ಶಿವಮೊಗ್ಗ: ವಿಮಾನ ನಿಲ್ದಾಣದಲ್ಲಿದ್ದ ಕಲ್ಲುಗಣಿ ಸ್ಫೋಟಿಸಲು ತಂದಿದ್ದ ಸ್ಫೋಟಕಗಳನ್ನು ಮಾಲೀಕ ಸ್ಥಳದಲ್ಲಿಯೇ ಬಿಟ್ಟು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಣಸೋಡು ಸ್ಫೋಟದಲ್ಲಿ ಬಳಕೆಯಾಗಿದ್ದಷ್ಟೇ ಪ್ರಮಾಣದ ಸ್ಫೋಟಕಗಳು ವಾಹನದಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿತ್ತು. ಎರಡು ವಾಹನಗಳಲ್ಲಿ 904 ಕೆಜಿ ಜಿಲೆಟಿನ್ ಕಡ್ಡಿ, 3267 ಡಿಟೊನೇಟರ್‌ಗಳು ಸೇರಿದಂತೆ ಹಲವಾರು ವಸ್ತುಗಳು ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮದಿಂದ ಆತಂಕ ದೂರವಾಗಿದೆ.
ಟಾಟಾ 407 ವಾಹನದಲ್ಲಿ 36 ಬಾಕ್ಸ್ ಜಿಲೆಟಿನ್ ಕಡ್ಡಿಗಳು, ಪಿಕ್ ಅಪ್ ವಾಹನದಲ್ಲಿ 3267 ಎಲೆಕ್ಟ್ರಾನಿಕ್ ಡಿಟೊನೇಟರ್‌ಗಳು, 9 ಮೀಟರ್‌ನ 79 ಎಕ್ಸೆಲ್‌ಗಳು, 3 ಮೀಟರ್‌ನ 105 ಎಕ್ಸೆಲ್‌ಗಳು ಪತ್ತೆಯಾಗಿವೆ. ಶನಿವಾರ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕರೆಸಿ ಸ್ಫೋಟಕಗಳನ್ನು ಸುರಕ್ಷಿತವಾಗಿ ಇಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗಾಗಿ ಸ್ಥಳದಲ್ಲೇ ಕ್ವಾರಿ ಒದಗಿಸಲಾಗಿತ್ತು. ಇಲ್ಲಿಯೇ ಬಂಡೆ ಸ್ಫೋಟಿಸಿ, ಕಾಮಗಾರಿಗೆ ಜೆಲ್ಲಿ ಬಳಕೆ ಮಾಡಲಾಗುತಿತ್ತು. ಇದಕ್ಕೆ ಸ್ಫೋಟಕ ಪೂರೈಕೆ ಮಾಡುವಂತೆ ಚಿಕ್ಕಬಳ್ಳಾಪುರದ ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಕಂಪನಿಯವರು ಸ್ಫೋಟಕಗಳನ್ನು ತಂದಿದ್ದರು. ಆದರೆ ಎರಡು ವಾಹನಗಳಲ್ಲಿ ತಂದ ಸ್ಫೋಟಕಗಳನ್ನು ಹಾಗೆ ಬಿಟ್ಟು ಹೋಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು.
ಬಿಟ್ಟು ಹೋಗಿದ್ದೇಕೆ?: ಜಿಲ್ಲೆಯ ಹುಣಸೋಡು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿದ ಬಳಿಕ ಸ್ಫೋಟಕ ಬಳಕೆಗೆ ಕಡಿವಾಣ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಫೋಟಕ ಪೂರೈಕೆ ಕಂಪನಿಯವರು ಇದರ ಬಳಕೆ ಬಗ್ಗೆ ಜಿಲ್ಲಾಧಿ ಕಾರಿ ಅನುಮತಿ ಕೇಳಿದ್ದರು. ಮಂಗಳೂರಿನಲ್ಲಿರುವ ಪೆಟ್ರೋಲಿಯಂ ಮತ್ತು ಎಕ್ಸ್‌ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್‌ನಿಂದ ಅನುಮತಿ ಪಡೆಯುವಂತೆ ಡಿಸಿ ಸೂಚಿಸಿದ್ದರು. ಅಲ್ಲಿ ಅನುಮತಿ ಕೇಳಿದಾಗ ಸ್ಫೋಟಕ ಪೂರೈಕೆ ಕಂಪನಿಯವರು ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಸ್ಫೋಟಕಗಳನ್ನು 150 ಕಿಮೀ ಮಾತ್ರ ಸಾಗಣೆ ಮಾಡಬಹುದು. ಆದರೆ ಇಲ್ಲಿ ಚಿಕ್ಕಬಳ್ಳಾಪುರದಿಂದ ಶಿವಮೊಗ್ಗದವರೆಗೆ ಸ್ಫೋಟಕಗಳನ್ನು ಪೂರೈಕೆ ಮಾಡಿ ನಿಯಮ ಉಲ್ಲಂಘಿಸಲಾಗಿತ್ತು. ಹೀಗಾಗಿ ಇದರ ಬಳಕೆಗೆ ಅವಕಾಶವಿಲ್ಲ ಎಂದು ಮಂಗಳೂರಿನ ಪೆಟ್ರೋಲಿಯಂ ಮತ್ತು ಎಕ್ಸ್‌ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಷನ್ ತಿಳಿಸಿತ್ತು.
ಈ ಗೊಂದಲದಿಂದ ಸ್ಫೋಟಕವನ್ನು ಸ್ಥಳದಲ್ಲಿಯೇ ಬಿಟ್ಟು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ವಾಹನದಲ್ಲಿ ಸ್ಫೋಟಕ ವಸ್ತು ಇರುವ ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್ ನೇತೃತ್ವದ ತಂಡ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಅಲ್ಲದೆ ನಿಯಮ ಉಲ್ಲಂಘಿಸಿದ ಮತ್ತು ಸ್ಫೋಟಕ ವಸ್ತುಗಳನ್ನು ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಸಂಬಂಧ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.