Advertisement

ಆಯೋಗದಲ್ಲಿ ತಜ್ಞರಿಗೆ ಅವಕಾಶ

02:44 PM Jul 08, 2018 | Team Udayavani |

ಬೆಂಗಳೂರು: ಭಾರತೀಯ ಉನ್ನತ ಶಿಕ್ಷಣ ಆಯೋಗವು ಸಂಪೂರ್ಣ ಸ್ವಾಯತ್ತತೆ ಹೂಂದಿ ಅಧಿಕಾರಶಾಹಿ ಪ್ರತಿನಿಧಿಗಳಿಗೆ ಮನ್ನಣೆ ನೀಡದೆ ವಿಜ್ಞಾನ, ತಂತ್ರಜ್ಞಾನ ವಲಯದ ತಜ್ಞರಿಗೆ ಅವಕಾಶ ಕಲ್ಪಿಸಬೇಕು ಎಂದು ಉನ್ನತ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ ಪ್ರಸ್ತಾಪಿಸಿರುವ ಭಾರತೀಯ ಉನ್ನತ ಶಿಕ್ಷಣ ಆಯೋಗ ಕಾಯ್ದೆ-2018ರ (ಯುಜಿಸಿ ಕಾಯ್ದೆ -1956 ರದ್ದುಪಡಿಸಿ) ಕುರಿತಂತೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಸಂಸ್ಥೆ (ಸೆಸ್‌) ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ವಿಶ್ವವಿದ್ಯಾಲಯಗಳ ಪ್ರಸಕ್ತ, ವಿಶ್ರಾಂತ ಕುಲಪತಿಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಭಾಗವಹಿಸಿ, ತಮ್ಮ ಅಭಿಪ್ರಾಯ ಮಂಡಿಸಿದರು.

ಭಾರತೀಯ ಉನ್ನತ ಶಿಕ್ಷಣ ಆಯೋಗ ಕಾಯ್ದೆಯ ಅಂಶಗಳಾದ ಸ್ವಾಯತ್ತತೆ, ಕಾರ್ಯಗಳು, ಅನುದಾನ, ಸದಸ್ಯರುಗಳ ನೇಮಕಾತಿ ಕುರಿತು ಜೈನ್‌ ವಿಶ್ವವಿದ್ಯಾಲಯದ ಸಮಕುಲಪತಿ ಡಾ.ಸಂದೀಪ್‌ ಶಾಸಿŒ ಅಧ್ಯಕ್ಷತೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತು.

ದೇಶದ ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಗಳು ಆಯೋಗದ ವ್ಯಾಪ್ತಿಗೆ ಒಳಪಡಬೇಕು. ಆಯೋಗದ ಆಧ್ಯಕ್ಷರು, ಸದಸ್ಯರು ಹಾಗೂ ಕುಲಪತಿಗಳ ಅಧಿಕಾರ ಒಂದೇ ಅವಧಿಗೆ ಸೀಮಿತಗೊಳ್ಳಬೇಕು. ಯಾವುದೇ ಕಾರಣಕ್ಕೂ ಅವರು ಎರಡನೇ ಅವಧಿಗೆ ಮುಂದುವರಿಯಲು ಅವಕಾಶ ನೀಡಬಾರದು. ಆಯ್ಕೆಯಲ್ಲಿ ಪಾರದರ್ಶಕತೆ ಮತ್ತು ಸಾಮಾಜಿಕ ನ್ಯಾಯ ಕಾಪಾಡಿಕೊಂಡು ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.

ಉನ್ನತ ಶಿಕ್ಷಣ ಸಂಸ್ಥೆಗಳ ಕುಂದುಕೊರತೆ ನಿವಾರಿಸುವ ವ್ಯವಸ್ಥೆ ರಚನೆಯಾಗಬೇಕು ಎಂದು ಅಭಿಪ್ರಾಯಪಟ್ಟಿರುವ ತಜ್ಞರು, ಕಾಯ್ದೆಯಲ್ಲಿ ಕೆಲವು ಅಗತ್ಯ ತಿದ್ದುಪಡಿಯಾಗಬೇಕು ಎಂದು ಸಲಹೆ ನೀಡಿದ್ದಾರೆ. ಬೆಂವಿವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂ.ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ತುಮಕೂರು ವಿವಿ ಕುಲಪತಿ ಸಿದ್ದೇಗೌಡ, ವಿಶ್ರಾಂತ ಕುಲಪತಿಗಳಾದ ಪ್ರೊ.ಎಚ್‌.ಎ.ರಂಗನಾಥ,  ಪ್ರೊ.ಕಾವೇರಿಯಪ್ಪ, ಪ್ರೊ.ಬಲವೀರರೆಡ್ಡಿ, ಪ್ರೊ.ಮುನಿಯಮ್ಮ, ಐಸೆಕ್‌ ನಿರ್ದೇಶಕ ಪ್ರೊ. ಚಂದ್ರಕಾಂತ್‌ ಸೇರಿದಂತೆ ಹಲವು ಮಂದಿ  ಶಿಕ್ಷಣ ತಜ್ಞರು ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next