Advertisement

ಕೋವಿಡ್ ಹಿನ್ನೆಲೆ :ಶಾಲಾ-ಕಾಲೇಜು ಬಂದ್‌ಗೆ ತಜ್ಞರ ಶಿಫಾರಸ್ಸು?

09:14 PM Mar 20, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ದೃಷ್ಠಿಯಿಂದ ಎರಡು ವಾರಗಳ ಮಟ್ಟಿಗೆ ಶಾಲಾ – ಕಾಲೇಜು, ಜಿಮ್‌, ಈಜುಕೊಳ ಬಂದ್‌ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಶಿಫಾರಸ್ಸನ್ನು ಆರೋಗ್ಯ ತಜ್ಞರು ಸರ್ಕಾರಕ್ಕೆ ನೀಡಿದ್ದಾರೆ.

Advertisement

ದಿನದಿಂದ ದಿನಕ್ಕೆ ಹೊಸ ಕೋವಿಡ್ ಪ್ರಕರಣಗಳು ಏರಿಕೆ ಹಾದಿಯಲ್ಲಿಯೇ ಸಾಗುತ್ತಿರುವ ಹಿನ್ನೆಲೆ ಶುಕ್ರವಾರ (ಮಾರ್ಚ್‌ 19) ತಡರಾತ್ರಿ ಕೋವಿಡ್ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಶಿಫಾರಸ್ಸು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಸಚಿವರು ತಜ್ಞರ ಶಿಫಾರಸ್ಸನ್ನು ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ.

ಪ್ರಮುಖವಾಗಿ ಶಾಲೆ – ಕಾಲೇಜುಗಳು, ಜಿಮ್‌, ಈಜುಕೊಳ ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದು, ಎರಡು ವಾರಗಳ ಮಟ್ಟಿಗೆ ಬಂದ್‌ ಮಾಡಬೇಕು. ಒಳಾಂಗಣ ಕಾರ್ಯಕ್ರಮಕ್ಕೆ 100 ಮತ್ತು ಹೊರಾಂಗಣ ಕಾರ್ಯಕ್ರಮಕ್ಕೆ 200 ಮಂದಿಗೆ ಮಾತ್ರ ಅವಕಾಶ ನೀಡಬೇಕು. ಜತೆಗೆ ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಆಸನ ಭರ್ತಿಗೆ ಅವಕಾಶ ನೀಡಬೇಕು ಎಂಬ ಇತ್ಯಾದಿ ಶಿಫಾರಸ್ಸು ನೀಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸ‌ದ ತಜ್ಞರೊಬ್ಬರು ತಿಳಿಸಿದರು.

ಇದನ್ನೂ ಓದಿ:ಅತ್ಯಾಚಾರವೆಸಗಲು ಮುಂದಾದ ವ್ಯಕ್ತಿಯ ಮರ್ಮಾಂಗ ಕತ್ತರಿಸಿದ ಮಹಿಳೆ

Advertisement

ಸದ್ಯ ರಾಜ್ಯದಲ್ಲಿ ಮದುವೆ, ಧಾರ್ಮಿಕ ಸಭೆ, ಇತರೆ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 500 ಮತ್ತು ಸಮಾಂಗಣದಲ್ಲಿ 200 ಮಂದಿಗೆ ಅವಕಾಶವಿತ್ತು.ಅದನ್ನು ಅರ್ಧಕ್ಕೆ ಇಳಿಸಲು ಸೂಚಿಸಲಾಗಿದೆ.

ಮುಂದಿನ ವಾರ ಜಾರಿ?
ಸೋಂಕು ಮತ್ತೆ ಹೆಚ್ಚಳವಾದಾಗಿನಿಂದ (ಮಾರ್ಚ್‌ನಲ್ಲಿ) ವಾರಕ್ಕೆ ಒಂದು ಅಥವಾ ಎರಡು ಬಾರಿ ತಜ್ಞರ ತಾಂತ್ರಿಕ ಸಮಿತಿ ಸಭೆಯು ನಡೆಯುತ್ತಿದೆ. ಸಭೆಯ ಬಳಿಕ ನೀಡುವ ಶಿಫಾರಸ್ಸನ್ನು ಒಂದೆರಡು ದಿನಗಳಲ್ಲಿಯೇ ರಾಜ್ಯ ಸರ್ಕಾರ ಜಾರಿಗೊಳಿಸುತ್ತದೆ. ಶುಕ್ರವಾರ ರಾತ್ರಿ ಸಭೆ ನಡೆದಿದ್ದು, ಶಿಫಾರಸ್ಸು ಜಾರಿ ಸಾಧ್ಯತೆಗಳನ್ನು ಅವಲೋಕಿಸಿ ಆನಂತರ ಸುತ್ತೋಲೆ ಹೊರಡಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಸೋಂಕು ಒಂದೇ ವಾರದಲ್ಲಿ ಹೊಸ ಪ್ರಕರಣಗಳು ದುಪ್ಪಟಾಗಿವೆ. ಹೀಗಾಗಿ, ಮುಂದಿನ ವಾರ ಈ ಮೇಲ್ಕಂಡ ಕಠಿಣ ಕ್ರಮಗಳು ಜಾರಿಗೊಳ್ಳುವ ಸಾಧ್ಯತೆಯೇ ಹೆಚ್ಚಿವೆ.

ಮಹಾರಾಷ್ಟ್ರ, ಕೇರಳ ಬಿಟ್ಟರೆ ನಮ್ಮಲ್ಲೆ ಹೆಚ್ಚು!
ಸದ್ಯ ದೇಶದಲ್ಲಿ ನಿತ್ಯ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಕೊರೊನಾ ಕೇಸ್‌ ಪೈಕಿ ಅತಿ ಹೆಚ್ಚು ಮಹಾರಾಷ್ಟ್ರ, (25 ಸಾವಿರಕ್ಕಿಂತ ಹೆಚ್ಚು), ಕೇರಳದಲ್ಲಿ (2,000ಕ್ಕಿಂತ ಹೆಚ್ಚು) ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ಬಿಟ್ಟರೆ ಮೂರನೇ ಅತಿ ಹೆಚ್ಚು ಕೇಸ್‌ ಕರ್ನಾಟಕದಲ್ಲಿ ವರದಿಯಾಗುತ್ತಿವೆ.

ವಾರದಲ್ಲಿ ಹೊಸ ಕೇಸ್‌ ದುಪ್ಪಟ್ಟು!
ಕಳೆದ ವಾರ ಈ ಸಂದರ್ಭದಲ್ಲಿ (ಮಾರ್ಚ್‌ 12-13) ನಿತ್ಯ ಹೊಸ ಪ್ರಕರಣಗಳು 900 ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಈ ವಾರ ದುಪ್ಪಟ್ಟು ವರದಿಯಾಗುತ್ತಿದ್ದು, ಶನಿವಾರ 1,798 ಮಂದಿಗೆ ಸೋಂಕು ತಗುಲಿದ್ದು, ಏಳು ಸೋಂಕಿತರು ಸಾವಿಗೀಡಾಗಿದ್ದಾರೆ. ತಿಂಗಳಾರಂಭದಲ್ಲಿ ಶೇ 1ಕ್ಕಿಂತ ಕಡಿಮೆ ಇದ್ದ ಸೋಂಕು ಪರೀಕ್ಷೆಗಳ ಪಾಸಿಟಿವಿ ದರ ಶೇ 2ಕ್ಕೆ ಹೆಚ್ಚಳವಾಗಿದೆ. ಅಂದರೆ, ಪರೀಕ್ಷೆಗೊಳಗಾಗುವ 100 ಮಂದಿಯಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗುತ್ತಿದೆ. ರಾಜ್ಯದಲ್ಲಿ 12828 ಸಕ್ರಿಯ ಸೋಂಕಿತರು ಆಸ್ಪತ್ರೆ, ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next