ಕಲಬುರಗಿ: ಜಿವಿಆರ್‌ಎಂಪಿ ಟೋಲ್ ನಾಕಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ ಉದ್ಯೋಗಿಗಳ ಮೇಲೆ ಸಂಸ್ಥೆಯು ಶೋಷಣೆ ಮಾಡುತ್ತಿದ್ದು, ಕೂಡಲೇ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಜೈ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ನಿವಾಸದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಪ್ರತಿಭಟನೆಕಾರರು ನಂತರ ಮನವಿ ಪತ್ರ ಸಲ್ಲಿಸಿ, ಟೋಲ್ ನಾಕಾಗಳಲ್ಲಿ ಕನ್ನಡಿಗ ಉದ್ಯೋಗಿಗಳ ಶೋಷಣೆ ತಡೆಯಬೇಕು. ಜಿಲ್ಲೆಯ ಸರಸಂಬಾ, ಪಟ್ಟಣ್, ಮಾಡಬೂಳ ಹಾಗೂ ರಿಬ್ಬನಪಲ್ಲಿ ಟೋಲ್ ನಾಕಾಗಳಲ್ಲಿ ಸುಮಾರು 90 ಜನ ಉದ್ಯೋಗಿಗಳು ಕನ್ನಡಿಗರು ಕೆಳದರ್ಜೆಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಂಧ್ರ ಮೂಲ ಸಂಸ್ಥೆಯಾಗಿರುವುದರಿಂದ ಮೇಲಾಧಿಕಾರಿಗಳೆಲ್ಲ ಆಂಧ್ರದವರೇ. ಹೀಗಾಗಿ ಕನ್ನಡಿಗರ ಮೇಲೆ ಶೋಷಣೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿಗಳಿಗೆ ಸರಿಯಾಗಿ ವೇತನ ಕೊಡುತ್ತಿಲ್ಲ. ಯಾವುದೇ ಮೂಲಭೂತ ಸೌಲಭ್ಯ ಒದಗಿಸುತ್ತಿಲ್ಲ. ವೇತನ ತಾರತಮ್ಯ ಮಾಡಲಾಗುತ್ತಿದೆ.
ಹೆಚ್ಚು ಕಡಿಮೆ ಆಕ್ಷೇಪಿಸಿದರೆ ಉದ್ಯೋಗದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಇಲ್ಲಿನ ಉದ್ಯೋಗಿಗಳಿಗೆ ಯಾವುದೇ ಬಡ್ತಿ ಇಲ್ಲ, ಪ್ರತಿ ತಿಂಗಳು ನಿಗದಿತ ದಿನಾಂಕದಂದೂ ಸಂಬಳವಿಲ್ಲ, ಭವಿಷ್ಯನಿಧಿಯ ಸಂಪೂರ್ಣ ಹಣವನ್ನು ಕಾರ್ಮಿಕರಿಂದಲೇ ವಸೂಲಿ ಮಾಡಲಾಗುತ್ತಿದೆ.
ಅದಲ್ಲದೆ, ಇತರೆ ಯಾವುದೇ ಸೌಲಭ್ಯಗಳು ಇಲ್ಲ. ಚಿಲ್ಲರೆಗಾಗಿ ಗ್ರಾಹಕರಿಗೆ ಬಿಸ್ಕತ್, ಚಾಕಲೇಟ್‌ಗಳನ್ನು ನೀಡಲಾಗುತ್ತಿದೆ. ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು. ಈ ಹಿಂದೆ ತಿಳಿಸಿದಂತೆ ಜೂ.10 ಸಚಿವ ಮನೆ ಮುಂದೆ ಧರಣಿ ಮಾಡಲಾಗಿದೆ.ಏಳು ದಿನಗಳಲ್ಲಿ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಓಲ್ ಬಂದ್ ಮಾಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ಧರಣಿಯಲ್ಲಿ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಫರಹತಾಬಾದ್, ಕಾಶಿನಾಥ ಮಾಳಗೆ, ಲಕ್ಷಿಕಾಂತ್ ಉದನೂರು, ಸಂದೇಶ ಪವಾರ, ಶಿವು ಮಾಡಬೂಲ್, ಅಂಬು ಮಸ್ಕಿ, ಸತೀಶ ಫರತಾಬಾದ್, ಮಲ್ಲಿಕಾರ್ಜುನ ಶೆಟ್ಟಿ, ರಾಜು ಹರಸೂರ್, ರಾಹುಲ ಫರತಾಬಾದ್, ಸುರೇಶ ಹನಗುಂಡಿ, ಎಸ್.ಎಸ್. ಅಹ್ಮದ್, ಲಕ್ಷಿಕಾಂತ ಹೋಲ್ಡ್ ಮುಂತಾದವರು ಪಾಲ್ಗೊಂಡಿದ್ದರು.