Advertisement

ಡಿಕೆಶಿ ಮೇಲೆ ದಾಳಿ ಕೇಂದ್ರದ ದುರ್ಬಳಕೆ

01:24 PM Jun 03, 2018 | |

ಮೈಸೂರು: ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಮೇಲೆ ನಿರಂತರ ಐಟಿ ದಾಳಿ ನಡೆಸಲು ಕೇಂದ್ರ ಸರ್ಕಾರ ಸಿಬಿಐ, ಐಟಿ ಮತ್ತು ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ನಗರದ ಚಾಮುಂಡಿಪುರಂ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. 

Advertisement

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಿಬಿಐ, ಐಟಿ ಹಾಗೂ ಇಡಿ ಸಂಸ್ಥೆಗಳನ್ನು ಬಳಸಿಕೊಂಡು ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ತುಳಿಯುವ ಮತ್ತು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಇಂತಹ ನಡವಳಿಕೆ ತೋರುವ ಮೂಲಕ ಕಾಂಗ್ರೆಸ್‌ನ ಬಲವರ್ಧನೆ ಕುಂಠಿತಗೊಳಿಸುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಡಿ.ಕೆ.ಶಿವಕುಮಾರ್‌ ಸ್ವತ್ಛ, ಹಗರಣ ಮುಕ್ತ ರಾಜಕಾರಣಿಯಾಗಿ ಪಕ್ಷ ತಮಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ಮೂಲಕ ಜನಾನುರಾಗಿಯಾಗಿದ್ದಾರೆ. ಶಿವಕುಮಾರ್‌ ಪರವಾಗಿ ಕಾಂಗ್ರೆಸ್‌ ಪಕ್ಷವಿದ್ದು, ಇವರ ಮೇಲೆ ಇದೇ ರೀತಿ ದಾಳಿ ಮುಂದುವರಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ  ಎಚ್ಚರಿಸಿದರು.  

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‌ ನಗರಾಧ್ಯಕ್ಷ ಅಜಯ್‌ರಾಜ್‌, ಕೆ.ಆರ್‌.ಕ್ಷೇತ್ರದ ಅಧ್ಯಕ್ಷ ಎನ್‌.ಮನೋಜ್‌, ಪದಾಧಿಕಾರಿಗಳಾದ ಚಂದನ್‌, ಪ್ರಶಾಂತ್‌, ರವಿ, ಯಶವಂತ್‌, ಶ್ರೇಯಸ್‌, ಚೇತನ್‌, ಸಮಾಜ ಸೇವಕ ನಾಗರಾಜ್‌ ಪೈ ಇನ್ನಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next