Advertisement

Explained: ಒಂದು ದೇಶ- ಒಂದು ಚುನಾವಣೆ ಸುಲಭವಾಗಿ ಜಾರಿಗೊಳಿಸಲು ಸಾಧ್ಯವೇ…ಸಾಧಕ-ಬಾಧಕವೇನು?

04:28 PM Sep 01, 2023 | ನಾಗೇಂದ್ರ ತ್ರಾಸಿ |

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ ಡಿಎ ಸರ್ಕಾರವು ಸೆಪ್ಟೆಂಬರ್‌ 18ರಿಂದ 22ರವರೆಗೆ ನಡೆಯಲಿರುವ ಸಂಸತ್‌ ನ ವಿಶೇಷ ಅಧಿವೇಶನದಲ್ಲಿ ತೀವ್ರ ವಾಕ್ಸಮರಕ್ಕೆ ಎಡೆಮಾಡಿಕೊಡಲಿರುವ “ಒಂದು ದೇಶ- ಒಂದು ಚುನಾವಣೆ” ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ನರೇಂದ್ರ ಮೋದಿ ಅವರು ಪ್ರಧಾನಿ ಗದ್ದುಗೆ ಏರಿದ ನಂತರ “ಒಂದು ದೇಶ- ಒಂದು ಚುನಾವಣೆ” ಮಸೂದೆ ಬಿಜೆಪಿ ಸರ್ಕಾರದ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿತ್ತು. ಏಕಕಾಲದಲ್ಲಿ ದೇಶದಲ್ಲಿ ನಡೆಯುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಈ ಪ್ರಸ್ತಾಪಿತ ಮಸೂದೆ ಬಗ್ಗೆ ಹಲವಾರು ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.

Advertisement

ಒಂದು ದೇಶ- ಒಂದು ಚುನಾವಣೆ ಮಸೂದೆ ಸುಲಭವಾಗಿ ಜಾರಿಗೊಳಿಸಲು ಸಾಧ್ಯವೇ?

ಒಂದು ದೇಶ- ಒಂದು ಚುನಾವಣೆ ಸೂತ್ರದ ಹಿಂದೆ ದೇಶದಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಪ್ರಕ್ರಿಯೆಯನ್ನು ನಡೆಸುವುದಾಗಿದೆ. ಮತದಾರರು ಕೂಡಾ ಒಂದೇ ದಿನ ಲೋಕಸಭೆ ಮತ್ತು ಆಯಾ ರಾಜ್ಯಗಳ ವಿಧಾನಸಭೆಗೆ ಮತದಾನ ಮಾಡುವುದಾಗಿದೆ. ಪ್ರಸ್ತುತ ಆಡಳಿತಾರೂಢ ಸರ್ಕಾರಗಳ ಅವಧಿ ಮುಗಿದ ಐದು ವರ್ಷಗಳ ನಂತರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯುತ್ತಿದೆ.

ಒಂದು ದೇಶ- ಒಂದು ಚುನಾವಣೆ ಮಸೂದೆಯನ್ನು ಪಾಸ್‌ ಮಾಡುವ ಮೊದಲು ಸಾಂವಿಧಾನಿಕ ತಿದ್ದುಪಡಿ ಅತ್ಯಗತ್ಯವಾಗಿದೆ. ಈ ಮಸೂದೆಯ ಸಾಂವಿಧಾನಿಕ ತಿದ್ದುಪಡಿಗಾಗಿ ಸಂಸತ್‌ ಮೂರನೇ ಎರಡರಷ್ಟು ಬಹುಮತದೊಂದಿಗೆ ಮಸೂದೆಯನ್ನು ಅಂಗೀಕರಿಸಬೇಕಾದ ಅಗತ್ಯವಿದೆ. ಇದು ಲೋಕಸಭೆಯ 543 ಸ್ಥಾನಗಳ ಪೈಕಿಯ ಶೇ.67ರಷ್ಟು ಹಾಗೂ ರಾಜ್ಯಸಭೆಯ 245 ಸ್ಥಾನಗಳ ಶೇ.67ರಷ್ಟು ಬಹುಮತದ ಅಗತ್ಯವಿದೆ. ಅದಲ್ಲದೇ ಮಸೂದೆಯನ್ನು ದೇಶದ ಅರ್ಧದಷ್ಟು ರಾಜ್ಯ ಶಾಸಕಾಂಗ ಅಂಗೀಕರಿಸಬೇಕಾಗುತ್ತದೆ. ಅಂದರೆ ದೇಶದ 14 ರಾಜ್ಯಗಳು ಮಸೂದೆಯನ್ನು ಅಂಗೀಕರಿಸಬೇಕು. ಪ್ರಸ್ತುತ ಭಾರತೀಯ ಜನತಾ ಪಕ್ಷ 10 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಸುಮಾರು ಆರು ರಾಜ್ಯಗಳಲ್ಲಿ ಮೈತ್ರಿ ಸರ್ಕಾರ ಹೊಂದಿದೆ. ಲೋಕಸಭೆಯಲ್ಲಿ ಎನ್‌ ಡಿಎ 333 ಸ್ಥಾನಗಳನ್ನು ಹೊಂದಿದ್ದು, ಇದು ಶೇ.61ರಷ್ಟು ಬಹುಮತವಾಗಿದೆ. ಇನ್ನುಳಿದ ಶೇ.5ರಷ್ಟು ಮತವನ್ನು ಪಡೆಯುವುದು ಕಷ್ಟವಾಗಲಾರದು. ರಾಜ್ಯಸಭೆಯಲ್ಲಿ ಎನ್‌ ಡಿಎ ಕೇವಲ ಶೇ.38ರಷ್ಟು ಸ್ಥಾನಗಳನ್ನು ಹೊಂದಿದೆ.

ಒಂದು ದೇಶ- ಒಂದು ಚುನಾವಣೆಯ ಲಾಭಗಳೇನು?

Advertisement

ದೇಶಾದ್ಯಂತ ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ನಡೆಸುವುದರಿಂದ ಉತ್ತಮ ಆಡಳಿತ ನೀಡುವ ಜೊತೆಗೆ ಪ್ರತ್ಯೇಕ ಚುನಾವಣೆ ನಡೆಸುವ ಮೂಲಕ ಬೊಕ್ಕಸಕ್ಕಾಗುವ ಭಾರೀ ಖರ್ಚು-ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ ಎಂಬುದು ಬಿಜೆಪಿಯ ವಾದವಾಗಿದೆ. ಭಾರತದಲ್ಲಿ 1967ರವರೆಗೂ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿತ್ತು. ಏತನ್ಮಧ್ಯೆ 1968 ಮತ್ತು 1969ರಲ್ಲಿ ವಿಧಾನಸಭೆ ಅವಧಿಗೂ ಮುನ್ನವೇ ವಿಸರ್ಜನೆಗೊಂಡಿತ್ತು. ಇದರಿಂದಾಗಿ ಏಕಕಾಲದಲ್ಲಿ ನಡೆಯುತ್ತಿದ್ದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಪ್ರತ್ಯೇಕವಾಗಿ ನಡೆಯುವಂತಾಗಿತ್ತು.

2019ರಲ್ಲಿ ನಡೆದ ಲೋಕಸಭಾ ಚುನಾವಣೆಗಾಗಿ ಕೇಂದ್ರ ಸರ್ಕಾರ 10,000 ಕೋಟಿ ರೂಪಾಯಿಗಳಷ್ಟು ವ್ಯಯಿಸಿತ್ತು. (ಕೆಲವು ವರದಿ ಪ್ರಕಾರ-ರಾಜಕೀಯ ಪಕ್ಷಗಳ ಖರ್ಚು ಹಾಗೂ ಚುನಾವಣಾ ಆಯೋಗದ ವೆಚ್ಚ ಸೇರಿ 60,000 ಕೋಟಿ ರೂ. ಎಂದು ಅಂದಾಜಿಸಿವೆ). ಪ್ರತಿ ರಾಜ್ಯದ ವಿಧಾನಸಭೆ ಚುನಾವಣೆ ನಡೆಸಲು 250ರಿಂದ 500 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಈ ಮೊತ್ತ ಪರಿಗಣಿಸಿದರೆ ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಸಾವಿರಾರು ಕೋಟಿ ರೂಪಾಯಿ ಅಗತ್ಯವಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಮೂಲಕ ಹಣವನ್ನು ಉಳಿಸಬಹುದಾಗಿದೆ ಎಂದು ವರದಿ ವಿಶ್ಲೇಷಿಸಿದೆ.

1983ರಿಂದಲೂ ಚುನಾವಣಾ ಆಯೋಗ ಪ್ರಸ್ತಾಪ:

1967ರ ನಂತರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಪ್ರತ್ಯೇಕವಾಗಿ ನಡೆಯುತ್ತಿದ್ದು, ಸುಮಾರು ಒಂದು ದಶಕದ ನಂತರ 1983ರಲ್ಲಿ ಚುನಾವಣಾ ಆಯೋಗ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪಕ್ಕಾಗಿ ಮನವಿ ಸಲ್ಲಿಸಿತ್ತು. ಆದರೆ ಈ ನಿರ್ಧಾರಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.  1999ರಲ್ಲಿ ಕಾನೂನು ಆಯೋಗ ಕೂಡಾ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿತ್ತು.

2022ರಲ್ಲಿ ಅಂದು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸುಶೀಲ್‌ ಚಂದ್ರ ಕೂಡಾ, ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಪೂರ್ಣಪ್ರಮಾಣದಲ್ಲಿ ಸಿದ್ಧತೆ ನಡೆಸುವ ಸಾಮರ್ಥ್ಯ ಹೊಂದಿರುವುದಾಗಿ ತಿಳಿಸಿದ್ದರು. ಆದರೆ ಇದನ್ನು ಕಾರ್ಯಗತಗೊಳಿಸಲು ಸಾಂವಿಧಾನಿಕ ತಿದ್ದುಪಡಿಯ ಅಗತ್ಯವಿದ್ದು, ಆ ಬಳಿಕ ಸಂಸತ್‌ ನಲ್ಲಿ ಅಂಗೀಕಾರ ದೊರೆಯಬೇಕಾಗಿದೆ ಎಂದು ತಿಳಿಸಿದ್ದರು.

ಒಂದು ದೇಶ- ಒಂದು ಚುನಾವಣೆ ಪ್ರಸ್ತಾಪವನ್ನು ವಿರೋಧಿಸುತ್ತಿರುವುದೇಕೆ?

ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದೇಶ- ಒಂದು ಚುನಾವಣೆ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದ್ದು, ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ ಇದೊಂದು ಅಸಂವಿಧಾನಿಕ ಎಂದು ಕರೆದಿವೆ.

ಸಂಸದೀಯ ವ್ಯವಸ್ಥೆಯ ಸರ್ಕಾರವನ್ನು ಬದಲಿಸಿ, ಅಧ್ಯಕ್ಷೀಯ ವ್ಯವಸ್ಥೆಯ ಸರ್ಕಾರ ತರುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ “ಒಂದು ದೇಶ-ಒಂದು ಚುನಾವಣೆ ಮಸೂದೆಯನ್ನು ಪ್ರಸ್ತಾಪಿಸುತ್ತಿವೆ ಎಂದು ಆಮ್‌ ಆದ್ಮಿ ಪಕ್ಷ ದೂರಿದೆ.

ಏಕಕಾಲದಲ್ಲಿ ಚುನಾವಣೆ ನಡೆಸುವ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಮೂಲೆಗುಂಪು ಮಾಡಲಾಗುತ್ತದೆ. ಅದೇ ರೀತಿ ಒಂದು ವೇಳೆ ಕೇಂದ್ರ ಸರ್ಕಾರ ಅಧಿಕಾರ ಕಳೆದುಕೊಂಡರೆ, ರಾಜ್ಯ ವಿಧಾನಸಭೆಗಳ ಕಥೆ ಏನು? ಅಲ್ಲದೇ ಒಂದು ವೇಳೆ ರಾಜ್ಯದ ಮೇಲೆ ರಾಷ್ಟ್ರಪತಿ ಆಡಳಿತ ಹೇರಿದರೆ ಆಗ ಏಕಕಾಲದ ಚುನಾವಣೆ ಏನಾಗಲಿದೆ? ಎಂದು ವಿಪಕ್ಷಗಳು ಪ್ರಶ್ನಿಸಿವೆ.

ಬಿಆರ್‌ ಎಸ್‌, ವೈಎಸ್‌ ಆರ್‌ ಸಿಪಿ, ಎಐಎಡಿಎಂಕೆ, ಬಿಜು ಜನತಾ ದಳ, ಜೆಡಿ(ಯು) ಈ ಹಿಂದೆ ಒಂದು ದೇಶ- ಒಂದು ಚುನಾವಣೆ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಇನ್ನುಳಿದಂತೆ ಕಾಂಗ್ರೆಸ್‌, ಡಿಎಂಕೆ, ಜೆಡಿಎಸ್‌, ಆಮ್‌ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಸಿಪಿಐ ಮತ್ತು ಸಿಪಿಐ(ಎಂ) ವಿರೋಧ ವ್ಯಕ್ತಪಡಿಸಿದ್ದವು. ಒಂದು ದೇಶ- ಒಂದು ಚುನಾವಣೆ ತುಂಬಾ ಉತ್ತಮವಾದ ಸಲಹೆ ಆದರೆ ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು 2018ರಲ್ಲಿ ಟಿಡಿಪಿ ಅಭಿಪ್ರಾಯವ್ಯಕ್ತಪಡಿಸಿತ್ತು.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next