Advertisement

ವರ್ಚುವಲ್‌ ಪ್ರದರ್ಶನದಲ್ಲಿ “ಪ್ರಯೋಗ ವಸಂತ್” ; ದೇಶದಲ್ಲೇ ಮೊದಲ ಪ್ರಯೋಗ

03:32 PM Jul 09, 2020 | mahesh |

ಹುಬ್ಬಳ್ಳಿ: ಕೋವಿಡ್‌-19 ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನೂತನ ತಂತ್ರಜ್ಞಾನ ಬಳಕೆ ಮಾಡಿಕೊಂಡ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳನ್ನು ವರ್ಚುವಲ್‌ ತಂತ್ರಜ್ಞಾನದ ಮೂಲಕ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಕೆಎಲ್‌ಇ ತಾಂತ್ರಿಕ ವಿವಿಯ ಸೆಂಟರ್‌ ಫಾರ್‌ ಎಂಜಿನಿಯರಿಂಗ್‌ ಎಜುಕೇಶನ್‌ ರಿಸರ್ಚ್‌ ಮೊದಲ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ತಾಂತ್ರಿಕ ಮಾದರಿಗಳನ್ನು ಜು. 9 ಹಾಗೂ 10ರಂದು ವರ್ಚುವಲ್‌ ತಂತ್ರಜ್ಞಾನದ ಮೂಲಕ ಪ್ರದರ್ಶಿಸುತ್ತಿದೆ. ಇದು ದೇಶದಲ್ಲಿಯೇ ಮೊದಲ ಪ್ರಯೋಗವಾಗಿದೆ.

Advertisement

ವಿಶ್ವದ ವಿವಿಧ ದೇಶಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಿಷಯ ತಜ್ಞರು ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳನ್ನು ವೀಕ್ಷಿಸಿ ಸಲಹೆ-ಸೂಚನೆ ನೀಡಬಹುದಾಗಿದ್ದು, ಕೆಎಲ್‌ಇ ವಿವಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ತೋರಲು ಬಹುದೊಡ್ಡ ವೇದಿಕೆ ಇದಾಗಿದೆ. ಪಾಶ್ಚಾತ್ಯ ದೇಶಗಳ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುತ್ತಿದ್ದ ಸೌಲಭ್ಯವನ್ನು ತನ್ನ ವಿದ್ಯಾರ್ಥಿಗಳಿಗೆ ಒದಗಿಸಲು ವಿಶ್ವವಿದ್ಯಾಲಯ ಸನ್ನದ್ಧವಾಗಿದೆ. ಪ್ರತಿ ವರ್ಷ ಮೊದಲ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳ ಪ್ರದರ್ಶನ
“ಪ್ರಯೋಗ ವಸಂತ್‌’ ಮೇ ತಿಂಗಳಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಕಾಲೇಜು ಬಂದ್‌ ಆಗಿದ್ದರಿಂದ ವಿದ್ಯಾರ್ಥಿಗಳು ಮಾರ್ಚ್‌ ತಿಂಗಳಲ್ಲಿ ತಮ್ಮ ಮನೆಗಳಿಗೆ ತೆರಳಿದ್ದರು. ನಂತರ ಆನ್‌ಲೈನ್‌ ಮೂಲಕ ಶಿಕ್ಷಣ ಮುಂದುವರೆಯಿತು.

ಎಂಜಿನಿಯರಿಂಗ್‌ ಎಕ್ಸಪ್ಲೋರೇಶನ್‌ ಕೋರ್ಸ್ ನಡಿ ವಿದ್ಯಾರ್ಥಿಗಳ ಪ್ರಾಜೆಕ್ಟ್ ಭೌತಿಕ ಪ್ರದರ್ಶನ ಆಯೋಜನೆ ಸಾಧ್ಯವಾಗದ್ದರಿಂದ ವರ್ಚುವಲ್‌ ಪ್ರದರ್ಶನ ನಡೆಸಲು ನಿರ್ಧರಿಸಿ ಸಾಮಾಜಿಕ ಜನಜೀವನದಲ್ಲಿ ಕಂಡುಬರುವ 21 ಸಮಸ್ಯೆಗಳ ಆಧಾರಿತ ಟಾಪಿಕ್‌ಗಳನ್ನು ನೀಡಿ 700 ವಿದ್ಯಾರ್ಥಿಗಳಲ್ಲಿ 171 ತಂಡಗಳನ್ನು ಮಾಡಿ ಪ್ರಾಜೆಕ್ಟ್ ಮಾಡಲು ಸೂಚಿಸಲಾಯಿತು. ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳು ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗ್ಳನ್ನು ಬಳಕೆ ಮಾಡಿಕೊಂಡು ಲ್ಯಾಬ್‌ ಇಲ್ಲದೇ ತಮ್ಮ ಮನೆಗಳಲ್ಲಿಯೇ ಕುಳಿತು ಪ್ರಾಜೆಕ್ಟ್ ಸಿದ್ಧಪಡಿಸಿದ್ದಾರೆ.

ಭಿನ್ನ-ವಿಭಿನ್ನ ಪ್ರಾಜೆಕ್ಟ್ ಗಳು
ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅನುಕೂಲವಾಗುವ ಆಟೊಮ್ಯಾಟಿಕ್‌ ಡಿಸ್ಪೆನ್ಸರ್‌, ಫ್ಲೋರ್‌ ಕ್ಲೀನಿಂಗ್‌ ರೊಬಾಟ್ಸ್‌, ರೈತರಿಗೆ ಅನುಕೂಲವಾಗುವ ಅಗ್ರಿ ಮೆಕ್ಯಾನಿಸಂ ಯಂತ್ರೋಪಕರಣಗಳು, ಹೋಟೆಲ್‌ಗ‌ಳಲ್ಲಿ ಆಟೋಮ್ಯಾಟಿಕ್‌ ಸರ್ವ್‌ ಮಾಡುವ “ಕೆಟರಿಂಗ್‌ ರೊಬೊಟ್ಸ್‌’, ವೈವಿಧ್ಯ ವಾದ್ಯಗಳನ್ನು ನುಡಿಸುವ ಮ್ಯುಸಿಕಲ್‌ ಬಾಟ್ಸ್‌ ಯಂತ್ರ, ಮೋಟರ್‌ ವೈಂಡಿಂಗ್‌ ಕ್ಷೇತ್ರಕ್ಕೆ ಪೂರಕವಾಗುವ ಆಟೊಮ್ಯಾಟಿಕ್‌ ವೈಂಡಿಂಗ್‌ ಮಶಿನ್‌, ಮೇಜರ್‌ವೆುಂಟ್‌ ಟೂಲ್ಸ್‌, ನೋಟ್‌ ಕೌಂಟಿಂಗ್‌ ಪಿಗ್ಗಿ ಬ್ಯಾಂಕ್‌ ಹೀಗೆ ಮೊದಲ ವರ್ಷದ ವಿದ್ಯಾರ್ಥಿಗಳ ವಿಭಿನ್ನ ಪ್ರಾಜೆಕ್ಟ್ಗಳು ಪ್ರದರ್ಶಿತಗೊಳ್ಳಲಿವೆ. ಎಲ್ಲ ಪ್ರಾಜೆಕ್ಟ್ಗಳು ಭೌತಿಕ ರೂಪದಲ್ಲಿರದೇ ವರ್ಚುವಲ್‌ ರೂಪದಲ್ಲಿರುವುದು ವಿಶೇಷ. ಸರ್ಕಿಟ್‌ ಹಾಗೂ ಪ್ರೋಗ್ರಾಮ್‌ ಮೂಲಕ ಸ್ಟಿಮ್ಯುಲೇಶನ್‌ ಮಾಡಲಾಗಿದೆ. ಮುಂದೆ ಪ್ರಾಜೆಕ್ಟ್ಗಳಿಗೆ ಭೌತಿಕ ರೂಪ ನೀಡಬಹುದಾಗಿದೆ.

ಎಲ್ಲಿ ಪ್ರದರ್ಶನ?
ಚೀನಾ ಅಪ್ಲಿಕೇಶನ್‌ಗಳನ್ನು ನಿಷೇಧ ಮಾಡಿರುವುದರಿಂದ “ಮೈಕ್ರೊಸಾಫ್ಟ್‌ ಟೀಮ್‌’ ಅಪ್ಲಿಕೇಶನ್‌ ಮೂಲಕ ಪ್ರದರ್ಶನ ನಡೆಯಲಿದೆ. ಈಗಾಗಲೇ ದೇಶ-ವಿದೇಶಗಳ 500 ಜನರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಎರಡು ದಿನಗಳ ಕಾಲ ನಾಲ್ಕು ಸೆಷನ್‌ಗಳು ನಡೆಯಲಿವೆ. ವಿದ್ಯಾರ್ಥಿಗಳಲ್ಲದೇ ಗೈಡ್‌ಗಳು ಕೂಡ ಪ್ರಾಜೆಕ್ಟ್ ಬಗ್ಗೆ ವಿವರಿಸಬಹುದಾಗಿದೆ. ತಜ್ಞರು ನೀಡುವ ಫಿಡ್‌ಬ್ಯಾಕ್‌ ಪ್ರಾಜೆಕ್ಟ್ ಅನ್ನು ಉತ್ತಮ ಪ್ರಾಡಕ್ಟ್ ಆಗಿ ರೂಪಿಸುವಲ್ಲಿ ಸಹಾಯಕವಾಗಲಿದೆ.

Advertisement

ಕೋವಿಡ್‌-19 ಕಾರಣದಿಂದಾಗಿ ಆಯೋಜಿಸಿರುವ ವರ್ಚುವಲ್‌ ಪ್ರದರ್ಶನ ನಮ್ಮ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಪೂರಕವಾಗಿದೆ. ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳನ್ನು ದೇಶ-ವಿದೇಶಗಳ ವಿಷಯ ತಜ್ಞರು ವೀಕ್ಷಿಸಲಿದ್ದು, ಅವರ ಸಲಹೆ-ಸೂಚನೆಗಳು ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸಲಿವೆ. ವಿಷಯವನ್ನು ಮನದಟ್ಟು ಮಾಡಿಕೊಳ್ಳಲು ಇಂಥ ಪ್ರದರ್ಶನಗಳು ಸಹಾಯಕವಾಗಲಿವೆ.
ಡಾ| ಅಶೋಕ ಶೆಟ್ಟರ, ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ

ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿಯೂ ತಂತ್ರಜ್ಞಾನ ವಿದ್ಯಾರ್ಥಿಗಳನ್ನು ಕ್ರಿಯಾಶೀಲವಾಗಿಸಿದೆ. ಅಂಕಗಳಿಗಿಂತ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮುಖ್ಯ.
ವಿದ್ಯಾರ್ಥಿಗಳು ಮನೆಗಳಲ್ಲಿದ್ದರೂ ತಂಡಗಳನ್ನು ಮಾಡಿಕೊಂಡು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಅನುಕೂಲವಾಗುವ ವಿಶಿಷ್ಟ ಮಾದರಿಗಳನ್ನು ರೂಪಿಸಿದ್ದಾರೆ. ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳು ಹೆಚ್ಚೆಚ್ಚು ಜನರಿಗೆ ತಲುಪಲು ವರ್ಚುವಲ್‌ ಎಕ್ಸಿಬಿಷನ್‌ ಸಹಾಯಕವಾಗಿದೆ. ದೇಶ-ವಿದೇಶಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ನಮ್ಮ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲು ಉತ್ಸುಕರಾಗಿದ್ದಾರೆ.
ಡಾ| ಗೋಪಾಲಕೃಷ್ಣ ಜೋಶಿ, ನಿರ್ದೇಶಕರು, ಸೆಂಟರ್‌ ಫಾರ್‌ ಎಂಜಿನಿಯರಿಂಗ್‌ ಎಜುಕೇಶನ್‌ ರಿಸರ್ಚ್‌, ಕೆಎಲ್‌ಇ ತಾಂತ್ರಿಕ ವಿವಿ

Advertisement

Udayavani is now on Telegram. Click here to join our channel and stay updated with the latest news.

Next