Advertisement

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಶೋಷಣೆ

04:11 PM Jun 09, 2017 | Team Udayavani |

ಕಲಬುರಗಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮಿತಿ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ರಾಜಾರೋಷದಿಂದ ಹಣ್ಣುಗಳ ಮಾರಾಟದ ಮೇಲೆ ಶೇ. 10ರಷ್ಟು ಮಧ್ಯವರ್ತಿಗಳು ರೈತರಿಂದ ವಸೂಲಿ ಮಾಡುತ್ತಿದ್ದಾರೆ. ವರ್ಷವಿಡಿ ಕಷ್ಟಪಟ್ಟು ಬೆಳೆದ ಹಣ್ಣು ಹಂಪಲುಗಳನ್ನು ಮಾರುಕಟ್ಟೆಗೆ 50 ಸಾವಿರ ರೂ. ಮೌಲ್ಯದಷ್ಟು ಮಾರಾಟ ಮಾಡಿದರೆ ರೈತರಿಂದ 5 ಸಾವಿರ ರೂ. ಕಮಿಷನ್‌ ಹೆಸರಿನಲ್ಲಿ ವಸೂಲಿ ಮಾಡಲಾಗುತ್ತಿದೆ.

Advertisement

ರೈತರಿಂದ ಹಣ ವಸೂಲಿ ಮಾಡುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ. ವರ್ತಕರು ಶೇ. 5ರಷ್ಟು ಕಮೀಷನ್‌ನ್ನು ಖರೀದಿದಾರರಿಂದ ಪಡೆಯಬೇಕು. ಕಮೀಷನ್‌ ಪಡೆಯುವುದಕ್ಕೆ ರೈತರು ಆಕ್ಷೇಪಿಸಿದರೆ ನಿಮ್ಮ ಉತ್ಪನ್ನವನ್ನೇ ತೆಗೆದುಕೊಳ್ಳುವುದಿಲ್ಲವೆಂದು ಎಲ್ಲ ವರ್ತಕರೂ ಒಗ್ಗೂಡಿ ದೊಡ್ಡದಾದ ಬಾಯಿ ಮಾಡುತ್ತಾರೆ. ಯಾಕಾದರೂ ಕೇಳಿದೆ ಎನ್ನುವಂತೆ ರೈತರಿಗೆ ಹಿಂಸಿಸುತ್ತಾರೆ. 

ಬಿಳಿ ಕಾಗದ ರಸೀದಿ: ರೈತರ ಉತ್ಪನ್ನ ಮಾರಾಟ ಮಾಡಿದ್ದಕ್ಕೆ ಎಪಿಎಂಸಿ ನೀಡಿರುವ ಪರವಾನಗಿ ಸಂಖ್ಯೆಯೊಂದಿಗೆ ವರ್ತಕರು ಅಧಿಕೃತ ರಸೀದಿ ನೀಡಬೇಕು. ಆದರೆ ಬಿಳಿ ಹಾಳೆ ಮೇಲೆ ರಸೀದಿ ನೀಡಿ ಸರ್ಕಾರಕ್ಕೂ ವಂಚಿಸಲಾಗುತ್ತಿದೆ. 

ದೂರು: ಕಲಬುರಗಿ ಎಪಿಎಂಸಿಯಲ್ಲಿ ಹಣ್ಣುಗಳ ಮಾರಾಟಕ್ಕೆ ರೈತರಿಂದ ಶೇ. 10ರಷ್ಟು ಕಮೀಷನ್‌ ಪಡೆಯುತ್ತಿರುವ ಬಗ್ಗೆ ರಸೀದಿಗಳ ಸಮೇತ ಆಳಂದ ತಾಲೂಕಿನ ಮಾದನಹಿಪ್ಪರಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ ಎಪಿಎಂಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದಕ್ಕೆ ಎಪಿಎಂಸಿ ಅಧಿಕಾರಿಗಳು ದೂರಿಗೆ ಲಗತ್ತಿಸಲಾದ ಎರಡು ಅಂಗಡಿಗಳಿಗೆ ನೋಟಿಸ್‌ ನೀಡಿ ಕೈ ತೊಳೆದುಕೊಂಡಿದ್ದಾರೆ. 

ಜಿ.ಪಂ ನಿರ್ಣಯ: ಎಪಿಎಂಸಿಯಲ್ಲಿ ಶೇ.10ರಷ್ಟು ಕಮೀಷನ್‌ ಪಡೆಯುವ ದಂಧೆಗೆ ಕಡಿವಾಣ ಹಾಕುವಂತೆ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಕಮೀಷನ್‌ ಪಡೆಯುವ ದಂಧೆ ನಿಂತಿಲ್ಲ. 

Advertisement

ಭೇಟಿ: ದೂರು ನೀಡಿದ್ದರೂ ಹಾಗೂ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ನಿರ್ಣಯ ಕೈಗೊಂಡಿದ್ದರೂ ಎಪಿಎಂಸಿಯಲ್ಲಿ ರೈತರಿಂದ ಶೇ.10ರಷ್ಟು ಕಮೀಷನ್‌ ಪಡೆಯುವ ದಂಧೆಗೆ ಕಡಿವಾಣ ಬಿದ್ದಿಲ್ಲ. ಇನ್ನೊಂದು ವಾರ ಕಾಲ ಕಾಯ್ದು ನೋಡಲಾಗುವುದು.

ತದನಂತರ ಇತರರೊಂದಿಗೆ ಬೀದಿಗಿಳಿದು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುರುಶಾಂತ ಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ ಹಾಗೂ ಇತರರು ಗುರುವಾರ ಎಪಿಎಂಸಿ ಕಾರ್ಯದರ್ಶಿಗಳನ್ನು ಭೇಟಿಯಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಪಂ ಸದಸ್ಯರ ಹಾಗೂ ಮುಖಂಡರ ಮನವಿ ಆಲಿಸಿದ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಪ್ರಕಾಶ ಅಯ್ನಾಳಕರ್‌, ಈಗಾಗಲೇ ಎಲ್ಲರಿಗೂ ನೋಟಿಸ್‌ ನೀಡಲಾಗಿದೆ. ದೂರು ನೀಡಿದ ಇಬ್ಬರು ವರ್ತಕರಿಂದ ಶೇ. 10ರಷ್ಟು ಕಮೀಷನ್‌ ವಾಪಸ್ಸು ಪಡೆಯಲಾಗಿದ್ದು, ಅದನ್ನು ರೈತರಿಗೆ ಚೆಕ್‌ ಮೂಲಕ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

ಹಾಗಾದರೆ ಎಲ್ಲ ರೈತರ ಕಮೀಷನ್‌ ಕೊಡಲು ಸಾಧ್ಯವೇ? ಎಂದು ಜನಪ್ರತಿನಿ ಗಳು ಪ್ರಶ್ನಿಸಿದರು. ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಶೇ. 10ರಷ್ಟು ಕಮೀಷನ್‌ ನೀಡದಿರುವಂತೆ ಹಾಗೂ ಕಮೀಷನ್‌ ಬೇಡುವ ವರ್ತಕರ ವಿರುದ್ಧ ದೂರು ಕೊಡುವಂತೆ ದೊಡ್ಡದಾದ ನಾಮಫಲಕ ಅಳವಡಿಸಲಾಗುವುದು ಎಂದು ಎಪಿಎಂಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next