ಶಿಖರ ಅಂದ್ರೆ ಏನು ಅಂತ ಕೇಳಿದ್ರೆ ನೀವೆಲ್ಲರೂ ಗಿರಿ, ಬೆಟ್ಟ, ಗುಡ್ಡ ಇತ್ಯಾದಿ ಇತ್ಯಾದಿ ಅನ್ನಬಹುದು. ಆದರೆ, ನಮ್ಮ ಕಾಲೇಜಿನ ಯಾರನ್ನೇ ಕೇಳಿದ್ರು ಮೊದಲಿಗೆ ಹೇಳ್ಳೋದು ನಮ್ಮ ಕಾಲೇಜ್ ಮ್ಯಾಗಜಿನ್ ಅಂತ. ಹೌದು, ನಮ್ಮ ಕಾಲೇಜ್ ಮ್ಯಾಗಜಿನ್ ಹೆಸರು “ಶಿಖರ’. ಹೆಸರಿಗೆ ತಕ್ಕಂತೆ ನಮ್ಮ ಮ್ಯಾಗಜಿನಾದ ಶಿಖರದ ಸಾಧನೆಯು ಶಿಖರದಷ್ಟಿದೆ. ಇದಕ್ಕೀಗ ಇದಕ್ಕೆ ಏಳು ವರ್ಷ ಆಗಿದೆ. ಈ ಏಳು ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜುಗಳ ವಾರ್ಷಿಕ ಸಂಚಿಕೆ ಸ್ಪರ್ಧೆ- 1ರಲ್ಲಿ ಅಂದರೆ 2013-14ನೇ ಸಾಲಿನಲ್ಲಿ ದ್ವಿತೀಯ ಸ್ಥಾನ, 2014-15ನೇ ಸಾಲಿನಲ್ಲಿ ಪ್ರಥಮ ಸ್ಥಾನ ಅಲ್ಲದೆ 2015-16ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದು ಹ್ಯಾಟ್ರಿಕ್‌ನ ನಿರೀಕ್ಷೆಯಲ್ಲಿದೆ.
ನನಗೆ ಚಿಕ್ಕಂದಿನಿಂದಲೂ ಪುಸ್ತಕ ಓದುವ ಹವ್ಯಾಸವಿತ್ತು. ಆದರೆ, ನಾನು ಬರೆಯುವುದು ಬಿಡಿ, ಬರೆಯಬೇಕು ಅನ್ನೋ ಭಾವನೆ ಕೂಡ ನನ್ನಲ್ಲಿ ಇರಲಿಲ್ಲ. ನಾನು ಸೆಕೆಂಡ್ ಪಿಯುಸಿ ಮುಗಿಸಿ ಬಿ.ಕಾಂ. ಮಾಡೋಕೆ ನಮ್ಮ ಕಾಲೇಜಿನಿಂದ ಅಣ್ಣನ ಕೈಯಲ್ಲಿ ಅಪ್ಲಿಕೇಶನ್ ತರಿಸಿದ್ದೆ. ಆ ಅಪ್ಲಿಕೇಶನ್ ಜೊತೆ ಒಂದು ಕಾಲೇಜಿನ ವಿವರ ಇರೋ ಚಿrಟcಜurಛಿ ಕೊಟ್ಟಿದ್ದರು. ಅದನ್ನು ಓದಿದಾಗ ನನ್ನ ಗಮನವನ್ನು ತುಂಬ ಸೆಳೆದಿದ್ದು ಆ ಕಾಲೇಜಿನ ವಾರ್ಷಿಕ ಸಂಚಿಕೆ “ಶಿಖರ’ ಪ್ರಥಮ ಸ್ಥಾನ ಪಡೆದಿದೆ ಅನ್ನೋ ವಿಷಯ. ಅದುವರೆಗೂ ನಾನು ಕಾಲೇಜ್ ಮ್ಯಾಗಜಿನ್ ಬಗ್ಗೆ ಕೇಳಿದ್ದೇನೆಯೇ ಹೊರತು ಅದು ಹೇಗಿರುತ್ತೆ ಅಂತ ನೋಡಿರಲಿಲ್ಲ. ಅದೂ ಅಲ್ಲದೆ, ಅದರಲ್ಲೂ ಕೂಡ ಸ್ಪರ್ಧೆ ಇರುತ್ತೆ ಅನ್ನೋದು ನನಗೆ ಗೊತ್ತೇ ಇರಲಿಲ್ಲ.
ಕಾಲೇಜು ಶುರುವಾದ ನಂತರ ಆರಂಭದ ದಿನಗಳಲ್ಲಿ ಕಾಲೇಜಿ ನಲ್ಲಿ ನಡೆದ ಕೆಲವೊಂದು ಕಾರ್ಯಕ್ರಮಕ್ಕೆ ಬರುವ ಅತಿಥಿಗಳು ಶಿಖರದ ಸಾಧನೆಯನ್ನು ಪ್ರಶಂಸಿಸಿ, ಅಭಿನಂದಿಸುತ್ತಿದ್ದರು. ಅದನ್ನೆಲ್ಲ ಕೇಳಿದ ನನಗೆ “ಶಿಖರ’ದ ಬಗ್ಗೆ ಇದ್ದ ಆಸಕ್ತಿ ಹೆಚ್ಚಾಗಿ ಅದನ್ನ ಓದಲೇಬೇಕು ಅಂತ ಒಂದು ದಿನ ಲಂಚ್ ಬ್ರೇಕ್‌ನಲ್ಲಿ ನನ್ನ ಫ್ರೆಂಡ್‌ನ್ನು ಕರೆದುಕೊಂಡು ಲೈಬ್ರರಿಗೆ ಹೋದೆ. ಅಲ್ಲಿದ್ದ “ಶಿಖರ’ದ ಗಾತ್ರ ನೋಡಿ ನನಗೆ ಶಾಕ್ ಆಯ್ತು. ಯಾಕೆಂದರೆ, ಅಷ್ಟು ದಪ್ಪ ಇತ್ತು. ಹೆಚ್ಚು ಕಡಿಮೆ ಐನೂರು ಪುಟಗಳಿರಬಹುದು ಅಂತ ಅದನ್ನು ದೂರದಿಂದ ನೋಡಿದ್ರೇನೆ ತಿಳಿಯುತ್ತಿತ್ತು. ಬರೀ ಪೇಜ್‌ಗಳನ್ನು ಮಾತ ತೆಗೆದು ನೋಡೋಣ ಅಂತ ಅಂತಂದ್ರೂ ಹತ್ತು-ಹದಿನೈದು ನಿಮಿಷ ಖಂಡಿತ ಬೇಕಾಗುತ್ತಿತ್ತು. ಹಾಗಾಗಿ, ಅದನ್ನು ದೂರದಿಂದಲೇ ನೋಡಿ ವಾಪಾಸು ಕ್ಲಾಸಿಗೆ ಬಂದೆ. ನನ್ನ ಹೊಸ ಫ್ರೆಂಡ್ ಒಬ್ಬರ ಅಕ್ಕ ನಮ್ಮ ಕಾಲೇಜಿನಲ್ಲೇ ಫೈನಲ್ ಇಯರ್‌ನಲ್ಲಿ ಓದುತ್ತಿದ್ದರು. ನಾನು ನನ್ನ ಫ್ರೆಂಡ್ ಹತ್ರ ಅವಳ ಅಕ್ಕನ ಬಳಿ ಇದ್ದ “ಶಿಖರ’ನಾ ಸ್ವಲ್ಪ ಓದೋಕೆ ತಂದುಕೊಡೋಕೆ ಕೇಳೆª. ಅವಳು ಖುಷಿಯಿಂದಲೇ ಮರುದಿನವೇ ತಂದುಕೊಟ್ಟಳು.
“ಶಿಖರ’ ನನ್ನ ಕೈಗೆ ಸಿಕ್ಕಿದಾಗ ಶನಿವಾರ ಆಗಿತ್ತು. ಮನೆಗೆ ಬಂದ್ಮೇಲೆ ನಾಳೆ ಓದೋಣ ಅಂತ ಸುಮ್ಮನಾದೆ. ಆದರೆ, ಮನಸ್ಸು ಕೇಳಲಿಲ್ಲ. ಈಗ್ಲೆ ಅದನ್ನ ಓದು ಅಂತ ಹೇಳುತ್ತಿತ್ತು. ನಾಳೆ ತನಕ ಯಾಕೆ ಅಂತ ಅದನ್ನು ತಕ್ಷಣ ಕೈಗೆತ್ತಿಕೊಂಡೆ. ಓದುತ್ತಾ ಹೋದಂತೆ ಇದು ನಾನು ಅಂದುಕೊಂಡಿದ್ದಿಕ್ಕಿಂತ ತುಂಬಾ ಅದ್ಭುತವಾಗಿತ್ತು. ಸಂದರ್ಶನ, ನಮ್ಮೂರ ವೈಶಿಷ್ಟ್ಯ, ನಮ್ಮೂರಿನ ಅಸಾಮಾನ್ಯ ಸಾಮಾನ್ಯರು, ಗ್ರಾಮೀಣ ವಿಶೇಷ, ಜನಾಂಗ ಅಧ್ಯಯನ, ಗ್ರಾಮ ಅಧ್ಯಯನ, ಲೇಖನಗಳು, ಕಥೆ, ಕವನ, ಹನಿಗವನ, ಕಥನಕವನ ಅಬ್ಬಬ್ಟಾ … ಒಂದಾ ಎರಡಾ ಹೇಳ್ತಾ ಹೋದ್ರೆ ಅದರ ಬಗ್ಗೆನೇ ಒಂದು ಪುಸ್ತಕ ಬರೆಯಬಹುದು. ಅಷ್ಟೊಂದು ವಿಷಯಗಳು ಅದರಲ್ಲಿತ್ತು. ಅಷ್ಟೇ ಅಲ್ಲ, ಕನ್ನಡ, ಇಂಗ್ಲಿಶ್, ಕುಂದಗನ್ನಡ ಸಹಿತ ಹದಿನಾಲ್ಕು ಭಾಷೆಗಳು ಅದರಲ್ಲಿ ಸ್ಥಾನ ಪಡೆದಿದ್ದವು. ಹದಿನಾಲ್ಕು ಭಾಷೆಗಳಲ್ಲೂ ವಿಶೇಷ ಬರಹಗಳಿದ್ದವು. ಇಷ್ಟೆಲ್ಲಾ ಓದಿ ಮುಗಿಸುವ ಹೊತ್ತಿನಲ್ಲಿ “ಇಷ್ಟೊಂದು ಒಳ್ಳೆಯ ಪುಸ್ತಕದಲ್ಲಿ ನಾನೂ ಬರೀಬೇಕು. ನನ್ನ ಹೆಸರು ಕೂಡ ಯಾವುದಾದರೂ ಒಂದು ಮೂಲೆಯಲ್ಲಿ ಇರುವ ಭಾಗ್ಯ ನನ್ನದಾಗಬೇಕು’ ಅನ್ನೋ ಆಸೆ ನನ್ನಲ್ಲಿ ಶುರುವಾಯ್ತು. ಬರೆಯಬೇಕು ಅನ್ನೋ ಆಸೆ ನನ್ನಲ್ಲಿ ಶುರುವಾದ ಕೂಡಲೇ ಏನ್ ಬರೀಬೇಕು, ಹೇಗ್ ಬರೀಬೇಕು, ಯಾವ ರೀತಿ ಬರೀಬೇಕು ಇದ್ಯಾವುದೂ ಗೊತ್ತಿಲ್ಲದಿದ್ದರೂ ಬರೆಯೋಕೆ ಕೂತೆ. ಬರೆಯುತ್ತಾ ಹೋದಂತೆ ನನಗೇ ಅನ್ನಿಸಿದ್ದು ಅಂದರೆ, ನನ್ನ ಬರವಣಿಗೆಗೆ “ಶಿಖರ’ದ ಸ್ಟ್ಯಾಂಡರ್ಡ್‌ನ್ನು ರೀಚ್ ಮಾಡುವಂತಹ ಗುಣಮಟ್ಟ ಇಲ್ಲ ಅಂತ ತಿಳಿದ ತಕ್ಷಣ ಬರೆಯೋದನ್ನು ಬಿಟ್ಟು ಸುಮ್ಮನಾದೆ.
ನಾವು ಕಾಲೇಜಿನ ಹೊಸ ವಿದ್ಯಾರ್ಥಿಗಳಾಗಿರುವುದರಿಂದ ಲೆಕ್ಚರರ್ ಕ್ಲಾಸ್ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಮ್ಯಾಗಜಿನ್ “ಶಿಖರ’ದ ಬಗ್ಗೆಯೂ ಹೇಳುತ್ತಿದ್ದರು. “ಎಲ್ಲರೂ ಬರೀರಿ, ಶಿಖರಕ್ಕೋಸ್ಕರ ಅಂತ ಬರೀಬೇಡಿ, ನಿಮಗೆ ಖುಷಿ ಕೊಡೋ ರೀತಿಯಲ್ಲಿ ಬರೀರಿ, ಅದು ಚೆನ್ನಾಗಿರುತ್ತೋ ಇಲ್ಲವೋ ಅಂತ ತಲೆಕೆಡಿಸಿಕೊಳ್ಳೋಕೆ ಹೋಗ್ಬೇಡಿ, ನಿಮಗೆ ಏನೇ ಹೆಲ್ಪ… ಬೇಕಿದ್ರೂ ನಮ್ಮ ಹತ್ರ ಕೇಳಿ’ ಅಂತ ಹೇಳ್ತಾ ಇದ್ರು. ಇಷ್ಟು ಪ್ರೋತ್ಸಾಹಿಸುವ ಲೆಕ್ಚರರ್ ಮಾತುಗಳನ್ನು ಕೇಳಿದ ಮೇಲೆ ಯಾರಿಗೆ ಬರೆಯಬೇಕು ಅಂತ ಅನ್ನಿಸೋದಿಲ್ಲ ಹೇಳಿ! ನಾನಂತೂ ಬರೀಬೇಕು ಅಂತ ನಿರ್ಧಾರ ಮಾಡಿಬಿಟ್ಟೆ. ಮತ್ತೆ ಬರೆಯೋಕೆ ಕೂತೆ. ನಾನು ಕಳೆದ ಸಲದ ಹಾಗೆ ಯಾವ ಗೊಂದಲಗಳಿಗೂ ಕೇರ್ ಮಾಡದೆ ಬರೆಯೋಕೆ ಶುರು ಮಾಡಿದೆ. ಹಾಗೂ ಹೀಗೂ ಮಾಡಿ ಒಂದು ಪೇಜ್ ಆಗೋವಷ್ಟು ಬರೆದೆ. ಬರೆದದ್ದನ್ನು ಮತ್ತೆ ಓದಿದೆ. ಆದರೆ, ನಾನು ಬರೆದದ್ದು ನನಗೇ ಸಮಾಧಾನ ನೀಡಲಿಲ್ಲ. ಹಾಗಂತ ನನ್ನ ಬರವಣಿಗೆ ಕೆಟ್ಟದಾಗಿದೆ ಅಂತಾನೂ ಅನಿಸಲಿಲ್ಲ. ಹುಟ್ಟುತ್ತಲೇ ಯಾರಾದರೂ ಮಾತಾಡೋಕೆ ಕಲಿಯುತ್ತಾರೆಯೆ? ಹಾಡ್ತಾ ಹಾಡ್ತಾ ರಾಗ ಅನ್ನೋ ಹಾಗೆ ಬರೀತಾ ಬರೀತಾ ಚೆನ್ನಾಗಿ ಬರೆಯೋದನ್ನ ಕಲಿಯಬಹುದೆನ್ನುವ ಭರವಸೆಯೊಂದಿಗೆ ಬರೆಯುತ್ತ ಹೋದೆ.
ಕಾಲೇಜಿನಲ್ಲಿ ನಾನು ಸೇರಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಲ್ಲಿ ಕೂಡ ಬರವಣಿಗೆಗೆ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದ್ದರು. ಪ್ರತಿ ವಾರವೂ ಏನಾದ್ರೂ ಬರೆಯೋಕೆ ಹೇಳುತ್ತಿದ್ದರು. ಬರೆಯೋಕೆ ಕೆಲವೊಂದು ಸಲಹೆಗಳನ್ನು ಕೊಡುತ್ತಿದ್ದರು. ಹಲವು ಬರವಣಿಗೆಗಳ ನಂತರ ಕೊನೆಗೂ ನನ್ನ ಒಂದು ಬರಹ ತಕ್ಕಮಟ್ಟಿನ ಬರಹ ಅನ್ನೋದಕ್ಕಿಂತ ಚೆನ್ನಾಗಿಯೇ ಇತ್ತು. ಅದನ್ನು ನನ್ನ ಫ್ರೆಂಡ್ಸ್‌ಗೆಲ್ಲ ಓದುವುದಕ್ಕೆ ಕೊಟ್ಟೆ. ಅವರು ಅದನ್ನು ಓದಿ ಮೆಚ್ಚುಗೆ ಸೂಚಿಸಿದಾಗ ತುಂಬಾ ಸಂತೋಷ ಆಯಿತು. ಮುಂದೆ ಚಿಕ್ಕ ಚಿಕ್ಕ ಲೇಖನಗಳನ್ನು ಬರೆದು ಅದನ್ನು ತೋರಿಸುತ್ತಿದ್ದೆ. ಅವರೆಲ್ಲ ಓದಿ, “ಚೆನ್ನಾಗಿದೆ’ ಅಂತಾನೇ ಹೇಳುತ್ತಿದ್ದರು. ನಿಜವಾಗಿಯೂ ಚೆನ್ನಾಗಿತ್ತೋ ಇಲ್ಲ ನನಗೆ ಬೇಸರ ಆಗಬಾರದು ಅಂತ ಹಾಗೆ ಹೇಳುತ್ತಿದ್ರೋ ಗೊತ್ತಿಲ್ಲ! ಈ ಸಂದರ್ಭದಲ್ಲಿಯೇ ನಾನು ಒಂದು ಪುಟ್ಟ ಲೇಖನವನ್ನು ಬರೆದು ಉದಯವಾಣಿಯ “ಯುವಸಂಪದ’ಕ್ಕೆ ಕಳುಹಿಸಿದೆ. ಅದು ಪ್ರಕಟ ಕೂಡ ಆಯ್ತು. “ಯುವಸಂಪದ’ದಲ್ಲಿ ಪ್ರಕಟವಾಗುತ್ತಿದ್ದ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಬರೆಯುತ್ತಿದ್ದ ಲೇಖನಗಳನ್ನು ಓದಿ ಖುಷಿ ಪಡುತ್ತಿದ್ದ ನನಗೆ ಆ ದಿನ ನನ್ನ ಪುಟ್ಟ ಲೇಖನವನ್ನು ಇತರರ ಲೇಖನಗಳ ಮಧ್ಯೆ ಕಂಡಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಪತ್ರಿಕೆಯೊಂದು ಲೇಖನ ಪ್ರಕಟಿಸಿದೆ ಎಂದರೆ, ಅದು ನಮ್ಮ ಬರವಣಿಗೆಯನ್ನು ಮುಂದುವರಿಸಲು ಪ್ರೋತ್ಸಾಹ ನೀಡಿದೆ ಎಂದರ್ಥ. ನಾನು ಇನ್ನೂ ಬರೆಯಬೇಕು ಎನ್ನುವ ಆತ್ಮವಿಶ್ವಾಸ ಬಂತು. ಇನ್ನೂ ಚೆನ್ನಾಗಿ ಬರೆಯಬೇಕು ಎನ್ನುವುದೇ ನನ್ನ ಮನದ ಆಸೆ.
ಸುಶ್ಮಿತಾ ನೇರಳಕಟ್ಟೆ