಂಬುದು ಖಚಿತವಾಯಿತು ಎಂದು ಕಾಂಬ್ಳೆ ಹೇಳಿದರು.
ವಶಪಡಿಸಿಕೊಳ್ಳಲಾಗಿರುವ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದವರು ಹೇಳಿದರು.
ಶಾಲಿಮಾರ್ ಎಕ್ಸ್‌ಪ್ರೆಸ್ ಇಂದು ಬುಧವಾರ ಬೆಳಗ್ಗೆ 7.30ಕ್ಕೆ ಲೋಕಮಾನ್ಯ ತಿಲಕ ಟರ್ಮಿನಸ್‌ಗೆ ಆಗಮಿಸಿತ್ತು.