Advertisement

ತಜ್ಞರ ಭವಿಷ್ಯ ನಿಜ.. ತಿಂಗಳಲ್ಲೇ ಲಕ್ಷ ಸೋಂಕು..!

12:14 PM Aug 01, 2020 | mahesh |

ಬೆಂಗಳೂರು: ಕೋವಿಡ್ ಸೋಂಕಿನ ತೀವ್ರತೆ ಕುರಿತು ತಜ್ಞರ ಭವಿಷ್ಯ ನಿಜವಾಗುತ್ತಿದ್ದು, ರಾಜ್ಯದಲ್ಲಿ ತಿಂಗಳಲ್ಲಿಯೇ ಬರೋಬ್ಬರಿ 1 ಲಕ್ಷ ಮಂದಿ ಸೋಂಕಿತರಾಗಿದ್ದರೆ, ಎರಡು ಸಾವಿರ ಮಂದಿ ಬಲಿಯಾಗಿದ್ದಾರೆ. ಈ ಬೆನ್ನಲ್ಲೇ ಜುಲೈಗಿಂತ ಆಗಸ್ಟ್‌ ತಿಂಗಳಲ್ಲಿ ಸೋಂಕು ಪ್ರಕರಣಗಳು ದುಪ್ಪಟ್ಟಾಗಲಿವೆ ಎಂದು ತಜ್ಞರು ಸುಳಿವು ನೀಡಿರುವುದು ಆತಂಕ ಹೆಚ್ಚಿಸಿದೆ.

Advertisement

ರಾಜ್ಯದಲ್ಲಿ ಸೋಂಕು ಮಾರ್ಚ್‌ -ಜೂನ್‌ ಗಿಂತಲೂ ಜುಲೈನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಆರೋಗ್ಯ ವಲಯದ ತಜ್ಞರು ತಿಂಗಳ ಆರಂಭದಲ್ಲೇ ಹೇಳಿದ್ದರು. ಅಂತೆಯೇ ಜೂನ್‌ ಅಂತ್ಯಕ್ಕೆ 15 ಸಾವಿರ ಇದ್ದ ಸೋಂಕು ಪ್ರಕರಣಗಳು 1.24 ಲಕ್ಷಕ್ಕೆ ತಲುಪಿವೆ. 246 ಇದ್ದ ಸಾವು ಪ್ರಕರಣಗಳು 2,314ಕ್ಕೆ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ 1,08,873 ಮಂದಿ ಸೋಂಕಿತರಾಗಿದ್ದು, 2,068 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯವು ಒಟ್ಟಾರೆ ಸೋಂಕು ಪ್ರಕರಣಗಳು ಮತ್ತು ಸೋಂಕಿತರ ಸಾವಿನಲ್ಲಿ 5ನೇ ಸ್ಥಾನಕ್ಕೆ, ಸಕ್ರಿಯ ಪ್ರಕರಣ ಗಳಲ್ಲಿ (ಪಾಸಿಟಿವ್‌ ಕೇಸ್‌) 3 ನೇ ಸ್ಥಾನಕ್ಕೆ ತಲುಪಿದೆ.

ಜುಲೈನಲ್ಲಿ ಹತ್ತು ಪಟ್ಟು ಹೆಚ್ಚಳ: ಸೋಂಕು ಪ್ರಕರಣಗಳು ಮಾರ್ಚ್‌ನಿಂದ ಏಪ್ರಿಲ್‌ಗೆ ನಾಲ್ಕು ಪಟ್ಟು, ಏಪ್ರಿಲ್‌ನಿಂದ ಮೇಗೆ 6 ಪಟ್ಟು, ಮೇನಿಂದ ಜೂನ್‌ಗೆ 6 ಪಟ್ಟು ಹೆಚ್ಚಳ ವಾಗಿದೆ. ಆದರೆ, ಜೂನ್‌ನಿಂದ ಜುಲೈಗೆ ಹತ್ತು ಪಟ್ಟು ಹೆಚ್ಚಳವಾಗಿದೆ. ಅಂತೆಯೇ ಸೋಂಕಿತರ ಸಾವು ಕೂಡ ಇದೇ ಹಾದಿ ಹಿಡಿದಿವೆ.

ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ಬನ್ನಿ; ಡಾ.ನಾಗರಾಜ್‌
ಸೋಂಕಿತರ ಸಾವು ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೂ ಕಾರಣ. ಸೋಂಕು ಲಕ್ಷಣಗಳು ಕಾಣಿಸಿಕೊಂಡ ನಂತರವೂ ಆಸ್ಪತ್ರೆಗೆ ಬಾರದೆ ಮನೆಯಲ್ಲೇ ಲಭ್ಯವಿರುವ ಮಾತ್ರೆ ಸೇವಿಸುತ್ತಿದ್ದಾರೆ. ನಾಲ್ಕೈದು ದಿನದ ಬಳಿಕ ತೀವ್ರ ಅನಾರೋಗ್ಯ ಕಾಣಿಸಿಕೊಂಡಾಗ ಆಸ್ಪತ್ರೆಗೆ ಬರುತ್ತಿದ್ದು, ಆ ವೇಳೆ ಶ್ವಾಸಕೋಶಕ್ಕೆ ಸಾಕಷ್ಟು ಹಾನಿಯಾಗಿರುತ್ತದೆ. ಇಂತಹ ಮನಸ್ಥಿತಿಯಿಂದ ಹೊರಬಂದು ಸೋಂಕು ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ಬರಬೇಕು ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ನಾಗರಾಜ್‌ ತಿಳಿದಿದ್ದಾರೆ.

“3 ಲಕ್ಷ ತಲುಪುವ ಸಾಧ್ಯತೆ’
ಸೋಂಕಿನ ತೀವ್ರತೆ ಕುರಿತು ಮಾತನಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ್‌, ಸೋಂಕಿನ ತೀವ್ರತೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರಕ್ಕಿಂತ ಕರ್ನಾಟಕ ಹಿಂದಿತ್ತು. ಸದ್ಯ ಆ ಎರಡು ರಾಜ್ಯಗಳು ಇಳಿಕೆ ಹಾದಿ ಹಿಡಿದಿದ್ದು, ಕರ್ನಾಟಕ ತೀವ್ರತೆಯಲ್ಲಿ ಉಚ್ರ್ಯಾಯ ಸ್ಥಿತಿಗೆ ತಲುಪುತ್ತಿದೆ. ಜುಲೈಗಿಂತಲೂ ಆಗಸ್ಟ್‌ನಲ್ಲಿ ಸೋಂಕು ಪ್ರಕರಣಗಳು ದುಪ್ಪಟ್ಟಾಗಲಿದ್ದು, ಒಟ್ಟಾರೆ ಪ್ರಕರಣಗಳು 3 ಲಕ್ಷ ತಲುಪುವ
ಸಾಧ್ಯತೆಗಳಿವೆ. ಸೆಪ್ಟೆಂಬರ್‌ ಅಂತ್ಯಕ್ಕೆ ಇಳಿಮುಖವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಜನರ ಚಟುವಟಿಕೆ ಭಯ ಮೂಡಿಸುತ್ತಿದೆ
ನಿಮ್ಹಾನ್ಸ್‌ ವೈರಾಲಜಿ ವಿಭಾಗ ಮುಖ್ಯಸ್ಥರಾದ ಡಾ.ವಿ.ರವಿ ಮಾತನಾಡಿ, “ಅಂದಾಜಿಸಿದಂತೆಯೇ ಜುಲೈನಲ್ಲಿ ಸೋಂಕಿನ ತೀವ್ರತೆ ಹೆಚ್ಚಳವಾಗಿದೆ. 2 ವಾರಗಳ ಕಾಲ ಪ್ರಕರಣಗಳು ಸ್ಥಿರವಾಗಿದ್ದರೆ ಇಳಿಕೆ ಹಂತಕ್ಕೆ ಬರುತ್ತದೆ ಎಂದು ಅಂದಾಜಿಸಲಾಗುತ್ತದೆ. ಆದರೆ, ವಾರದಿಂದ ವಾರಕ್ಕೆ ನಿತ್ಯ ಸರಾಸರಿ ಒಂದು ಸಾವಿರದಷ್ಟು ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇನ್ನು ಕಳೆದ ಎರಡು ದಿನಗಳಿಂದ ಹಬ್ಬದ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಖರೀದಿಗೆ ಸೇರಿರುವ ಜನದಟ್ಟಣೆ ನೋಡಿದರೆ ಸೋಂಕು ಇಳಿಮುಖವಗುವ ಭರವಸೆ ಕಾಣುತ್ತಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next