Advertisement

ಮಂಗಳೂರಿನಲ್ಲಿ ಹೂಡಿಕೆಗೆ ಇರುವ ಹೊಸ ಸಾಧ್ಯತೆಗಳತ್ತ ಬೆಳಕು

10:47 PM Dec 14, 2019 | mahesh |

ಕರ್ನಾಟಕದ ಕರಾವಳಿ ವಲಯದಲ್ಲಿ ಹೊಸ ಹೂಡಿಕೆಗಳಿಗೆ, ಅದರಲ್ಲೂ ಸಣ್ಣ ಹಾಗೂ ಮಧ್ಯಮ ವಲಯದ ಉದ್ದಿಮೆಗಳಿಗೆ ಇರುವ ಅವಕಾಶಗಳ ಬಗ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದನ್ನು ಕೈಗೊಳ್ಳಲಾಗಿದೆ. ಇದು ಹಲವಾರು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು.

Advertisement

ಮಂಗಳೂರು ಹೂಡಿಕೆಗಳಿಗೆ ವಿಪುಲ ಅವಕಾಶಗಳಿರುವ ನಗರ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ನಗರದ ಭೌಗೋಳಿಕತೆ, ಪೂರಕ ಅವಕಾಶಗಳು ಮತ್ತು ಮೂಲಸೌಕರ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹಿಂದೆ ಕೆಲವು ಕೈಗಾರಿಕೆಗಳನ್ನು ಇಲ್ಲಿಗೆ ಪ್ರಸ್ತಾವನೆ ಮಾಡಲಾಗಿತ್ತು. ಇದೀಗ ಈ ಪ್ರಸ್ತಾವನೆಯ ಹೊರತಾಗಿ ಬೆಲ್ಜಿಯಂನ ಟ್ರೇಡ್‌ ಕಮಿಷನ್‌ ಆಫ್‌ ಫ್ಲೆಂಡರ್ ಮಂಗಳೂರಿನಲ್ಲಿ ಹೂಡಿಕೆಗೆ ಇರುವ ಕೆಲವು ಹೊಸ ಸಾಧ್ಯತೆಗಳನ್ನು ಗುರುತಿಸಿದೆ. ಈ ಕುರಿತಂತೆ ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟ (ಕನೆಡರೇಶನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ) ಟ್ರೇಡ್‌ ಕಮಿಷನ್‌ ಆಫ್‌ ಫ್ಲೆಂಡರ್ ಸಂಯೋಜನೆಯಲ್ಲಿ ಮಂಗಳೂರಿನ ಉದ್ಯಮಿಗಳ ಜತೆ ಇತ್ತೀಚೆಗೆ ಸಮಾಲೋಚನ ಸಭೆಯನ್ನು ಆಯೋಜಿಸಿ ಹೊಸ ಸಾಧ್ಯತೆಗಳಿಗೆ ಇರುವ ಅವಕಾಶಗಳತ್ತ ಬೆಳಕು ಚೆಲ್ಲಿದೆ. ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ವಲಯದಲ್ಲಿ ಹೊಸ ಹೂಡಿಕೆಗಳಿಗೆ, ಅದರಲ್ಲೂ ಸಣ್ಣ ಹಾಗೂ ಮಧ್ಯಮ ವಲಯದ ಉದ್ದಿಮೆಗಳಿಗೆ ಇರುವ ಅವಕಾಶಗಳ ಬಗ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದನ್ನು ಕೈಗೊಳ್ಳಲಾಗಿದೆ.

ಟ್ರೇಡ್‌ ಕಮಿಷನ್‌ ಆಫ್‌ ಫ್ಲೆಂಡರ್ ಬೆಲ್ಜಿಯಂ ಸರಕಾರದ ಒಂದು ಸಂಸ್ಥೆ. ಇದು ವಿಶ್ವಾದ್ಯಂತ ವಿವಿಧ ರಾಷ್ಟ್ರಗಳಿಗೆ ತನ್ನ ನಿಯೋಗವನ್ನು ಕಳುಹಿಸಿ ಅಲ್ಲಿ ಇರುವ ಹೂಡಿಕೆ ಅವಕಾಶ, ತಜ್ಞತೆಯ ವಿನಿಮಯ, ಒಡಂಬಡಿಕೆಗಳ ಬಗ್ಗೆ ಪ್ರಾದೇಶಿಕವಾಗಿ ಕೈಗಾರಿಕೋದ್ಯಮಿಗಳ ಜತೆ ವಿಚಾರ ವಿನಿಮಯ ನಡೆಸುತ್ತದೆ.
ಟ್ರೇಡ್‌ ಕಮಿಷನ್‌ ಆಫ್‌ ಫ್ಲೆಂಡರ್ ಬೆಲ್ಜಿಯಂ ಮಂಗಳೂರಿಗೆ ಭೇಟಿ ನೀಡಿ ಇಲ್ಲಿನ ಉದ್ದಿಮೆದಾರರ ಜತೆಗೆ ಸಂವಾದ ನಡೆಸಿದೆ. ಫ್ಲೆಂಡರ್ ಟ್ರೇಡ್‌ ಆ್ಯಂಡ್‌ ಇನ್ವೆಸ್ಟ್‌ಮೆಂಟ್‌ ಕಮಿಷನರ್‌ ಜಯಂತ ನಾಡಿಗೇರ್‌ ಅವರು ಕರಾವಳಿ ಕರ್ನಾಟಕದಲ್ಲಿರುವ ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಮಂಗಳೂರಿನಲ್ಲಿ 3ಡಿ ಪ್ರಿಂಟಿಂಗ್‌, ಕೃತಕ ಬುದ್ಧಿಮತ್ತೆ, ಯಂತ್ರೋಪಕರಣಗಳ ತಯಾರಿಗಳ ಬಗ್ಗೆ ಪರಿಣತಿಯನ್ನು ಒದಗಿಸುವುದರ ಜತೆಗೆ ಯರೋಪಿಯನ್‌ ಮಾರುಕಟ್ಟೆಯಲ್ಲಿ ಇರುವ ರಫ್ತು ಅವಕಾಶಗಳ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಪೂರಕವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಟ್ರೇಡ್‌ ಕಮಿಷನ್‌ ಆಫ್‌ ಫ್ಲೆಂಡರ್ ಸಿದ್ಧವಿರುವುದಾಗಿ ಜಯಂತ್‌ ನಾಡಿಗೇರ್‌ ತಿಳಿಸಿದ್ದಾರೆ. ಕರ್ನಾಟಕದ ಕರಾವಳಿ ಪ್ರದೇಶಗಳಿಗೆ ನೆರವಾಗುವ ನಿಟ್ಟಿನಲ್ಲಿ ಕಮಿಷನ್‌ ಉತ್ಪನ್ನಗಳು, ತಂತ್ರಜ್ಞಾನ ಹಾಗೂ ಸೇವೆಗಳ ಬಗ್ಗೆ ಜಿಎಪಿ ವಿಶ್ಲೇಷಣೆ ನಡೆಸುವುದಾಗಿಯೂ ತಿಳಿಸಿದೆ.

ಈಗಾಗಲೇ ಗುರುತಿಸಿರುವ ಅವಕಾಶಗಳ ಹೊರತಾಗಿ ಫ್ಲೆಂಡರ್ ಕಮಿಷನ್‌ ಹೊಸದಾಗಿ ಕೆಲವು ಅವಕಾಶಗಳತ್ತ ಗಮನ ಸೆಳೆದಿದೆ. ಮಂಗಳೂರಿನಲ್ಲಿ ಆಸ್ಪತ್ರೆಗಳ ಆವಶ್ಯಕತೆಗಳನ್ನು ಪೂರೈಸುವ ಉತ್ಪಾದನ ಘಟಕಗಳು ಹಾಗೂ ಸರಕು ಸಾರಿಗೆ ಕ್ಷೇತ್ರ, ಘನ ತ್ಯಾಜ್ಯನಿರ್ವಹಣೆ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದೆ. ಮಂಗಳೂರು ದೇಶದಲ್ಲಿ ವೈದ್ಯಕೀಯ ಸೇವೆಗೆ ಗುರುತಿಸಿಕೊಂಡಿದೆ. ವಿದೇಶಗಳಿಂದಲೂ ರೋಗಿಗಳು ಮಂಗಳೂರಿಗೆ ಬಂದು ಚಿಕಿತ್ಸೆ ಪಡೆದುಕೊಂಡು ತೆರಳುತ್ತಿದ್ದಾರೆ. ದೊಡ್ಡ ಹಾಗೂ ಮಧ್ಯಮ ಗಾತ್ರದ ಅನೇಕ ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳು ಇಲ್ಲಿವೆ. ಇದೇ ಅವಕಾಶಗಳನ್ನು ಬಳಸಿಕೊಂಡು ವೈದ್ಯಕೀಯ ಕ್ಷೇತ್ರಕ್ಕೆ ಆವಶ್ಯವಿರುವ ಸಲಕರಣೆಗಳು, ಉತ್ಪನ್ನಗಳನ್ನು ತಯಾರಿಸಲು ಅವಕಾಶವಿದೆ. ಇಲ್ಲಿಂದ ಇತರ ರಾಜ್ಯಗಳಿಗೂ ಸರಬರಾಜು ಮಾಡಲು ಅವಕಾಶವಿದೆ. ಪ್ರಸ್ತುತ ಬಹುತೇಕ ಸಲಕರಣೆಗಳು, ಉತ್ಪನ್ನಗಳು ಹೊರ ರಾಜ್ಯ, ಹೊರದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ.
ಐಟಿ, ಆಹಾರ ಸಂಸ್ಕರಣೆ ಹಾಗೂ ವಸ್ತ್ರೋದ್ಯಮ, ಪ್ರವಾಸೋದ್ಯಮಗಳಿಗೆ ದ.ಕನ್ನಡ ಜಿಲ್ಲೆಯ ಪರಿಸರ ಮತ್ತು ಭೌಗೋಳಿಕ ಸನ್ನಿವೇಶ ಹೆಚ್ಚು ಸೂಕ್ತವಾಗಿದೆ ಎಂದು ಈಗಾಗಲೇ ಗುರುತಿಸಲಾಗಿದೆ.
ಇದೇ ನೆಲೆಯಲ್ಲಿ ಜಿಲ್ಲೆಗೆ ಪ್ಲಾಸ್ಟಿಕ್‌ ಪಾರ್ಕ್‌, ಜವುಳಿ ( ಆ್ಯಪೆರಾಲ್‌) ಪಾರ್ಕ್‌, ಆಹಾರ ಸಂಸ್ಕರಣಾ ಉದ್ಯಮ ಪಾರ್ಕ್‌, ಐಟಿ ಪಾರ್ಕ್‌, ಕೊಕೊನಟ್‌ ಪಾರ್ಕ್‌, ಜಾಷಧ ತಯಾರಿ ಪಾರ್ಕ್‌, ಆಟೋಮೊಬೈಲ್‌ ಪಾರ್ಕ್‌ ಮುಂತಾದ ಯೋಜನೆಗಳನ್ನು ಪ್ರಸ್ತಾವನೆ ಮಾಡಲಾಗಿತ್ತು. ಆದರೆ ಈ ಎಲ್ಲ ಯೋಜನೆಗಳು ಪ್ರಸ್ತಾವನೆಯಲ್ಲೇ ಉಳಿದುಕೊಂಡಿದೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ. ಫ್ಲೆಂಡರ್ ಕಮಿಷನ್‌ ಈ ಕ್ಷೇತ್ರಗಳಲ್ಲೂ ಇರುವ ಅವಕಾಶಗಳ ಬಗ್ಗೆ ಒತ್ತಿ ಹೇಳಿದೆ.

ಪೂರಕ ಯೋಜನೆಗಳು
ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸುವಲ್ಲಿನ ಸಮಸ್ಯೆಗಳ ನಿವಾರಣೆಗೆ ಎಂಎಸ್‌ಎಂಇ- ಸಾರ್ಥಕ್‌ ಯೋಜನೆಯನ್ನು ಹಿಂದಿನ ಮೈತ್ರಿ ಸರಕಾರ ಘೋಷಿಸಿತ್ತು. ಎಂಎಸ್‌ಎಂಇಗಳಿಗೆ ಅವಶ್ಯವಿರುವ ಗುಣಮಟ್ಟದ ಕಚ್ಚಾವಸ್ತುಗಳು, ಸೌಲಸೌಲಭ್ಯ, ದುಡಿಮೆ ಬಂಡವಾಳ, ರಾಜ್ಯಾದ್ಯಂತ ಗುರುತಿಸಬಹುದಾದ ಬ್ರಾÂಂಡ್‌ಗಳನ್ನು ಈ ಯೋಜನೆಯಲ್ಲಿ ಒದಗಿಸುವ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿತ್ತು. ಕರ್ನಾಟಕ ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ರೂಪಿಸಲು ಹಾಗೂ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿ ಮತ್ತು ಉತ್ತೇಜನ ನೀಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಪುಟದ ಉಪಸಮಿತಿ ರಚನೆಗೊಂಡಿದೆ. ಕೈಗಾರಿಕೆ, ಕಂದಾಯ ಹಾಗೂ ಕಾನೂನು ಸಚಿವರು ಈ ಸಮಿತಿಯಲ್ಲಿರುತ್ತಾರೆ. ನೂತನ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿ, ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ರೂಪುಗೊಳ್ಳುವ ನಿರೀಕ್ಷೆಗಳಿವೆ. ಈ ಅವಕಾಶಗಳ ಬಳಕೆಗೆ ರಾಜ್ಯದಲ್ಲಿ ಅತಿ ವೇಗದಲ್ಲಿ ಪ್ರಗತಿ ಸಾಧಿಸುತ್ತಿರುವ ಮಂಗಳೂರು ಮಹಾನಗರ ಈಗಿಂದಲೇ ಸಿದ್ಧಗೊಳ್ಳಬೇಕಾಗಿದೆ.

  •  ಕೇಶವ ಕುಂದರ್‌
Advertisement
Advertisement

Udayavani is now on Telegram. Click here to join our channel and stay updated with the latest news.

Next