Advertisement

ದೇವೇಗೌಡರ ಎದುರೇ ಸ್ಫೋಟ

01:48 AM Jul 01, 2019 | Team Udayavani |

ಬೆಂಗಳೂರು: ‘ಶಾಸಕರಿಗೆ ಮಾತ್ರ ನಿಗಮ-ಮಂಡಳಿಯಲ್ಲಿ ಸ್ಥಾನವೇಕೆ? ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಗೆ ಏಕೆ ಮನ್ನಣೆ ಇಲ್ಲ’? ಹೀಗೆಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದು ಕಾರ್ಯಕರ್ತರು.

Advertisement

ಚುನಾವಣೆಯಲ್ಲಿ ಕೇವಲ 1 ಸ್ಥಾನ ಗಳಿಸಿ ಹಿನ್ನಡೆ ಅನುಭವಿಸಿದ ಬಳಿಕ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಇರಬೇಕು-ಇರಬಾರದು ಎಂಬ ಪರ-ವಿರೋಧ ಮಾತುಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಭಾನುವಾರ ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ಶಾಸಕರಿಗೆ ಏಕೆ ಮಾನ್ಯತೆ, ಪಕ್ಷಕ್ಕಾಗಿ ದುಡಿದ ತಳಮಟ್ಟದವರಿಗೆ ಏಕೆ ಮಾನ್ಯತೆ ಇಲ್ಲವೆಂದು ನೇರವಾಗಿ ಪ್ರಶ್ನೆ ಮಾಡಿದಾಗ ತಬ್ಬಿಬ್ಟಾಗುವ ಸರದಿ ದೇವೇಗೌಡರದ್ದು.

‘ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಯಾಕೆ ಅಧಿಕಾರ ಕೊಟ್ಟಿಲ್ಲ. ಶಾಸಕರಿಗೆ ಮಾತ್ರ ಅಧ್ಯಕ್ಷಗಿರಿಯೇ, ನಾವು ಪಕ್ಷಕ್ಕೆ ದುಡಿದಿಲ್ಲವೇ, ಪಕ್ಷದ ವತಿಯಿಂದಲೇ ನಿಗಮ-ಮಂಡಳಿಗೆ ನೇಮಕಗೊಂಡವರು ಎಷ್ಟರ ಮಟ್ಟಿಗೆ ದುಡಿದಿದ್ದಾರೆ? ಪಕ್ಷಕ್ಕೆ ದುಡಿದವರನ್ನು ಬಿಟ್ಟು ಬೇಕಾದವರನ್ನು ಯಾಕೆ ನೇಮಕ ಮಾಡ್ತೀರಿ. ಅವರೆಲ್ಲಾ ಯಾರು ಎಂಬುದೇ ಗೊತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ, ಶಾಸಕ ಗೋಪಾಲಯ್ಯ ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಂದಾದರು. ಆದರೆ ಆ ಮುಖಂಡರ ಪ್ರಯತ್ನ ಫ‌ಲ ಬೀರಲಿಲ್ಲ. ‘ಅಧಿಕಾರ ಬಂದಾಗ ನಮ್ಮ ನೆನಪು ಇರುವುದಿಲ್ಲ. ಸಂಕಷ್ಟ ಬಂದಾಗ ಮಾತ್ರ ನಾವು ಬೇಕಾ’ ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ತಬ್ಬಿಬ್ಟಾದರು: ಈ ಸಂದರ್ಭದಲ್ಲಿ ದೇವೇಗೌಡರು ತಬ್ಬಿಬ್ಟಾದರು. ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ನಿಗಮ-ಮಂಡಳಿ ನೇಮಕದಲ್ಲಿ ಏನಾದರೂ ವ್ಯತ್ಯಾಸ ಆಗಿದ್ದರೆ ವಿಚಾರಿಸಿ ಸರಿಪಡಿಸುತ್ತೇನೆ. ಕಾರ್ಯಕರ್ತರಿಗೆ ಅವಕಾಶ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು. ಕಾರ್ಯಕರ್ತರ ಗದ್ದಲ ನಿಲ್ಲದಿದ್ದಾಗ ಅರ್ಧಕ್ಕೆ ಸಭೆ ಮೊಟಕುಗೊಳಿಸಿದರು. ನಂತರ ಕಾರ್ಯಕರ್ತರು ಕುಪೇಂದ್ರರೆಡ್ಡಿ ಅವರನ್ನು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡು, ಕಾರ್ಯಕರ್ತರಿಗೆ ಅಧಿಕಾರ ಕೊಡಿಸಿ ಎಂದು ಪಟ್ಟು ಹಿಡಿದರು.

Advertisement

ಧಕ್ಕೆಯಾಗದಂತೆ ಪಾದಯಾತ್ರೆ: ಇದಕ್ಕೂ ಮುನ್ನ ಮಾತನಾಡಿದ್ದ ದೇವೇಗೌಡರು, ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗದಂತೆ ಜೆಡಿಎಸ್‌ ಪಾದಯಾತ್ರೆ ನಡೆಯಲಿದೆ. ಅದರಿಂದ ಸರ್ಕಾರಕ್ಕೆ ತೊಂದರೆಯಾಗಲಿದೆ ಎಂಬ ಭಾವನೆ ಬರಲು ನಾನು ಬಿಡುವುದಿಲ್ಲ. ನಾನೇ ಆ ಬಗ್ಗೆ ಜಾಗ್ರತೆ ವಹಿಸುವೆ. ಮಧ್ಯಂತರ ಚುನಾವಣೆಗಾಗಿ ಪಾದಯಾತ್ರೆ ಎಂಬುದು ಸುಳ್ಳು. ನಮ್ಮ ಪಕ್ಷ ಸಂಘಟನೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿಯವರು ಏನು ಬೇಕಾದರೂ ತಿಳಿದುಕೊಳ್ಳಲಿ ಎಂದರು.

ಅನುಮತಿ ಬೇಕಾ?: ಮುಖ್ಯಮಂತ್ರಿ ಅಮೆರಿಕ ಪ್ರವಾಸದ ಬಗ್ಗೆ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಯವರು ನಮ್ಮ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ವಂತ ದುಡ್ಡಿನಲ್ಲಿ ಹೋಗಿದ್ದಾರೆ. ಅದಕ್ಕೂ ಯಡಿಯೂರಪ್ಪ, ಈಶ್ವರಪ್ಪ ಅನುಮತಿ ಪಡೆಯಬೇಕಿತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಅನಗತ್ಯವಾಗಿ ಸಮ್ಮಿಶ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ರೈತರ ಸಾಲ ಮನ್ನಾ ಸೇರಿ ಜನಪರ ಯೋಜನೆಗಳನ್ನು ಸರ್ಕಾರ ಕೊಟ್ಟಿದೆ. ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿದೆ. ಆದರೂ ಯಾವುದೇ ಅಂಕಿ-ಅಂಶ, ಆಧಾರ ರಹಿತ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ದಂಡನಾಯಕರೇ ಸೋತಿದ್ದಾರೆ: ಅಶೋಕ

ಮೈಸೂರು: ಜೆಡಿಎಸ್‌ನ ಪ್ರಧಾನ ದಂಡನಾಯಕರೇ ಸೋತಿರುವುದರಿಂದ ಆ ಪಕ್ಷಕ್ಕೆ ದಿಕ್ಕು ದೆಸೆ ಇಲ್ಲದಂತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ ಟೀಕಿಸಿದ್ದಾರೆ. ದೇವೇಗೌಡರು 50 ವರ್ಷಗಳ ಹಿಂದಿನ ರಾಜಕೀಯ ಪಟ್ಟುಗಳನ್ನೇ ಹಾಕುತ್ತಿದ್ದಾರೆ. ಅದೆಲ್ಲಾ ಈಗ ಚಲಾವಣೆಯಲ್ಲಿ ಇಲ್ಲ. ಹೀಗಾಗಿ ಎಲ್ಲಾ ಕಡೆ ಸೋತಿದ್ದಾರೆ ಎಂದು ಕಟಕಿಯಾಡಿದರು. ಜೆಡಿಎಸ್‌ ಪಾದಯಾತ್ರೆ ಗಮನಿಸಿದರೆ ಕೊಳ್ಳೆ ಹೊಡೆದುಕೊಂಡು ಹೋದ ಮೇಲೆ ಅದೇನೋ ಬಾಗಿಲು ಹಾಕಿದಂತೆ ಎಂಬಂತಾಗಿದೆ. ಜತೆಗೆ ಜೆಡಿಎಸ್‌ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಮೂವರಿಗೆ ಮಾತ್ರ: ಮೈತ್ರಿ ಸರ್ಕಾರ ಅಗತ್ಯವಿರುವುದು ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌ ಹಾಗೂ ಪರಮೇಶ್ವರ್‌ರಿಗೆ ಮಾತ್ರ. ಈ ಮೂರು ಜನ ಬಿಟ್ಟು ಜೆಡಿಎಸ್‌, ಕಾಂಗ್ರೆಸ್‌ನವರಿಗೆ ಈ ಮೈತ್ರಿ ಸರ್ಕಾರ ಬೇಕಿಲ್ಲ. ಈ ಮೂವರು ಅಧಿಕಾರದ ಆಸೆಗಾಗಿ ಅಂಟಿಕೊಂಡು ಕುಳಿತಿದ್ದಾರೆ ಎಂದು ದೂರಿದರು.

15 ಮಂದಿಗೆ ಹುದ್ದೆ

ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ಗೆ ಮೊದಲ ಹಂತದಲ್ಲಿ ನಿಗಮ -ಮಂಡಳಿ ಅಧ್ಯಕ್ಷ – ಉಪಾಧ್ಯಕ್ಷ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಸಂಸದೀಯ ಕಾರ್ಯದರ್ಶಿ ಸೇರಿದಂತೆ 15 ಹುದ್ದೆಗಳು ದೊರೆತಿವೆ. ಆ ಪೈಕಿ ಮಾಜಿ ಶಾಸಕ ಕೋನರೆಡ್ಡಿ, ಪಕ್ಷದ ಮುಖಂಡರಾದ ಜಫ್ರುಲ್ಲಾಖಾನ್‌, ಮೊಯಿದ್ದೀನ್‌ ಅಲ್ತಾಫ್ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲಾ ಹುದ್ದೆಗಳು ಶಾಸಕರಿಗೆ ನೀಡಲಾಗಿದೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅತಂತ್ರ ವಾಗಿದೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ. ರಾಜಕೀಯ ಪಕ್ಷವಾಗಿ ಬಿಜೆಪಿ ಯಾವತ್ತೂ ಚುನಾವಣೆಗೆ ಸಿದ್ಧವಾಗಿಯೇ ಇದೆ. • ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕಿ
Advertisement

Udayavani is now on Telegram. Click here to join our channel and stay updated with the latest news.

Next