ಧಾರವಾಡ: ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿದ ಯೋಜನೆಗಳ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳು ಪಡೆಯಬೇಕು ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರು ಹೇಳಿದರು. ನಗರದ ಡಾ|ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ನಡೆದ ಹಸಿರು ಕ್ರಾಂತಿ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ|ಬಾಬು ಜಗಜೀವನರಾಂ ಅವರ 110 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಳ ಸಮುದಾಯದಲ್ಲಿ ವಾಸಿಸುವ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳು ಇರುವುದಿಲ್ಲ. ರಸ್ತೆ, ನೀರು, ವಾಸಿಸಲು ಮನೆ, ಶಿಕ್ಷಣ, ಮುಂತಾದ ಯೋಜನೆಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ. ಅವೆಲ್ಲವುಗಳನ್ನು ಪಡೆದು ಸ್ವಾಭಿಮಾನ-ಆದರ್ಶ ಜೀವನ ನಡೆಸಲು ಪ್ರಯತ್ನಿಸಬೇಕು ಎಂದರು.
ಜಾತಿ ಹುಟ್ಟಿನಿಂದ ಬಂದುದಲ್ಲ ಬದಲಾಗಿ ವೃತ್ತಿಯಿಂದ ಬಂದದ್ದು. ಮೇಲು ಕೀಳು, ವರ್ಣಭೇದ ಮಾಡುವುದರಿಂದ ವ್ಯಕ್ತಿ ದೊಡ್ಡವನಾಗುವುದಿಲ್ಲ. ಡಾ|ಬಾಬು ಜಗಜೀವನರಾಂ ಅವರ ಪ್ರತಿಭೆಯಿಂದ ಉನ್ನತ ಹುದ್ದೆ ಅಲಂಕರಿಸಿದವರು ಅಂತಹ ಪಾರಂಪರಿಕ ಸಾಂಸ್ಕೃತಿ, ಧರ್ಮ ಭಾರತದಲ್ಲಿದೆ ಎಂದರು.
ಡಾ|ಬಾಬು ಜಗಜೀವನರಾಂ ಅವರು ಕೃಷಿ ಮಂತ್ರಿಗಳಾಗಿ ಕೃಷಿ ಸಲಕರಣೆ ಹಾಗೂ ಕೃಷಿಕರಿಗೆ ಆರ್ಥಿಕ ಸೌಲಭ್ಯ ಒದಗಿಸಿ ಭಾರತಕ್ಕೆ ಆಗಿರುವ ಆಹಾರ ಧಾನ್ಯಗಳ ಕೊರತೆ ನೀಗಿಸಿದ್ದರು. ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಆಹಾರ ಧಾನ್ಯ ನಿಲ್ಲಿಸಿದರು. ಹೆಚ್ಚು ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡುವ ಹಂತಕ್ಕೆ ತಂದರು.
ರೈತರ ಆರ್ಥಿಕ, ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸಿ ಹಸಿರು ಕ್ರಾಂತಿ ಹರಿಕಾರರಾದರು ಎಂದರು. ಜಿಲ್ಲಾಧಿಕಾರಿ ಡಾ|ಎಸ್.ಬಿ. ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಜಿಪಂ ಸಿಇಒ ಆರ್.ಸ್ನೇಹಲ್ ಮಾತನಾಡಿದರು. ದಾವಣಗೆರೆಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಪೊ|ಎ.ಕೆ ಹಂಪಣ್ಣ ಉಪನ್ಯಾಸ ನೀಡಿದರು.
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಕ್ಷೇತ್ರದಲ್ಲಿ ನಿಂಗಪ್ಪ ದು. ಮುಗಳಿ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸಿದ್ದರಾಜು ಯ.ಹಿಪ್ಪರಗಿ, ಕೃಷಿ ಸಂಶೋಧನೆ ಕ್ಷೇತ್ರದಲ್ಲಿ ಡಾ|ಶಿವ ಸೋಮಣ್ಣ ನಿಟ್ಟೂರ, ಸರ್ಕಾರಿ ಸೇವೆಯಲ್ಲಿ ಡಾ|ದಿವಾಕರ ಕೆ. ಶಂಕಿನದಾಸರ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮಣ್ಣ ಮಾದರ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಗಿರೀಶ ಆರ್.ಕಾಂಬಳೆ, ಪಿತಾಂಬ್ರಪ್ಪ ಬೀಳಾರ, ವಿ.ಜಿ ಪರಶಿ ಎಸ್.ಎಸ್ .ಪೂಜಾರ, ಅಶೋಕ ದೊಡ್ಡಮನಿ, ಲಕ್ಷ್ಮಣ ಬಕ್ಕಾಯಿ, ಶಿವರಾಜ ಕುಮಾರ ಕಲ್ಲಿಗನವರ, ವೆಂಕಟೇಶ ಸಕಬಾಲ, ಜಿಪಂ ಸದಸ್ಯ ಕರೆಪ್ಪ ಮಾದರ, ಶಾರದಾ ಕೇಲ್ಕಾರ ಇದ್ದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಮುನಿರಾಜು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವೈ.ಎನ್.ನಾಗಮ್ಮನವರ ನಿರೂಪಿಸಿದರು. ಎಂ.ಬಿ.ಸಣ್ಣೇರ ವಂದಿಸಿದರು.