Advertisement

ನಾಲ್ಕು ತಿಂಗಳಲ್ಲಿ ಪ್ರಾಯೋಗಿಕ ಪೂರೈಕೆ ಶುರು

10:02 AM Aug 27, 2018 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿಯ ಹೊಸ್ತಿಲಲ್ಲಿರುವ ಮಂಗಳೂರಿನ ಮನೆ ಮನೆಗೆ ಮುಂದಿನ ಏಳು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಅಡುಗೆ ಅನಿಲವು ಪೈಪ್‌ ಮೂಲಕ ಲಭ್ಯವಾಗಲಿದೆ. ಆ ಪ್ರಕಾರ, ಈ ವರ್ಷಾಂತ್ಯದೊಳಗೆ ಸುರತ್ಕಲ್‌ ಭಾಗದಲ್ಲಿ ಪ್ರಾಯೋಗಿಕವಾಗಿ ಮನೆ- ಮನೆಗೆ ಅಡುಗೆ ಅನಿಲ ಪೂರೈಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.

Advertisement

ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಗೇಲ್‌ (ಇಂಡಿಯಾ) ವತಿಯಿಂದ ಕೊಚ್ಚಿಯಿಂದ ಮಂಗಳೂರುವರೆಗೆ ಗ್ಯಾಸ್‌ ಪೈಪ್‌ ಲೈನ್‌ ಅಳವಡಿಕೆ ಕಾರ್ಯ ಈಗಾಗಲೇ ಕೊನೆ ಹಂತದಲ್ಲಿದ್ದು, ಸುಮಾರು 50 ಕಿ.ಮೀ. ಉದ್ದ ಲೈನ್‌ ಅಳವಡಿಕೆ ಮಾತ್ರ ಬಾಕಿಯಿದೆ.

ಕೊಚ್ಚಿಯಿಂದ ಮಂಗಳೂರಿನ ಎಂಸಿಎಫ್‌ಗೆ ನೈಸರ್ಗಿಕ ಅನಿಲ ಪೂರೈಸುವ ನಿಟ್ಟಿನಲ್ಲಿ ಪೈಪ್‌ಲೈನ್‌ ಸಾಗಿ ಬರಲಿದ್ದು, ಬಂಟ್ವಾಳ, ಮಂಗಳೂರು ತಾಲೂಕಿನ ಸುಮಾರು 16 ಹಳ್ಳಿಗಳ ವ್ಯಾಪ್ತಿಯಲ್ಲಿ 35 ಕಿ.ಮೀ. ಉದ್ದದಲ್ಲಿ ಸಾಗಲಿದೆ. ಈ ಪೈಕಿ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಪೈಪ್‌ಲೈನ್‌ ಅಳವಡಿಕೆ ಬಾಕಿಯಿದೆ. ಇದೇ ಅನಿಲವನ್ನು ಮಂಗಳೂರಿಗೂ ನಳ್ಳಿಗಳ ಮೂಲಕ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಕೊಚ್ಚಿ- ಮಂಗಳೂರು ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಯಾಗಿ ಗ್ಯಾಸ್‌ ಸರಬರಾಜು ಆರಂಭವಾಗಲು ಇನ್ನೂ ಸುಮಾರು 5- 6 ತಿಂಗಳು ಬೇಕಿದೆ. ಬಳಿಕ ಮಹಾನಗರ ಪಾಲಿಕೆ, ನೀರಿನ ಪೈಪ್‌ಲೈನ್‌, ಒಳಚರಂಡಿ ಲೈನ್‌ ಗಮನಿಸಿ, ಮೆಸ್ಕಾಂ, ಬಿಎಸ್‌ಎನ್‌ಎಲ್‌, ಇತರ ಇಲಾಖೆಯ ಅನುಮತಿ ಪಡೆದು ಸಿಟಿಯಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆ ನಡೆಯಲಿದೆ.

ಸುರತ್ಕಲ್‌ ಭಾಗದಲ್ಲಿ ಅನುಷ್ಠಾನ
ಪೈಲೆಟ್‌ ಪ್ರೊಜೆಕ್ಟ್ ರೀತಿಯಲ್ಲಿ ಸುಮಾರು 200ರಿಂದ 500ರಷ್ಟು ಮನೆ- ಉದ್ಯಮಕ್ಕೆ ನಳ್ಳಿ ಮೂಲಕ ಗ್ಯಾಸ್‌ ವಿತರಿಸುವ ಯೋಜನೆ ಇರಿಸಲಾಗಿದೆ. ಸುರತ್ಕಲ್‌ ಭಾಗದಲ್ಲಿರುವ ಎಂಆರ್‌ಪಿಎಲ್‌ ಟೌನ್‌ ಶಿಪ್‌ನ ವ್ಯಾಪ್ತಿಯಲ್ಲಿರುವ ಕೆಲವು ಮನೆ- ಉದ್ಯಮಕ್ಕೆ ಪೈಪ್‌ಲೈನ್‌ ಅಳವಡಿಸಲು ಉದ್ದೇಶಿಸಲಾಗಿದೆ. ಕತಾರ್‌ ನಿಂದ ಎಲ್‌ ಎನ್‌ಜಿಯು ಹಡಗಿನ ಮೂಲಕ ಗೇಲ್‌ನ ಕೊಚ್ಚಿನ್‌ ಟರ್ಮಿನಲ್‌ಗೆ ಬರುತ್ತಿ ದೆ. ಇದನ್ನು ‘ಎಲ್‌ಪಿಜಿ ಬುಲೆಟ್‌’ ಇದ್ದ ಹಾಗೆ ‘ಎಲ್‌ಎನ್‌ಜಿ ಬುಲೆಟ್‌’ ಮೂಲಕ ಹಡಗಿನಲ್ಲಿ ಮಂಗಳೂರಿಗೆ ತಂದರೆ ಸುಮಾರು 1,000 ಸಂಪರ್ಕ ಒಂದು ತಿಂಗಳಿಗೆ ಬರಲಿದೆ ಅಥವಾ ರಸ್ತೆಯ ಮೂಲಕ ಎಲ್‌ಪಿಜಿ ಟ್ಯಾಂಕರ್‌ನಂತೆ ‘ಕ್ರಯೋಜನಿಕ್‌ ಟ್ಯಾಂಕರ್‌’ನಲ್ಲಿ ನಗರಕ್ಕೆ ತರುವ ಸಾಧ್ಯತೆಯೂ ಇದೆ. 

ಹೀಗೆ ಮಂಗಳೂರಿಗೆ ಬರುವ ಎಲ್‌ಎನ್‌ಜಿಯನ್ನು ಗ್ಯಾಸ್‌ ಆಗಿ ಪರಿವರ್ತಿಸಲು ಕೊಚ್ಚಿ ಟರ್ಮಿನಲ್‌ ರೀತಿಯ ಸಣ್ಣ ಮಟ್ಟದ ಟರ್ಮಿನಲ್‌ ಕೂಡ ಇಲ್ಲಿ ನಿರ್ಮಾಣವಾಗಲಿದೆ. ಅಲ್ಲಿಂದ ವಾಹನಗಳ ಪೂರೈಕೆ (ಸಿಎನ್‌ಜಿ), ಗೃಹ ಬಳಕೆ (ಪಿಎನ್‌ಜಿ) ವಾಣಿಜ್ಯ ಬಳಕೆ ಹಾಗೂ ಕೈಗಾರಿಕೆಗಳ ಬಳಕೆ ಎಂಬುದಾಗಿ ಬೇರ್ಪಡಿಸಿ ಗೇಲ್‌ ಸಂಸ್ಥೆಯು ಅನಿಲ ಪೂರೈಕೆ ಮಾಡಲಿದೆ.

Advertisement

ನಳ್ಳಿ ಅನಿಲದಿಂದ ಲಾಭವೇನು?
ಪಿಎನ್‌ಜಿ (ಗೃಹ ಬಳಕೆ)ಯಲ್ಲಿ ಪರಿಸರಕ್ಕೆ ಇಂಗಾಲ ಬಿಡುಗಡೆ ಪ್ರಮಾಣ ಎಲ್‌ಪಿಜಿಗಿಂತ ಶೇ.50ರಷ್ಟು ಕಡಿಮೆ. ಸೋರಿಕೆ ಆದರೂ ವಾತಾವರಣದಲ್ಲಿ ಆವಿಯಾಗುವ ಗುಣವಿದೆ. ಜತೆಗೆ, ಗ್ರಾಹಕರು ಬಳಕೆ ಮಾಡುವ ಅನಿಲಕ್ಕಷ್ಟೇ ಹಣ ಪಾವತಿ ಮಾಡಬೇಕಾಗುತ್ತದೆ. ಸಿಲಿಂಡರಿಗೆ ಮರುಪೂರಣ ಹಾಗೂ ಬುಕಿಂಗ್‌ ಮಾಡುವ ತಲೆಬಿಸಿಯಿಲ್ಲ. ಸಿಲಿಂಡರ್‌ ನಷ್ಟೇ ಪ್ರಮಾಣದ ಅನಿಲ ಶೇ.20 ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತದೆ.

ಎಲ್‌ಪಿಜಿಗೆ ಬಳಕೆ ಮಾಡುವ ಸ್ಟೌ ಅನ್ನು ಪಿಎನ್‌ಜಿಗೂ ಬಳಸಬಹುದು. ಆದರೆ, ಇದರ ಬರ್ನರ್‌ ಬದಲಿಸಬೇಕು. ಅನಿಲ ಸೋರಿಕೆಗೆ ಆಸ್ಪದ ಇಲ್ಲದಂತೆ ಕೊಳವೆ ಅನಿಲ ಸಂಪರ್ಕ ಮಾರ್ಗ ನಿರ್ಮಿಸಲಾಗುತ್ತದೆ.

ಆಕಸ್ಮಿಕವಾಗಿ ಏನಾದರೂ ಹಾನಿಯಾಗಿ ಅನಿಲ ಸೋರಿಕೆ ಆದರೆ, ಕಡಿಮೆ ಸಾಂದ್ರತೆ ಅನಿಲವಾಗಿರುವುದರಿಂದ ಇದು ವಾತಾವರಣದ ಮೇಲ್ಭಾಗಕ್ಕೆ ಹೋಗಿ ಆವಿಯಾಗುತ್ತದೆ. ಗ್ರಾಹಕರು ಮೀಟರ್‌ ಭಾಗದಲ್ಲಿರಿವ ವಾಲ್‌Ì ಅನ್ನು ಬಂದ್‌ ಮಾಡಿ ವಿತರಣೆ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಮೂಲಗಳು ತಿಳಿಸಿವೆ. 

2030ರೊಳಗೆ ಪೂರ್ಣ
ಕೊಚ್ಚಿನ್‌ನಿಂದ ಮಂಗಳೂರುವರೆಗಿನ 430 ಕಿ.ಮೀ.ಉದ್ದದ ಗ್ಯಾಸ್‌ಪೈಪ್‌ಲೈನ್‌ ಅಳವಡಿಸಲು ಎರಡು ವರ್ಷ ಸಾಕಾಗಬಹುದು. ಆದರೆ, ಸಿಟಿಯೊಳಗೆ ಗ್ಯಾಸ್‌ಪೈಪ್‌ಲೈನ್‌ ಅಳವಡಿಕೆ ಬಹಳಷ್ಟು ನಿಧಾನವಾಗಿ ನಡೆಯಲಿದೆ. ಹಾಗಾಗಿ ನಗರದೊಳಗೆ ಗ್ಯಾಸ್‌ಪೈಪ್‌ ಲೈನ್‌ ಪೂರ್ಣವಾಗಲು ಅಂತಿಮ ಗಡುವು 2030 ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಿರ್ಧರಿಸಿದೆ. 18 ಅಥವಾ 12 ಇಂಚು ವ್ಯಾಸದ ಪೈಪ್‌ಲೈನ್‌ ಸಿಟಿಯೊಳಗೆ ಅಳವಡಿಸುವ ಸಾಧ್ಯತೆಯಿದೆ. 

ಮೂರು ಸಂಪರ್ಕ ಸಾಧ್ಯತೆ 
ಕೊಚ್ಚಿ-ಮಂಗಳೂರು ಗ್ಯಾಸ್‌ಪೈಪ್‌ಲೈನ್‌ ಪೂರ್ಣಗೊಂಡ ಬಳಿಕ (ಮುಂದಿನ ವರ್ಷದ ಮೇ ಅಂತ್ಯ)ಬೈಕಂಪಾಡಿಯ ಎಂಸಿಎಫ್‌ನಿಂದ ಸುರತ್ಕಲ್‌ ಭಾಗದ ಮನೆ ಮನೆಗೆ ಗ್ಯಾಸ್‌ಪೈಪ್‌ಲೈನ್‌ಅಳವಡಿಕೆ ನಡೆಯುವ ಸಾಧ್ಯತೆಯಿದೆ. ಫರಂಗಿಪೇಟೆ ಭಾಗದಲ್ಲಿ ಹಾದುಹೋಗುವ ಮುಖ್ಯ ಗ್ಯಾಸ್‌ಪೈಪ್‌ಲೈನ್‌ನಿಂದ ಸಂಪರ್ಕ ಪಡೆದು ಪಡೀಲ್‌ ಮೂಲಕವಾಗಿ ಮಂಗಳೂರಿಗೆ ಒದಗಿಸುವ ಗುರಿಯಿದೆ. ಇನ್ನು ಪಜೀರು, ಕೈರಂಗಳ ಭಾಗದಲ್ಲಿ ಹಾದುಹೋಗುವ ಮುಖ್ಯ ಗ್ಯಾಸ್‌ಪೈಪ್‌ ಲೈನ್‌ನಿಂದ ತೊಕ್ಕೊಟ್ಟು ಸುತ್ತಮುತ್ತಲ ಪ್ರದೇಶದ ಮನೆಗಳಿಗೆ ಪೈಪ್‌ ಲೈನ್‌ ಮೂಲಕ ಗ್ಯಾಸ್‌ ಒದಗಿಸುವ ಚಿಂತನೆಯಿದೆ. ಇದಕ್ಕೆ ಆ ಪ್ರದೇಶದ ಸಾರ್ವಜನಿಕರ ಒಪ್ಪಿಗೆ ಅಗತ್ಯ. ಇದಕ್ಕಾಗಿ ಗೇಲ್‌ ಸಂಸ್ಥೆಯಿಂದ ಜನರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅನಿಲ ಸಾಗಾಟ ಹೇಗೆ?
ಸದ್ಯ ಬೆಂಗಳೂರಿನಲ್ಲಿ ಅನುಷ್ಠಾನದಲ್ಲಿರುವ ಪ್ರಕಾರ, ಗ್ಯಾಸ್‌ ಪೈಪ್‌ಲೈನ್‌ನ ಮುಖ್ಯಕೊಳವೆಯಿಂದ ಮುಖ್ಯನಗರದಲ್ಲಿ ಸಬ್‌ಸ್ಟೇಷನ್‌ ಮಾಡಿ ಅಲ್ಲಿಂದ ಸಣ್ಣ ಮಟ್ಟದ ಪೈಪ್‌ ಗಳ ಮೂಲಕ ಸರಬರಾಜು ಮಾಡಲಾಗುತ್ತದೆ. ಹೀಗಾಗಿ ಮಂಗಳೂರು ಆದಿಯಾಗಿ ಎಂಸಿಎಫ್‌ ಗೆ ತೆರಳುವ ಗ್ಯಾಸ್‌ ಪೈಪ್‌ಲೈನ್‌ಗೆ ನಗರ ವ್ಯಾಪ್ತಿಯೊಳಗೆ ಸಬ್‌ಸ್ಟೇಷನ್‌ ಮಾಡಿ ಅಲ್ಲಿಂದ ಹಂಚಿಕೆ ಮಾಡಲು ಯೋಚಿಸಲಾಗಿದೆ. ಅಗತ್ಯವಿರುವ ಮನೆಯವರು ಈ ಗ್ಯಾಸ್‌ ಪೈಪ್‌ ಲೈನ್‌ನಿಂದ ಅನಿಲವನ್ನು ಸಂಬಂಧಪಟ್ಟ ಸಂಸ್ಥೆಯವರಿಂದ ಪಡೆದುಕೊಳ್ಳಬಹುದು. ಎಲ್‌ಪಿಜಿಯಿಂದ ಪಿಎನ್‌ಜಿಗೆ ಸುಲಭದಲ್ಲಿ ಬದಲಾಗಬಹುದು. ಎಲ್‌ಪಿಜಿಗೆ ಬಳಸುವ ಸ್ಟೌ ಅನ್ನೇ ಪಿಎನ್‌ಜಿಗೂ ಬಳಸಬಹುದು. ಆದರೆ ಇದರ ಬರ್ನರ್‌ ಬದಲಾಯಿಸಬೇಕಾಗುತ್ತದೆ. ಪಿಎನ್‌ಜಿ ವಿತರಕ ಸಂಸ್ಥೆಯವರು ಇದನ್ನು ನೀಡಬಹುದು ಎಂದು ಮೂಲಗಳು ತಿಳಿಸಿವೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next