Advertisement

ಖಾಸಗಿ ಆಸ್ಪತ್ರೆಗಳ ಕುರಿತ‌ ಶಿಫಾರಸಿಗೆ ತಜ್ಞರ ಸಮಿತಿ

01:15 AM Feb 06, 2019 | |

ಬೆಂಗಳೂರು: ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪದ ಚಿಕಿತ್ಸಾ ದರ ನಿಗದಿ, ಆಸ್ಪತ್ರೆಗಳ ವರ್ಗೀಕರಣ, ಮೂಲಸೌಕರ್ಯ ಹಾಗೂ ಚಿಕಿತ್ಸಾ ಗುಣಮಟ್ಟದ ನಿಯಮ ಪಾಲನೆಯ ಕುರಿತು ಶಿಫಾರಸಿಗೆ ಆರೋಗ್ಯ ಇಲಾಖೆ ತಜ್ಞರ ಸಮಿತಿಗಳನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.

Advertisement

ಈ ಆದೇಶದಂತೆ ಆಸ್ಪತ್ರೆಗಳ ವರ್ಗೀಕರಣ, ಮೂಲ ಸೌಕರ್ಯ ಆಧಾರದ ಮೇಲೆ ಆಸ್ಪತ್ರೆಯ ದರ್ಜೆ ನಿಗದಿ, ಸಿಬ್ಬಂದಿ ಆಯ್ಕೆ ಬಗ್ಗೆ ಶಿಫಾರಸು ಕುರಿತು ಆರೋಗ್ಯ ಇಲಾಖೆ ಆಯುಕ್ತರು, ಆರೋಗ್ಯ ಇಲಾಖೆ ನಿರ್ದೇಶಕರು, ಆಯುಷ್‌ ಇಲಾಖೆ ಆಯುಕ್ತರು, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು, ನಿಮ್ಹಾನ್ಸ್‌ ಆಸ್ಪತ್ರೆ ನಿರ್ದೇಶಕರು, ಐಎಂಎ ಪ್ರತಿನಿಧಿ ಡಾ. ಪ್ರಹ್ಲಾದ್‌ ಕಂಚಿ, ಮಣಿಪಾಲ್‌ ಆಸ್ಪತ್ರೆ ಸಲಹೆಗಾರ ಡಾ.ಎಸ್‌.ಸಿ.ನಾಗೇಂದ್ರ ಸ್ವಾಮಿ ಒಳಗೊಂಡ ಹತ್ತು ಮಂದಿ ತಜ್ಞರ ಸಮಿತಿ ರಚಿಸಲಾಗಿದೆ.

ಚಿಕಿತ್ಸಾ ಗುಣಮಟ್ಟದ ಹಾಗೂ ಮಾನದಂಡಕ್ಕೆ ಬಿಎಂ ಸಿಆರ್‌ಐ ಆಸ್ಪತ್ರೆ ನಿರ್ದೇಶಕರ ಮುಂದಾಳತ್ವದ ಹತ್ತು ಮಂದಿ ಸದಸ್ಯರ ಸಮಿತಿ ಹಾಗೂ ಏಕರೀತಿ ಚಿಕಿತ್ಸಾ ದರ ನಿರ್ಧರಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಕಾರ್ಯನಿರ್ವಾಹಕ ನಿರ್ದೇಶಕರು, ಖಾಸಗಿ ಆಸ್ಪತ್ರೆಗಳ ಪ್ರತಿನಿಧಿ, ಖಾಸಗಿ ವೈದ್ಯರ ಸಂಘದ ಪ್ರತಿನಿಧಿ ಒಳಗೊಂಡ ಹನ್ನೊಂದು ಮಂದಿಯ ಸಮಿತಿ ರಚಿಸಲಾಗಿದೆ.

ಕೆಪಿಎಂಇ ಕಾಯಿದೆ ಪ್ರಕಾರ ‘ಆರೋಗ್ಯ ಕರ್ನಾಟಕ’ (ಆಯುಷ್ಮಾನ್‌ಭಾರತ್‌-ಆರೋಗ್ಯ ಕರ್ನಾಟಕ) ಯೋಜನೆಯಡಿ ಸರ್ಕಾರದ ಜೊತೆ ಕೈಜೋಡಿಸಿರುವ ಆಸ್ಪತ್ರೆಗಳ ಚಿಕಿತ್ಸಾ ದರವನ್ನು ಮಾತ್ರ ಸರ್ಕಾರ ನಿರ್ಧರಿಸಬಹುದು. ಈವರೆಗೂ ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಯೋಜನೆಗೆ 2018ರ ಜೂನ್‌ನಲ್ಲಿ ತಾತ್ಕಾಲಿಕ ದರ ಪಟ್ಟಿ ಆಧಾರದ ಮೇಲೆ ಚಿಕಿತ್ಸೆ ಪಡೆದ ರೋಗಿಗಳ ಪರವಾಗಿ ಆಸ್ಪತ್ರೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿತ್ತು. ಈಗ ತಜ್ಞರ ಸಮಿತಿ ರಚಿಸಿರುವುದರಿಂದ ಚಿಕಿತ್ಸೆಗಳ ದರ ಪರಿಷ್ಕರಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next