Advertisement
ಸೋಲೊ ಪ್ರವಾಸಿಗರಿಗೆ ನಾವು ಕೇಳಿದ ಪ್ರಶ್ನೆಗಳು…
Related Articles
Advertisement
ಈವರೆಗಿನ ಪ್ರವಾಸದಲ್ಲಿ ಆಗಿರುವ ಮರೆಯಲಾಗದ ಅನುಭವ/ ಪ್ರಸಂಗಗಳ ಕುರಿತು ತಿಳಿಸಿ.
ಸೋಲೊ ಪ್ರವಾಸಿಗರು ತಗೊಳ್ಳಬೇಕಾದ ಎಚ್ಚರಿಕೆಗಳು ಏನೇನು? ಸೋಲೊ ಪ್ರವಾಸಿಗರಿಗೆ ನೀವು ಕೊಡಬಹುದಾದ ಸಲಹೆಗಳೇನು?
ನಮ್ಮಿಷ್ಟದಂತೆ ಸುತ್ತಬಹುದು…
ಯುವ ಬಳಗದ ಕಾರ್ಯಕ್ರಮವೊಂದರಲ್ಲಿ ಸೋಲೊ ಪ್ರವಾಸಿಗರನ್ನು ಭೇಟಿಯಾಗಿ, ಅವರ ಸಾಹಸಗಾಥೆಗಳನ್ನು ಕೇಳಿದ ನಂತರ ನನಗೂ ಸೋಲೊ ಪ್ರವಾಸ ಹೋಗಬೇಕೆಂಬ ಮನಸ್ಸಾಯಿತು. ಎಂ.ಎ. ಓದುತ್ತಿದ್ದಾಗ ಮಾಡಿದ್ದ ಫ್ರಿಲ್ಯಾನ್ಸ್ ಕೆಲಸದಿಂದ, ಜೇಬಲ್ಲಿ ಕಿರು ಪ್ರವಾಸ ಹೋಗುವಷ್ಟು ಹಣವಿತ್ತು. ಹೀಗೆ ಏಕಾಏಕಿ 2020ರ ಡಿಸೆಂಬರ್‌ನಲ್ಲಿ ಚಿಕ್ಕ ಲಗೇಜ್ ಜೊತೆ, ಬೆಂಗಳೂರಿಂದ ಹಂಪಿಯ ರೈಲೇರಿದೆ.
ಚಿಕ್ಕಂದಿನಿಂದಲೂ ಪುರಾತತ್ವ ಸ್ಥಳಗಳ ಬಗ್ಗೆ ಅತೀವ ಆಸಕ್ತಿಯಿದ್ದ ನನಗೆ, ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಶಿಲ್ಪಕಲಾ ವೈಭವವು ಅಚ್ಚಳಿಯದೆ ಮನದಲ್ಲಿ ಉಳಿಯಿತು. Dormitoryಯಲ್ಲಿ ಮುಂಬೈ ಹುಡುಗಿ ಅನನ್ಯಾಳ ಸಂಗವಾಯಿತು. ನಾವಿಬ್ಬರೂ ಜೊತೆಯಲ್ಲಿ ಹಂಪಿ ಸುತ್ತಾಡಿದೆವು. ಮೂರು ವರ್ಷದಿಂದ ಸೋಲೊ ಪ್ರವಾಸ ಮಾಡುತ್ತಿದ್ದು, ಇಲ್ಲಿಯವರೆಗೆ ಹಂಪಿ, ಬಾದಾಮಿ- ಪಟ್ಟದಕಲ್ಲು, ಗೋಕರ್ಣ- ಮುರ್ಡೇಶ್ವರ, ಉಜ್ಜಯಿನಿ- ಮಥುರಾ-ಆಗ್ರಾ, ಒರಿಸ್ಸಾದ ಪುರಿ-ಕೊನಾರ್ಕ್-ಕಟಕ್… ಹೀಗೆ ಹಲವು ಸ್ಥಳಗಳಿಗೆ ಪಯಣಿಸಿದ್ದೇನೆ.
ಹೆಚ್ಚಾಗಿ ರೈಲು, ಬಸ್ಸಿನಲ್ಲಿ ಪಯಣಿಸುತ್ತೇನೆ. ಹತ್ತಿರದಲ್ಲಿರುವ 2-3 ಜಾಗಗಳ ಬಗ್ಗೆ ಮೊದಲೇ ಜಾಲಾಡಿ ವೇಳಾಪಟ್ಟಿ ಸಿದ್ಧಪಡಿಸುತ್ತೇನೆ. ಕೆಲಸ ಹಾಗೂ ರಜೆಯನ್ನು ಉತ್ತಮ ರೀತಿಯಲ್ಲಿ ಬ್ಯಾಲೆನ್ಸ್ ಮಾಡಲು ಹಗಲು ಪ್ರವಾಸದ ವೇಳೆಯಲ್ಲಿ ವರ್ಕ್ ಫ್ರಮ್ ಹೋಂ ಆಯ್ಕೆಯನ್ನು ಆರಿಸುತ್ತೇನೆ. ಇದರಿಂದ ಜಾಸ್ತಿ ರಜೆ ತೆಗೆದುಕೊಳ್ಳುವುದು ತಪ್ಪುತ್ತದೆ.
ಮರೆಯಲಾಗದ ಅನುಭವ: ಪೊಲೀಸ್ ಕರೆಸ್ತೇನೆ ಅಷ್ಟೆ..! ;
ಸ್ವಾತಂತ್ರ್ಯ ದಿನಾಚರಣೆಯ ದೀರ್ಘ ರಜೆಯಲ್ಲಿ ಮಥುರಾಗೆ ತೆರಳಿದ್ದೆ. ಎಷ್ಟು ಅಲೆದಾಡಿದರೂ ಎಲ್ಲೂ ರೂಂ ಸಿಗಲಿಲ್ಲ. ಕೊನೆಗೆ ಸಿಕ್ಕಿದ ರೂಂನಲ್ಲಿ ಹೋಟೆಲ್ ಕೆಲಸಗಾರ ಅಸಭ್ಯವಾಗಿ ವರ್ತಿಸುತ್ತಿದ್ದ. ಮಧ್ಯರಾತ್ರಿ 12 ಗಂಟೆಗೆ ಹಲವು ಬಾರಿ ನನ್ನ ರೂಂ ಬಾಗಿಲು ಬಡಿದು, ಪದೇಪದೇ ಕರೆ ಮಾಡುತ್ತಿದ್ದ. ಭದ್ರವಾಗಿ ಚಿಲಕ ಹಾಕಿದ ನಾನು, ಪೊಲೀಸ್‌ಗೆ ಕರೆ ಮಾಡ್ತೇನೆ ಅಂತ ಏರುಧ್ವನಿಯಲ್ಲಿ ಕಿರುಚಿದೆ. ಪೊಲೀಸ್ ಎಂದು ಹೇಳುತ್ತಿದ್ದಂತೆ ಆತ ಸುಮ್ಮನಾದ.
ಉಪಯೋಗಗಳು:
ಮನಸು ಬಂದಾಗ ಬ್ಯಾಗ್ ತೆಗೆದುಕೊಂಡು ಎಲ್ಲಾದರೂ ಹೋಗಬಹುದು. ತಂಡದಲ್ಲಿ ಹೋಗಬೇಕಾದರೆ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
ಇಷ್ಟಬಂದ ಸ್ಥಳಗಳಿಗೆ ಹೋಗಬಹುದು. ಬೇಡ ಎನಿಸಿದ ಸ್ಥಳವನ್ನು ಪಟ್ಟಿಯಿಂದ ಕೈಬಿಡಬಹುದು. ಬೇಕೆನಿಸಿದಾಗ ಪ್ರವಾಸ ಮೊಟಕುಗೊಳಿಸಬಹುದು. ಅನಿಸಿದ್ದು ಮಾಡುವ ಸ್ವಾತಂತ್ರ್ತ ಇರುತ್ತೆ. ಇನ್ನೊಬ್ಬರ ಅವಲಂಬನೆ ತಪ್ಪುತ್ತದೆ.
ಒಂಟಿ ಯಾತ್ರೆಯ ಕಷ್ಟಗಳು:
ಒಬ್ಬರೇ ಪ್ರಯಾಣ ಮಾಡುವಾಗ ಖರ್ಚು ಜಾಸ್ತಿ. ತಂಡದಲ್ಲಿ ಹೋಗುವಾಗ ಖರ್ಚು-ವೆಚ್ಚಗಳನ್ನು ಎಲ್ಲರೂ ಸೇರಿ ಭರಿಸುತ್ತಾರೆ.
ಅಕಸ್ಮಾತ್ ಹುಷಾರು ತಪ್ಪಿದರೆ, ಆರೈಕೆ ಮಾಡಲು ಯಾರೂ ಇರುವುದಿಲ್ಲ.
ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಸದಾ ಕಾಲ ಮೈಯೆಲ್ಲ ಕಣ್ಣಾಗಿರಬೇಕು.
ಮರೆಯಬಾರದ ಸಂಗತಿಗಳು:
ನಿಮ್ಮೊಂದಿಗೆ ಮೆಡಿಕಲ್ ಕಿಟ್ ಹಾಗೂ ಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳಿ.
ಅಪಾಯಕಾರಿ ಸ್ಥಳಗಳಿಗೆ ಭೇಟಿ ಕೊಡದಿರಿ.
ಬೆಲೆ ಬಾಳುವ ವಸ್ತುಗಳನ್ನು ಇಟ್ಟುಕೊಳ್ಳಬೇಡಿ.
ಸೊಂಟಕ್ಕೆ ಕಟ್ಟಿಕೊಳ್ಳುವ ಚೀಲದಲ್ಲಿ ಮೊಬೈಲ್ ಹಾಗೂ ಪರ್ಸ್ ಇರಿಸಿಕೊಳ್ಳಿ.
ನೀವು ಹೋಗುವ ಜಾಗದ ವಸತಿ ಬಗ್ಗೆ ನಿಗಾ.
ಸಲಹೆಗಳು:
ಹೋಗುವ ಸ್ಥಳಗಳ ಬಗ್ಗೆ, ಅಲ್ಲಿ ಅಡ್ಡಾಡುವ ಬಗ್ಗೆ ಮೊದಲೇ ಮಾಹಿತಿ ಕಲೆ ಹಾಕಿಕೊಳ್ಳಿ.
ಆನ್‌ಲೈನ್‌ನಲ್ಲಿ ಮುಂಗಡವಾಗಿ ರೂಂ ಕಾದಿರಿಸಿ.
ಒಂದೇ ದಿನದಲ್ಲಿ ಜಾಸ್ತಿ ಸ್ಥಳಗಳನ್ನು ಸುತ್ತದಿರಿ.
3-4 ದಿನದ ಪ್ರವಾಸದಲ್ಲಿ ಕನಿಷ್ಠ ಅರ್ಧ ದಿನವಾದರೂ ವಿಶ್ರಾಂತಿಗೆ ಮೀಸಲಿಡಿ.
-ಪ್ರಜ್ಞಾ ಹೆಬ್ಬಾರ್, ಪುತ್ತೂರು
*****************************************************************************************************
ಧೈರ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ…
ಆಗಿನ್ನೂ ಬೆಂಗಳೂರಿಗೆ ಬಂದ ಹೊಸತು. ರಜಾ ದಿನ ಹಾಗೂ ವೀಕೆಂಡ್‌ಗಳಲ್ಲಿ ಸಮಯ ಕಳೆಯಲು ಒಂದಿಷ್ಟು ಪುಸ್ತಕ ಹಿಡಿದುಕೊಂಡು ಬಸೊÕà ರೈಲೋ ಹತ್ತಿ ಹೊರಟು ಬಿಡುತ್ತಿದ್ದೆ. ಇಂಥದ್ದೇ ಅನ್ನೋ ಗಮ್ಯವೇನಿಲ್ಲ, ದಾರಿಯುದ್ದಕ್ಕೂ ಪುಸ್ತಕ ಓದುತ್ತಾ ದೂರದ ಊರುಗಳಿಗೆ ಹೋಗೋದು, ಅಲ್ಲಿರೋ ನೋಡುವಂಥಾ ಜಾಗಗಳ ಕುರಿತು ವಿಚಾರಿಸಿ ಎಲ್ಲವನ್ನೂ ವೀಕ್ಷಿಸಿ ಹಿಂದಿರುಗೋದು. ಹೀಗೆ ಶುರುವಾದ ಅಭ್ಯಾಸವೊಂದು ಅತ್ಯಾಪ್ತವಾದ ಹವ್ಯಾಸವಾಗಿ ಬಿಟ್ಟಿತು. ಈ ಹವ್ಯಾಸದಿಂದಾಗಿ ಭಾರತದ ಅಷ್ಟೂ ರಾಜ್ಯಗಳ ನೂರಾರು ಜಾಗಗಳನ್ನು ಏಕಾಂಗಿಯಾಗಿ ತಿರುಗಾಡಿ ಬರುವಂತಾಯಿತು. ಅದರಲ್ಲೂ, ಅತ್ಯಂತ ಸೂಕ್ಷ್ಮಪ್ರದೇಶಗಳೆಂದು ಕರೆಸಿಕೊಳ್ಳುವ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಹಾಗೂ ತ್ರಿಪುರ ರಾಜ್ಯಗಳನ್ನೂ ಏಕಾಂಗಿಯಾಗಿ ಸುತ್ತಿಬಂದಿದ್ದು ರೋಚಕ ಅನುಭವ.
ಏಕಾಂಗಿ ಪ್ರವಾಸದ ಅನುಕೂಲ:
ಇನ್ಯಾರಧ್ದೋ ಆಜ್ಞೆ, ಮರ್ಜಿಗೆ ಕಾಯಬೇಕಾದ ಅಗತ್ಯವಿರೋದಿಲ್ಲ. ಸಮಯದ ನಿರ್ಬಂಧ ಇರುವುದಿಲ್ಲ.
ನಮ್ಮಿಷ್ಟದ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನಮ್ಮಿಷ್ಟಬಂದಂತೆ ನೋಡಬಹುದಾದ ಸ್ವಾತಂತ್ರ್ಯವಿರುತ್ತದೆ.
ಸ್ಥಳೀಯರೊಂದಿಗೆ ಸಂವಹನದಲ್ಲಿ ತೊಡಗಿಸಿಕೊಳ್ಳಬಹುದು. ಅದರಿಂದಾಗಿ ಹೊರ ಜಗತ್ತಿಗೆ ತಿಳಿಯದಂತೆ ತೆರೆಮರೆಯಲ್ಲೇ ಉಳಿದಿರೋ ಅದೆಷ್ಟೋ ಅದ್ಭುತ ಜಾಗಗಳ ದರ್ಶನ ಸಾಧ್ಯ
ಎದುರಾಗೋ ಸಮಸ್ಯೆಗಳು:
ಒಬ್ಬರೇ ಇದ್ದಲ್ಲಿ ಬಹುತೇಕ ಹೋಟೆಲ್‌ಗಳಲ್ಲಿ ತಂಗಲು ರೂಮು ಕೊಡೋದಿಲ್ಲ.
ಪ್ರಯಾಣದಲ್ಲಿ ಶೌಚಾಲಯ ಸೇರಿದಂತೆ ಇತರೆ ತುರ್ತು ಕೆಲಸಕ್ಕೆ ತೆರಳುವಾಗ ಲಗೇಜುಗಳ ಕಾಯ್ದುಕೊಳ್ಳುವಿಕೆಯದೇ ಸಮಸ್ಯೆ.
ಹಠಾತ್ ಕಾಣಿಸಿಕೊಳ್ಳೋ ಆರೋಗ್ಯ ಸಮಸ್ಯೆಗಳನ್ನು ಏಕಾಂಗಿ ಯಾಗಿ ಎದುರಿಸೋ ಸವಾಲು.
ವಾಹನ, ವಸತಿ ಸೇರಿದಂತೆ ಏಕಾಂಗಿಯಾಗಿಯೇ ಹಣ ಪಾವತಿಸಬೇಕಾಗುತ್ತದೆ. ಪ್ರವಾಸದ ಖರ್ಚು ವೆಚ್ಚ ಅಧಿಕವಾಗುತ್ತದೆ.
ಸಲಹೆಗಳು:
ಲಗೇಜಿನ ಭಾರ ಆದಷ್ಟೂ ಕಮ್ಮಿಯಿರುವಂತೆ ನೋಡಿಕೊಳ್ಳಿ. ಆಟೋ ಇತ್ಯಾದಿಗಳನ್ನು ಬಳಸುವಾಗ ರಕ್ಷಣೆಯ ದೃಷ್ಟಿಯಿಂದ ಆದಷ್ಟೂ ಶೇರಿಂಗ್ ಪದ್ಧತಿಗಳಿರೋದನ್ನೇ ಆಯ್ದುಕೊಳ್ಳೋದು, ಇಂಥವು ಗಳನ್ನು ಆದಷ್ಟೂ ಹಗಲು ಪ್ರಯಾಣಕ್ಕಷ್ಟೇ ಮೀಸಲಿಡೋದು ಉತ್ತಮ.
ಅಗತ್ಯದ ಎಲ್ಲಾ ಮಾತ್ರೆಗಳನ್ನೊಳಗೊಂಡ ತುರ್ತು ಚಿಕಿತ್ಸಾ ಕಿಟ್ ಯಾವತ್ತೂ ಜೊತೆಗಿರಬೇಕು.
ಜೊತೆಗೊಂದು ಡೈರಿಯಿರಲಿ. ಅದರಲ್ಲಿ ಪ್ರವಾಸದ ಸಂಪೂರ್ಣ ಕೈಪಿಡಿ, ತಲುಪಬೇಕಿರೋ ಜಾಗಗಳ ಮಾಹಿತಿ, ತುರ್ತು ದೂರವಾಣಿ ಸಂಖ್ಯೆಗಳನ್ನೆಲ್ಲಾ ಬರೆದಿಟ್ಟುಕೊಂಡಿರಿ.
ದೂರ ಪ್ರಯಾಣವಾದಲ್ಲಿ ಯಾವಾಗಲೂ ಜೊತೆಗೊಂದು ಎರಡನೇ ಮೊಬೈಲ್ ಕೊಂಡೊಯ್ಯಬೇಕು. ಅದರಲ್ಲಿ ಪ್ರವಾಸದ ಎಲ್ಲಾ ಬುಕ್ಕಿಂಗ್ ರಶೀದಿಗಳನ್ನು ತುಂಬಿಸಿಟ್ಟುಕೊಂಡಿರಬೇಕು. ಯಾಕೆಂದರೆ ನಮ್ಮ ಮೊಬೈಲ್ ಕಳ್ಳತನ, ಅಪಘಾತ ಇತ್ಯಾದಿ ಸಮಸ್ಯೆಯಿಂದಾಗಿ ಯಾವ ಸಂದರ್ಭದಲ್ಲೂ ಕೈಕೊಡೋ ಸಾಧ್ಯತೆಗಳಿರುತ್ತವೆ.
ಒಂದಿಷ್ಟು ಹಣವನ್ನು ತುರ್ತಿಗೆಂದು ಪ್ರತ್ಯೇಕವಾಗಿ ಇಟ್ಟುಕೊಂಡಿರಬೇಕು.
ಮರೆಯಲಾಗದ ಅನುಭವ:
ಜಮ್ಮುವಿನಿಂದ ಶ್ರೀನಗರಕ್ಕೆ ಇನ್ನಿಬ್ಬರು ಪ್ರಯಾಣಿಕರೊಂದಿಗೆ ಶೇರಿಂಗ್ ಕಾರೊಂದರಲ್ಲಿ ಪ್ರಯಾಣಿಸುತ್ತಿದ್ದೆ. ತಡರಾತ್ರಿ ಅದೊಂದು ಚೆಕ್ ಪೋಸ್ಟ್ ಬಳಿ, ತಪಾಸಣೆಗಾಗಿ ಕಾರನ್ನು ತಡೆದ ಪೊಲೀಸರು, ನಮ್ಮನ್ನೆಲ್ಲಾ ಹತ್ಯೆಯ ಆರೋಪದಲ್ಲಿ ಬಂಧಿಸಿ ಕೂರಿಸಿಬಿಟ್ಟಿದ್ದರು. ಅಷ್ಟಕ್ಕೂ ಏನಾಗಿತ್ತೆಂದರೆ, ನಾವು ಅಲ್ಲಿಗೆ ತಲುಪೋ ಸ್ವಲ್ಪ ಮೊದಲು ಅಲ್ಲಿ ಪ್ರಮುಖರೊಬ್ಬರ ಹತ್ಯೆಯಾಗಿತ್ತು. ನಾಲ್ಕು ಜನರಿದ್ದ ಕೊಲೆಗಾರರ ಗುಂಪಿನಲ್ಲಿ ಒಬ್ಬ ಸರ್ದಾರ್ಜಿ ಹಾಗೂ ಕಾಶ್ಮೀರಿ ಮುಸ್ಲಿಂ ಇದ್ದರಂತೆ. ನಾವೂ ನಾಲ್ಕು ಜನ, ಅದರಲ್ಲೊಬ್ಬ ಸರ್ದಾರ್ಜಿ, ಮತ್ತೂಬ್ಬ ಕಾಶ್ಮೀರಿ ಮುಸ್ಲಿಂ ಹಾಗೂ ನಮ್ಮಿಬ್ಬರ ಕಾರಿನ ಬಣ್ಣ ಮಾಡೆಲ್ ಎರಡೂ ಒಂದೇ ಆಗಿತ್ತು. ಇದೂ ಸಾಲದೆಂಬಂತೆ ಕೊಲೆಗಾರರಲ್ಲೊಬ್ಬ ಧರಿಸಿದ್ದಂಥದ್ದೇ ಕಪ್ಪು ಜರ್ಕಿನ್ ನಮ್ಮ ಕಾರಿನ ಡ್ರೈವರ್ ಬಳಿ ಇತ್ತು! ಅದ್ಯಾವ ದೈವಗಳ ಅನುಗ್ರಹವೋ, ಕೊನೆಗೂ ಬೆಳಗಿನ ಜಾವದ ಹೊತ್ತಿಗೆ ಹತ್ಯೆಯ ನಿಜವಾದ ಆರೋಪಿಗಳು ಸೆರೆ ಸಿಕ್ಕಿದ್ದರಿಂದಾಗಿ ನಾವು ಸ್ಟೇಷನ್ನಿನಿಂದ ಬಿಡುಗಡೆಯಾಗಿ ಹೊರಬಂದೆವು.
-ಸುಧೀರ್ ಸಾಗರ್, ಸಾಗರ
*********************************************************************************************************
20 ಸಾವಿರ ಕಿ.ಮೀ., ಪಯಣಿಸಿರುವೆ..!
ಈವರೆಗೆ ಕರ್ನಾಟಕದ ಉತ್ತರ ಗಡಿಯಾದ ತೆಲಂಗಾಣದವರೆಗೆ ಮತ್ತು ದಕ್ಷಿಣದಲ್ಲಿ ತಮಿಳುನಾಡು ಗಡಿಯವರೆಗೆ; ಕಲ್ಬುರ್ಗಿ, ಬೀದರ್, ವಿಜಯಪುರ, ಹುಬ್ಬಳ್ಳಿ, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿತ್ರದುರ್ಗ, ಹಾಸನ ಸೇರಿದಂತೆ ಬಹುತೇಕ ಐತಿಹಾಸಿಕ ಸ್ಥಳಗಳು,ಯಾರಿಗೂ ತಿಳಿಯದಿರುವ ಕೆಲವು ಪ್ರವಾಸಿ ತಾಣಗಳು, ಕಾಳಿ ನದಿಯಂಚಲ್ಲಿರುವ ಮೂಲ ಪಶ್ಚಿಮ ಘಟ್ಟಗಳ ಕಾಡುಗಳನ್ನೆಲ್ಲ ಸುತ್ತಿದ್ದೇನೆ. ಕೆಲವು ಸಂದರ್ಭ-ಸನ್ನಿವೇಶಗಳು, ಏಕಾಂತ ಪ್ರಯಾಣದ ಅವಕಾಶ ಮಾಡಿ ಕೊಟ್ಟವು. ಆದರೆ ಒಂದು ಗುರಿ, ಧ್ಯೇಯ ಅಂತ ಇರಲಿಲ್ಲ. ಅಮರನಾಥ ಯಾತ್ರೆ, ವೈಷ್ಣೋದೇವಿ ದರ್ಶನ, ದೆಹಲಿ ಪ್ರವಾಸ ಗಳು ಇದಕ್ಕೆ ಇಂಬು ಕೊಡುತ್ತಾ ಹೋದವು. ನಂತರದ ಕೊರೊನಾ ಸಣ್ಣ ವಿರಾಮ ನೀಡಿದ್ದರೂ, ಲಾಕ್‌ಡೌನ್ ಮುಗಿದ ನಂತರ ಖಚಿತವಾದ ಉದ್ದೇಶ ಇಟ್ಟು ಹೊರಟ ಈ ಪಯಣ ಇಂದು 20 ಸಾವಿರ ಕಿ. ಮೀ. ದಾರಿ ಸವೆಸಲು ಸಾಧ್ಯ ಮಾಡಿದೆ.
ಎಚ್ಚರವಿರಲಿ…
ಒಬ್ಬರೇ ಹೋಗುವಾಗ ಸ್ವಂತ ವಾಹನವಾದರೆ ಅದರ ಬಗ್ಗೆ ಒಂದಿಷ್ಟು ಬೇಸಿಕ್ ಮಾಹಿತಿ ಇರಲಿ. ಸಣ್ಣಪುಟ್ಟ ತೊಂದರೆಗಳನ್ನು ಅಲ್ಲಲ್ಲೇ ಸರಿ ಮಾಡಿಕೊಂಡು ಮುಂದುವರೆಯುವಷ್ಟು ತಿಳಿದಿದ್ದರೆ ಉತ್ತಮ. ಎಷ್ಟು ದಿನದ ಪ್ರಯಾಣ, ತಂಗುವ ವ್ಯವಸ್ಥೆ ಎಲ್ಲಿ, ಭೇಟಿ ಕೊಡುವ ಜಾಗಗಳ ಬಗ್ಗೆ ಮೂಲಭೂತ ತಿಳುವಳಿಕೆ ಇದ್ದರೆ ಒಳ್ಳೆಯದು. ದ್ವಿಚಕ್ರ ವಾಹನದಲ್ಲಿ ಟೂರ್ ಹೊರಟರೆ ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ಗಮನದಲ್ಲಿರಬೇಕು.
ಅನುಕೂಲ:
ನಮ್ಮ ಕಂಫರ್ಟ್ ಝೋನ್‌ನಿಂದ ಹೊರಗೆ ಬರುವ ಅವಕಾಶವನ್ನು ತಂದುಕೊಡುತ್ತದೆ. ನಮ್ಮೊಳಗಿರುವ ಶಕ್ತಿಯ ಪೂರ್ಣಬಳಕೆಗೆ ಸಹಾಯ ಮಾಡುತ್ತದೆ. ಹೋದ ಜಾಗಗಳ ಜನರ ಆಹಾರ ವಿಹಾರ, ಆಚಾರ ವಿಚಾರ, ನೆಲ ಸಂಸ್ಕೃತಿಯ ಪರಿಚಯಕ್ಕೆ ಪೂರಕವಾಗಿರುತ್ತದೆ.
ಅಪಾಯ:
ಸೋಲೊ ಟ್ರಾವೆಲ್‌ನಲ್ಲಿ ಹುಡುಗಿಯರಿಗೆ ಮೂಲಭೂತ ಅಗತ್ಯ ಪೂರೈಸಿಕೊಳ್ಳುವುದು ಮತ್ತು ತಂಗುವ ವ್ಯವಸ್ಥೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗುತ್ತವೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸಣ್ಣಪುಟ್ಟ ತೊಂದರೆಗಳೂ ಎದುರಾಗಬಹುದು. ಅಪಘಾತಗಳಂತಹ ಅವಘಡ ಅಥವಾ ಸಹ ಪ್ರವಾಸಿಗಳಿಂದ ಆಗಬಹು ದಾದ ತೊಂದರೆ. ಉಳಿದಂತೆ ಕಾಡಿನಲ್ಲಿ ಹೋಗುವಾಗ ವನ್ಯಜೀವಿಗಳು ಎದುರಾಗಬಹುದು. ಹಾಗೆಯೇ, ಸಮುದ್ರ ತೀರವಾದರೆ ಅಲ್ಲಿ ಆಟ ಆಡುವಾಗ ಮುಂಜಾಗ್ರತೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮರೆಯಲಾಗದಅನುಭವ: ಸಹಾಯಕ್ಕೆ ಬಂದ ಅಪರಿಚಿತ ಬಂಧು ;
ಅದೊಮ್ಮೆ ಭದ್ರಾವತಿಯಲ್ಲಿ ಉಳಿದು ಕೊಳ್ಳಲೇ ಬೇಕಾದ ಅನಿವಾರ್ಯ ಉಂಟಾಗಿ ಹೋಟೆಲ್‌ಗಳನ್ನು ತಡಕಾಡುವಾಗ ಹಾರ್ಡ್‌ವೇರ್ ಅಂಗಡಿಯಲ್ಲಿದ್ದ ಒಬ್ಬರ ಬಳಿ ಮಾಹಿತಿ ಕೇಳಿದೆ. ಅವರು ಖುದ್ದಾಗಿ ಜೊತೆಗೆ ಬಂದು ನನಗೊಂದು ಸುರಕ್ಷಿತ ರೂಮ್ ಸಿಗುವವರೆಗೂ ಜೊತಿಗಿದ್ದು ಹೊರಟ ನೆನಪು ಇನ್ನೂ ಹಸಿಯಾಗಿದೆ. ಪ್ರತಿ ಪಯಣದ ಪ್ರತಿಕ್ಷಣವೂ ಮರೆಯಲಾಗದ ಅನುಭವವೇ. ನಮ್ಮವರೇ ನಮ್ಮನ್ನು ಕೆಲವೊಮ್ಮೆ ತೀರಾ ನಿಕೃಷ್ಟವಾಗಿ ಕಂಡು ನಮ್ಮ ಅಸ್ತಿತ್ವದ ಬಗ್ಗೆಯೇ ಸಂಶಯ ಬರುವಂತೆ ನಡೆದುಕೊಂಡಾಗ, ಸೋಲೊ ಪ್ರಯಾಣದಲ್ಲಿ ಸಿಗುವ ಅಪರಿಚಿತರೇ ಎಷ್ಟೋ ಕಾಲದ ಬಂಧುಗಳಂತೆ ಭಾಸವಾಗುತ್ತಾರೆ. ಕೆಲವರಂತೂ ನಮ್ಮ ಜೀವನದ ಭಾಗವೇ ಆಗಿ ಹೋಗುತ್ತಾರೆ.
-ಅರ್ಚನಾ ಆರ್ಯ, ಬೆಂಗಳೂರು.
****************************************************************************************************
ದೇವರು ದಯೆ ತೋರಿದ!
ವಿದೇಶಿ ಮಹಿಳೆಯೊಬ್ಬರು ಹೋಟೆಲಿನಲ್ಲಿ ಕೆಲಸ ಮಾಡಿ ದುಡ್ಡು ಒಟ್ಟು ಮಾಡಿ ಒಬ್ಬರೇ ಭಾರತ ನೋಡಲು ಬಂದ ಸುದ್ದಿ, ನನ್ನಲ್ಲಿಯೂ ಸೋಲೊ ಟ್ರಪ್‌ನ ಆಸೆಯನ್ನು ಹುಟ್ಟುಹಾಕಿತು ಅನ್ನಬಹುದು. ಊರು ಸುತ್ತುವ, ಹೊಸ ಜಾಗಗಳಿಗೆ ಹೋಗುವ ಹುಚ್ಚು ಯಾವಾಗ ಹೇಗೆ ತಲೆಯಲ್ಲಿ ಹೊಕ್ಕಿತೋ ಕಾಣೆ. ಅಮ್ಮನೊಂದಿಗೆ ಹೇಳುತ್ತಿದ್ದೆ… ಒಂದು ಕೆಲಸ ಅಂತ ಆಗಲಿ; ತಿಂಗಳಿಗೆ 5000 ಬಂದ್ರೆ ಸಾಕು, ಸಾಲ ಮಾಡಿ ಟೂರ್ ಹೋಗ್ತೀನಿ!
ಹೇಳಿದಷ್ಟು ಸುಲಭವಾಗಿರಲಿಲ್ಲ ಬದುಕು. ಕಾರಣ, ಓಡುತ್ತಿದ್ದ ಬದುಕಿನ ಬಂಡಿಯ ಕಂಟ್ರೋಲ್ ನನ್ನ ಕೈಯಲ್ಲಿರಲಿಲ್ಲ. ಒಂದಿಷ್ಟು ವರ್ಷಗಳ ನಂತರ ಬದುಕಿಗೊಂದು ಸ್ಥಿರತೆ ಬಂತು. ಅಂದರೆ ಬ್ಯಾಂಕು, ಬ್ಯಾಲೆನ್ಸ್, ಶಬ್ದಗಳು ಪರಿಚಯವಾದವು. 5000 ಇದ್ರೆ ಸಾಕು ಅಂದುಕೊಂಡಿದ್ದು ಹಿಂದೆ. ಆದರೆ ಈಗ ಮನಸ್ಸು ಬದಲಾಗಿತ್ತು! ಇನ್ನೊಂದಿಷ್ಟು ಒಟ್ಟಾಗಲಿ ಅನ್ನಿಸ್ತು. ಆ ಇನ್ನೊಂದಿಷ್ಟು ಎಷ್ಟು ಅಂತ ಗೊತ್ತು ಮಾಡಿಸಿದ್ದು ಚಿಕನ್ ಗುನ್ಯ ಕಾಯಿಲೆ. ಒಬ್ಬಳೇ ಬದುಕು ಸಾಗಿಸುತಿದ್ದವಳಿಗೆ ಅದೊಂದು ಬೆಳಿಗ್ಗೆ ಏಳುವುದಕ್ಕೆ ಅಸಾಧ್ಯವಾಗಿ, ತೆವಳಿಕೊಂಡು ಬಾಗಿಲತ್ತ ಹೋದವಳಿಗೆ ಭಯದಿಂದ ತತ್ತರಿಸುವಂತಾಗಿತ್ತು. “ದೇವರೇ, ಇನ್ನು ಒಂದೇ ಒಂದು ಅವಕಾಶ ಕೊಡು. ತಿರುಗಾಟದ ಹುಚ್ಚನ್ನು ಮುಗಿಸುತ್ತೇನೆ’ ಅಂತ ಮೊರೆ ಇಟ್ಟೆ.
ಪುಣ್ಯಕ್ಕೆ, ದೇವರು ಮೊರೆ ಕೇಳಿಸಿಕೊಂಡ. ಅದಾದ 2 ತಿಂಗಳಿಗೆ ನನ್ನ ಮೊದಲ ಪ್ರವಾಸ-19 ವರ್ಷದ ಹಿಂದೆ ಒಂದು ಗ್ರೂಪ್ ಟೂರ್! ಅಲ್ಲಿಂದ ಪ್ರಾರಂಭವಾದದ್ದು, ಈವರೆಗೆ ಚಾಲನೆಯಲ್ಲಿದೆ. ಈ 19 ವರ್ಷಗಳಲ್ಲಿ ಇರುವ 29 ರಾಜ್ಯಗಳಲ್ಲಿ ಇನ್ನೂ ನೋಡದೇ ಇರುವ ರಾಜ್ಯಗಳೆಂದರೆ ತೆಲಂಗಾಣ, ತ್ರಿಪುರ, ನಾಗಾಲ್ಯಾಂಡ್ ಮತ್ತು ಮಿಜೋರಾಂ.
ಮರೆಯಲಾಗದ ಅನುಭವ: ಭೂಕಂಪ ಆಗ್ತಿದೆ… ಓಡಿ, ಓಡಿ…
ಮನಾಲಿಯಲ್ಲಿ ಬೆಳಿಗ್ಗೆ ಅಲ್ಲಿಯ ಹ್ಯಾಂಗಿಂಗ್ ರೆಸ್ಟೋರೆಂಟ್‌ನಲ್ಲಿ ಒಬ್ಬಳೇ ಮ್ಯೂಸಿಕ್ ಕೇಳುತ್ತಾ ಬೆಳಗಿನ ಕಾಫಿ ಕುಡಿಯುತ್ತಿದ್ದೆ. ಆಗಲೇ, ಟೇಬಲ್ ಮೇಲಿಟ್ಟ ನನ್ನ ಬ್ಯಾಗ್ ಪದೇಪದೇ ಜಾರಿ ಬೀಳುತ್ತಿತ್ತು .ಮರುಕ್ಷಣವೇ ಅಲ್ಲಿಗೆ ಓಡುತ್ತಾ ಬಂದ ವ್ಯಕ್ತಿಯೊಬ್ಬ-“ಭೂಕಂಪವಾಗುತ್ತಿದೆ, ಬಯಲಿಗೆ ಓಡಿ’ ಎಂದು ಕಿರುಚಿದ. ಅಷ್ಟೆ: ಎದ್ದೆನೋ ಬಿದ್ದೆನೋ ಅಂದುಕೊಂಡು ಓಡಿದೆ. ಮೊದಲ ಟೂರ್‌ನಲ್ಲೇ “ಭೂಕಂಪ’ ನಡೆದ ಘಟನೆ ಎಲ್ಲಿ, ಯಾವಾಗ, ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿ ನನ್ನನ್ನು ಮಾನಸಿಕವಾಗಿ ಗಟ್ಟಿಯಾಗಿಸಿತ್ತು.
ಪಯಣಿಗರೇ ಗಮನಿಸಿ…
ತಲುಪುವ ಜಾಗದ ಬಗ್ಗೆ ಪೂರ್ತಿ ಮಾಹಿತಿ ಇರಲಿ.
ಒಡವೆ ಹಾಕಿಕೊಳ್ಳಬೇಡಿ. ಆದಷ್ಟು ಕಡಿಮೆ ಲಗೇಜ್ ಇರಲಿ.
ಹವಾಮಾನ, ಸ್ಥಳೀಯ ತಿಂಡಿ-ತಿನಿಸುಗಳು, ನೋಡಲೇಬೇಕಾದ ಜಾಗದ ರಜಾ ದಿನ, ಟೈಮಿಂಗ್ ನೋಟ್ ಮಾಡಿಟ್ಟುಕೊಳ್ಳಿ. ರೂಮಿಗೆ ಹೋಗುತ್ತಿದಂತೆ ಡೋರ್ ಲಾಕ್ ಚೆಕ್ ಮಾಡಿಕೊಳ್ಳಿ.
ಈಗೀಗ ಸೋಲೊ ಪ್ರಯಾಣಿಕರಿಗಾಗಿ ವಿಶೇಷ ರಿಯಾಯಿತಿ ಇರುತ್ತೆ. ಗಮನಿಸಿ.
ನೀವು ಉಳಿದಿರುವ ಹೊಟೇಲಿಂದ ಏರ್‌ಪೋರ್ಟ್, ಬಸ್ ಸ್ಟಾಂಡ್ ತಲುಪಲು ಎಷ್ಟು ಸಮಯ ಬೇಕು
-ಅಜ್ಜಿಮನೆ ವಿಜಯಕ್ಕ, ಬೆಂಗಳೂರು