ಮೈಸೂರು: ಜೆ-ನರ್ಮ್ ಯೋಜನೆಯಡಿ ಮೈಸೂರು ನಗರದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಶಾಸಕ ತನ್ವೀರ್‌ಸೇಠ್ ಹೇಳಿದರು.
ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜೆ-ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಮೈಸೂರು ನಗರಕ್ಕೆ ಕೋಟ್ಯಂತರ ರೂ. ಅನುದಾನ ಬಂದರೂ ಸಮರ್ಪಕವಾಗಿ ಬಳಸಿಕೊಳ್ಳಲಾಗಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಕುಸಿಯುವ ಭೀತಿ: ಜೆ-ನರ್ಮ್ ಯೋಜನೆಯಡಿ ನಿರ್ಮಿಸಲಾದ ಮನೆಗಳು ಕಳಪೆ ಕಾಮಗಾರಿಯಿಂದಾಗಿ ಕುಸಿಯುವ ಭೀತಿ ಎದುರಾಗಿದ್ದು, ಈ ಮನೆಗಳನ್ನು ಕೆಡವಿ ಮತ್ತೆ ನಿರ್ಮಿಸಬೇಕಾಗಿದೆ. ನರ್ಮ್ ಯೋಜನೆಯಡಿ 195 ಕೋಟಿ ರೂ. ವೆಚ್ಚದಲ್ಲಿ ನಗರಕ್ಕೆ 24/7 ನೀರು ಪೂರೈಕೆ ಮಾಡುವ ಯೋಜನೆಯ ಕಾಮಗಾರಿ ಕೈಗೆತ್ತಿಕೊಂಡ ಜಸ್ಕೋ ಸಂಸ್ಥೆ ಕಾಮಗಾರಿ ಪೂರ್ಣಗೊಳಿಸಲಿಲ್ಲ,
ಬದಲಿಗೆ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಹೆಸರಲ್ಲಿ ರಸ್ತೆಗಳನ್ನೆಲ್ಲ ಅಗೆದು ಹಾಳುಗೆಡವಿದೆ. ಇದೀಗ ಕಾಮಗಾರಿ ಪೂರ್ಣಗೊಳಿಸಲು ಅಮೃತ್ ಯೋಜನೆಯಡಿ 247 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಈ ರೀತಿಯ ದುಂದುವೆಚ್ಚ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ವಸತಿ ರಹಿತ ಹಾಗೂ ಗುಡಿಸಲು ವಾಸಿಗಳನ್ನು ಗುರುತಿಸಿ ಅವರಿಗೆ ನಿವೇಶನ ಹಾಗೂ ಮನೆ ಕಟ್ಟಿಕೊಡಲು ಯೋಜನೆ ರೂಪಿಸಬೇಕು. ಈ ಹಿಂದೆಯೇ ವಸತಿ ಸೌಲಭ್ಯ ಪಡೆದುಕೊಂಡಿದ್ದರೂ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದರೆ, ಅಂಥವರನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು.
ಕ್ಷೇತ್ರದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಭೂಮಿ ಒದಗಿಸುವಂತೆ ಮುಡಾ ಆಯುಕ್ತ ಕಾಂತರಾಜ್‌ಗೆ ತಿಳಿಸಿದರು.
ಪಾಲಿಕೆ ಅಧಿಕಾರಿಗೆ ತರಾಟೆ: ಕಳೆದ 12 ವರ್ಷಗಳಿಂದ ತ್ಯಾಜ್ಯ ವಿಲೇವಾರಿಗೆ ಟೆಂಡರ್ ಕರೆಯದೆ ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸಿರುವ ಬಗ್ಗೆ ಸಮರ್ಪಕ ಉತ್ತರ ನೀಡದ ಪಾಲಿಕೆ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡ ಶಾಸಕರು, ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸದೆ ಟೆಂಡರ್ ಕರೆದು ಹೊಸ ಗುತ್ತಿಗೆದಾರರನ್ನು ನೇಮಿಸುವಂತೆ ತಿಳಿಸಿದರು.