ಉಳ್ಳಾಲ/ಮಂಗಳೂರು: ಉಳ್ಳಾಲದ ಮೊಗವೀರಪಟ್ಣ ಬಳಿ ಬಾರ್ಜ್ ಅವಘಡಕ್ಕೀಡಾಗಿ ಒಂದು ವಾರವಾದರೂ ಬಾರ್ಜ್‌ನ ತೆರವು ಅಸಾಧ್ಯವಾಗಿದ್ದು, ಬಾರ್ಜ್‌ನಲ್ಲಿರುವ ತೈಲ ಸೋರಿಕೆ ತಡೆಗಾಗಿ ಕಳೆದ ಮೂರು ದಿನಗಳಿಂದ ತಜ್ಞರ ತಂಡ ಪ್ರಯತ್ನ ಮುಂದುವರಿಸಿದೆ.
ಉಳ್ಳಾಲದ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಯ ರೀಫ್ ಕಾಮಗಾರಿಗೆಂದು ತರಿಸಲಾಗಿದ್ದ ಬಾರ್ಜ್ ಕಳೆದ
ಶನಿವಾರ ಮಧ್ಯಾಹ್ನದ ವೇಳೆಗೆ ತೆರವುಗೊಳಿಸುವ ಸಂದರ್ಭ ಅಪಘಾತಕ್ಕೀಡಾಗಿತ್ತು. ಅವಘಡ ನಡೆದ ಎರಡು ದಿನಗಳ ಕಾಲ ಬಾರ್ಜ್‌ನಲ್ಲಿದ್ದ ಸಿಬಂದಿಯನ್ನು ರಕ್ಷಿಸಲಾಯಿತು. ಎರಡು ದಿನಗಳ ಕಾಲ ಬಾರ್ಜ್ ತೆರವುಗೊಳಿಸಲು ತಜ್ಞರ ತಂಡ ಪ್ರಯತ್ನಿಸಿತ್ತು. ಆದರೆ ಕಳೆದ 3 ದಿನಗಳಿಂದ ಬಾರ್ಜ್ ಸಮುದ್ರದ ಆಳದಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಬಾರ್ಜ್‌ನೊಳಗಿರುವ ತೈಲ ಹೊರ ತೆಗೆಯುವ ಮತ್ತು ತೈಲ ಸೋರಿಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಕಂಪೆನಿ ಟಗ್ ಮೂಲಕ ಸರ್ವೇ ಕಾರ್ಯ ನಡೆಸುತ್ತಿದ್ದು, ಇನ್ನೂ ಯಶಸ್ವಿಯಾಗಿಲ್ಲ.
ಯಾಂತ್ರಿಕ ಕಾರ್ಯಾಚರಣೆ ಅಸಾಧ್ಯದಿಂದ ಹಿನ್ನಡೆ ಒಂದೆಡೆ ಬಾರ್ಜ್ ರೀಫ್ (ತಡೆದಂಡೆ)ಗೆ ಬಡಿದು ಹಾನಿಯಾಗಿ ಸಮುದ್ರದ ನೀರು ಬಾರ್ಜ್‌ನ ಕಂಪಾರ್ಟ್‌ಗಳಿಗೆ ನುಗ್ಗಿದ್ದರಿಂದ ಮೋಟಾರ್ ಸಹಿತ ಯಂತ್ರಗಳಿರುವ ಭಾಗ ಸಮುದ್ರದೊಳಗೆ ಮುಳುಗಿದ್ದು, ತೈಲ ಸಂಗ್ರಹಣಾ ಪ್ರದೇಶದಿಂದ ಯಾಂತ್ರಿಕವಾಗಿ ತೆರವು ಕಾರ್ಯಾಚರಣೆ ಅಸಾಧ್ಯ. ತೈಲ ಸಂಗ್ರಹಣೆ ಇರುವ ಬಾರ್ಜ್‌ನ ಭಾಗಕ್ಕೆ ಮುಳುಗು ತಜ್ಞರು ತೆರಳಿ ಪರಿಶೀಲನೆ ನಡೆಸಿದರೆ ಮಾತ್ರ ತೈಲ ಸೋರಿಕೆ ಅಥವಾ ತೈಲ ಸ್ಥಳಾಂತರ ಪ್ರಕ್ರಿಯೆ ನಡೆಸಲು ಸಾಧ್ಯವಿದ್ದು, ಆದರೆ ಇದು ಸುಲಭ ಸಾಧ್ಯವಿಲ್ಲ. ಸಮುದ್ರ ಅತ್ಯಂತ ಬಿರುಸಾಗಿದ್ದು, ಮುಳುಗು ತಜ್ಞರು ಕೂಡ ಸಮುದ್ರಕ್ಕೆ ಇಳಿಯಲಾಗದ ಸ್ಥಿತಿ ಇದೆ. ಇನ್ನೊಂದೆಡೆ ಇಂತಹ ಪ್ರಯತ್ನದ ಸಂದರ್ಭ ಬಾರ್ಜ್ ಬಡಿಯುವ ಅಪಾಯವೂ ಇದೆ ಎನ್ನುತ್ತಾರೆ ಅಧಿಕಾರಿಗಳು.
ತೈಲ ಸೋರಿಕೆಯಾದರೆ ಮುನ್ನೆಚ್ಚರಿಕೆಗೆ ತಂಡ ಬಾರ್ಜ್ ಪ್ರತೀ ದಿನ ಸಮುದ್ರದ ಅಲೆಗಳಿಗೆ ಸಿಲುಕಿ ಒಂದೊಂದೇ ವಸ್ತುಗಳು ನೀರುಪಾಲಾಗುತ್ತಿದ್ದು, ತೈಲ ಸಂಗ್ರಹವಿರುವ ಟ್ಯಾಂಕ್‌ನ ಸುತ್ತಲಿನ ಭಾಗಕ್ಕೆ ಹಾನಿಯಾದರೆ ತೈಲ ಸೋರಿಕೆ ಖಚಿತವಾಗಿದೆ. ಈ ನಿಟ್ಟಿನಲ್ಲಿ ತೈಲ ಸೋರಿಕೆಯಿಂದ ದಡ ಪ್ರದೇಶದ ಜನರಿಗೆ ತೊಂದರೆಯಾಗದಂತೆ ಕೆಮಿಕಲ್ ಸಿಂಪಡಿಸುವ ನಿಟ್ಟಿನಲ್ಲಿ ಒಂದು ತಂಡವನ್ನು ಸನ್ನದ್ಧವಾಗಿಟ್ಟುಕೊಂಡಿದ್ದು, ಯಾವುದೇ ಕ್ಷಣದಲ್ಲೂ ತೈಲ ಸೋರಿಕೆಯಾದರೆ ಉಳ್ಳಾಲ ಸಮುದ್ರ ದಡಕ್ಕೆ ಈ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಲಿದೆ.
ತಜ್ಞರಿಂದ ವರದಿ ಸಾಧ್ಯತೆ ಬಾರ್ಜ್‌ನಿಂದ ಇಂಧನ ತೆರವುಗೊಳಿಸಲು ವಿದೇಶದಿಂದ ಕರೆ ತರಲಾದ ತಂತ್ರಜ್ಞರು ಶುಕ್ರವಾರವೂ ಯತ್ನದಿಂದ ಹಿಂದೆ ಸರಿದಿದ್ದು, ಘಟನೆ ಹಾಗೂ ಇಂಧನ ತೆರವು ಕುರಿತು ಜಿಲ್ಲಾಡಳಿತ ನೇತೃತ್ವದ ತಜ್ಞರಿಗೆ ಶನಿವಾರ ವರದಿ ನೀಡುವ ಸಾಧ್ಯತೆಗಳಿವೆ. ಜಿಲ್ಲಾಡಳಿತ ನೀಡಿದ ನಿಗದಿತ ಸಮಯದೊಳಗೆ ಇಂಧನ ತೆರವುಗೊಳಿಸಲು ಕಂಪೆನಿ ವಿಫಲವಾಗಿದೆ.
ಶುಕ್ರವಾರ ಉದಯವಾಣಿಯ ಜತೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಅವರು, “ಈವರೆಗೆ ಯಾವುದೇ ಯತ್ನಗಳು ಯಶ ಪಡೆದಿಲ್ಲ. ಗುರುವಾರ ಇದ್ದ ಸ್ಥಿತಿಯೇ ಶುಕ್ರವಾರವೂ ಇದೆ. ತಂತ್ರಜ್ಞರು ಪ್ರಯತ್ನ ನಡೆಸುತ್ತಿದ್ದಾರಾದರೂ ಅಲೆಗಳ ಅಬ್ಬರದಿಂದಾಗಿ ಇಂಧನ ತೆರವುಗೊಳಿಸಲು ಸಾಧ್ಯವಾಗಿಲ್ಲ. ಶನಿವಾರವೂ ಪ್ರಯತ್ನ ಮುಂದುವರಿಯಲಿದೆ’ ಎಂದಿದ್ದಾರೆ.
ದಡಕ್ಕೆ ಬಂದಿರುವ ಸಾಮಗ್ರಿಗಳ ವಿಲೇವಾರಿ
ಬಾರ್ಜ್‌ನಿಂದ ಸಮುದ್ರದ ದಡಕ್ಕೆ ಬರುತ್ತಿರುವ ಸಾಮಗ್ರಿಗಳನ್ನು ತುಂಡು ಮಾಡಿ ಸಾಗಿಸುವ ಕಾರ್ಯ ನಡೆಯುತ್ತಿದೆ. ಇದರ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದು, ಲಕ್ಷಾಂತರ ಮೌಲ್ಯದ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅವಘಡದ ಸಂದರ್ಭ ವಸ್ತುಗಳು ತನಿಖೆ ಮುಗಿಯುವ ವರೆಗೆ ತುಂಡು ಮಾಡಿ ಮಾರುವಂತಿಲ್ಲ. ಆದರೂ ಇಲ್ಲಿ ಮಾರುತ್ತಿರುವುದು ಆಶ್ಚರ್ಯಕರ ಎಂದು ಸ್ಥಳೀಯ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಹೈದರ್ ತಿಳಿಸಿದ್ದಾರೆ.