ಬೆಂಗಳೂರು: ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ನಿವಾಸಗಳ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಆಫ್ರಿಕನ್ ದೇಶಗಳ ಪ್ರಜೆಗಳಿಗೆ ಶಾಕ್ ನೀಡಿದ್ದಾರೆ.
ಸಿಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಆಫ್ರಿಕನ್ ಪ್ರಜೆಗಳ ಅಕ್ರಮ ವಾಸ, ಖೋಟಾ ನೋಟು ವ್ಯವಹಾರ ಸೇರಿ ಹಲವು ಅಕ್ರಮಗಳು ಬಯಲಿಗೆ ಬಂದಿವೆ. ಯಾವುದೇ ದಾಖಲೆಗಳು ಇಲ್ಲದೆ ವೀಸಾ ಅವಧಿ ಮುಕ್ತಾಯವಾದ ಮೇಲೂ ಅನಧಿಕೃತವಾಗಿ ವಾಸವಿದ್ದ 20 ಆಫ್ರಿಕನ್ ಪ್ರಜೆಗಳು ವಶಕ್ಕೆ ಪಡೆದಿದ್ದಾರೆ. ಜತೆಗೆ, ಎರಡು ಸಾವಿರ, ಐನೂರು ರೂ.ಮುಖಬೆಲೆಯ ಖೋಟಾ ನೋಟುಗಳು, ಅಮೆರಿಕನ್ ಡಾಲರ್, ಲಂಡನ್ ಪೌಂಡ್ ನಕಲಿ ನೋಟುಗಳು ಸಹ ಪತ್ತೆಯಾಗಿವೆ.
ಈ ಪೈಕಿ ಐನೂರು ಮುಖಬೆಲೆಯ 85, ಎರಡು ಸಾವಿರ ಮುಖಬೆಲೆಯ 45, ನೂರು ಡಾಲರ್ ಮೌಲ್ಯದ 340 ನೋಟುಗಳು, 95 ಪೌಂಡ್ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳಿಂದ ಲ್ಯಾಪ್ ಟಾಪ್, ಮೊಬೈಲ್ ಗಳನ್ನು ಸಹ ಜಪ್ತಿ ಮಾಡಲಾಗಿದ್ದು. ಸೈಬರ್ ಅಪರಾಧ ಕೃತ್ಯಗಳಲ್ಲಿಯೂ ಭಾಗಿಯಾಗಿರುವ ಶಂಕೆಯಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
120 ಪೊಲೀಸರ ತಂಡ ಏಕಕಾಲಕ್ಕೆ ದಾಳಿ!: ಆಫ್ರಿಕನ್ ಪ್ರಜೆಗಳು ಅಕ್ರಮಗಳಲ್ಲಿ ಭಾಗಿಯಾಗಿದ್ದು ಸ್ಥಳೀಯರಿಗೂ ತೊಂದರೆ ನೀಡುತ್ತಾರೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ಮಂಗಳವಾರ ಮುಂಜಾನೆ ಸಿಸಿಬಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಏಕಕಾಲಕ್ಕೆ 120 ಮಂದಿ ಪೊಲೀಸ್ ಸಿಬ್ಬಂದಿ, ಹೆಣ್ಣೂರು, ಕೊತ್ತನೂರು, ಬಾಗಲೂರು ವ್ಯಾಪ್ತಿಯಲ್ಲಿ ವಾಸವಿದ್ದ ಆಫ್ರಿಕನ್ ಪ್ರಜೆಗಳ 85ಕ್ಕೂ ಅಧಿಕ ನಿವಾಸಗಳ ಮೇಲೆ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಯಿತು.ಈ ವೇಳೆ ಖೋಟಾನೋಟು ಗಳು ಪತ್ತೆಯಾಗಿವೆ. ಅನಧಿಕೃತವಾಗಿ ವಾಸವಿರುವುದು ಗೊತ್ತಾಯಿತು. ಸದ್ಯ, ಎಂಟಕ್ಕೂ ಅಧಿಕ ಮಂದಿ ಯುವತಿಯರು ಸೇರಿ 20 ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ ವೀಸಾ ಅವಧಿ ಮುಗಿದರೂ ವಾಸವಿದ್ದ 17 ಮಂದಿ ವಿರುದ್ಧ ವಿದೇಶಿಯರ ಕಾಯಿದೆ ಉಲ್ಲಂಘನೆ ಆರೋಪ ಹಾಗೂ ಮೂವರ ವಿರುದ್ಧ ಖೋಟಾನೋಟು ದಂಧೆ ಸಂಬಂಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.