Advertisement

ದುಬಾರಿ ಟೋಲ್‌: ಮೀನು ಸಾಗಾಟ ಲಾರಿಗಳು ಸಂಕಷ್ಟದಲ್ಲಿ

12:45 AM Feb 20, 2020 | Sriram |

ಕುಂದಾಪುರ: ಮೀನು ಸಾಗಾಟ ಲಾರಿಗಳಿಗೆ ಸುಂಕ ಭಾರ ಹೆಚ್ಚಾದ ಕಾರಣ ಮೀನು ದುಬಾರಿಯಾಗಲಿದೆ ಎಂಬ ಆತಂಕ ಬಂದಿದೆ.

Advertisement

ಒಂದು ಕಾಲದಲ್ಲಿ ಕುಂದಾಪುರದ ಲಾರಿಗಳು ದಕ್ಷಿಣ ಭಾರತದಲ್ಲಿಯೇ ಮೀನು ಸಾಗಾಟ ವ್ಯವಸ್ಥೆಯಲ್ಲಿ ಹೆಸರು ಮಾಡಿದ್ದವು. ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡಿನ ಬಹುತೇಕ ಮೀನು ಮಾರುಕಟ್ಟೆಯಲ್ಲಿ ಬೆಳಗಿನ ಜಾವ 4 ಗಂಟೆಯ ಒಳಗೆ ಮೀನು ತುಂಬಿದ ಲಾರಿಗಳು ಹಾಜರಿರುತ್ತಿದ್ದವು.

ಅವನತಿಯತ್ತ ಲಾರಿ ಉದ್ಯಮ
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮೀನು ಲೋಡ್‌ ಆದರೆ ಅಲ್ಲಿಂದ ಕೇರಳದ ತಿರುವನಂತಪುರಕ್ಕೆ ಸುಮಾರು 1,500 ಕಿ.ಮೀ.ಗಳನ್ನು ಒಬ್ಬನೇ ಚಾಲಕ ಎರಡು ರಾತ್ರಿ 1 ಹಗಲಿನ ಪ್ರಯಾಣದಲ್ಲಿ ಸತತವಾಗಿ ಸಂಚರಿಸಿ ಮಾರುಕಟ್ಟೆ ಪ್ರವೇಶ ಮಾಡುತ್ತಿದ್ದ ದಿನಗಳಿದ್ದವು. ಆದರೆ ಇಂದು ಬಂದರುಗಳಲ್ಲಿ ಮತ್ಸé ûಾಮದಿಂದಾಗಿ ಕುಂದಾಪುರದ ಲಾರಿಗಳನ್ನು ಕೇಳುವವರಿಲ್ಲದೆ, ಲಾರಿ ಉದ್ಯಮ ಅವನತಿಯತ್ತ ಸಾಗಿದೆ.
ರಾಷ್ಟ್ರೀಯ ಹೆದ್ದಾರಿ ನವೀಕರಣದ ಹೆಸರಿನಲ್ಲಿ ಅಲ್ಲಲ್ಲಿ ಟೋಲ್‌ ವಸೂಲಿ ಮಾಡಲಾಗುತ್ತಿದೆ. 10 ಟನ್‌ ಸಾಗಿಸುವಂತಹ ಲಾರಿಗಳು ಶಿರೂರಿನಲ್ಲಿ 250 ರೂ., ಒಳಗದ್ದೆ (ಕುಮಟಾ)ಯಲ್ಲಿ 235 ರೂ., ಅಂಕೋಲಾ (ಬೇಲಿಕೇರಿ)ದಲ್ಲಿ 245 ರೂ., ಸಾಸ್ತಾನದಲ್ಲಿ 145 ರೂ., ಹೆಜಮಾಡಿಯಲ್ಲಿ 120 ರೂ., ಸುರತ್ಕಲ್‌ನಲ್ಲಿ 175 ರೂ., ತಲಪಾಡಿಯಲ್ಲಿ 125 ರೂ. ಎಂದು ಗೋವಾದಿಂದ ಕಾಸರಗೋಡಿಗೆ 393 ಕಿ.ಮೀ. ಪ್ರಯಾಣಕ್ಕೆ ಒಟ್ಟು 1,295 ರೂ. ಸುಂಕ ನೀಡಬೇಕಾಗುತ್ತದೆ. ಧಾರೇಶ್ವರದ ಹೊಳ್ಳೆ ಗದ್ದೆ, ಅಂಕೋಲಾದ ಹಟ್ಟಿಕೇರಿ ಮೊದಲಾದೆಡೆ ಇನ್ನಷ್ಟೇ ಟೋಲ್‌ಗ‌ಳು ಆರಂಭವಾಗಲಿದ್ದು ಕಾಸರಗೋಡು ಮತ್ತು ಗೋವಾ ಸಂಚಾರ ತೀರಾ ದುಬಾರಿಯಾಗಲಿದೆ.

ತೆರೆದ ಲಾರಿಗಳ ಸಂಕಷ್ಟ
ಕುಂದಾಪುರ, ಬೈಂದೂರು, ಗಂಗೊಳ್ಳಿಯಲ್ಲಿ ಸುಮಾರು 300 ತೆರೆದ ಲಾರಿಗಳಿದ್ದು ಮಂಗಳೂರು, ಮಲ್ಪೆಯಿಂದ ಇನ್ಸುಲೇಟರ್‌, ಕಂಟೈನರ್‌ ಎಂದು ಮುಚ್ಚಿದ ಲಾರಿಗಳಲ್ಲಿ ಮೀನು ಸಾಗಿಸಲಾಗುತ್ತದೆ. ತೆರೆದ ಲಾರಿಯಲ್ಲಿ ಮೀನು ಸಾಗಾಟ ಇಲ್ಲಿ ಮಾತ್ರ ಇದ್ದು ಎಲ್ಲ ಬಗೆಯ ಲಾರಿಗಳಿಗೆ ಮೀನು ಸಾಗಾಟ ದುಬಾರಿಯಾಗುತ್ತಿದೆ. ಒಂದೋ ಅಷ್ಟೂ ಲಾರಿಯವರು ಮೀನು ಸಾಗಾಟ ಬದಿಗೊತ್ತಬೇಕು. ಇಲ್ಲವೇ ಸಾಗಾಟ ದರ ಹೆಚ್ಚಿಸಬೇಕು.

ಮೊದಲೇ ಮೀನು ಕೊರತೆಯಿದ್ದು ಲಾರಿ ಬಾಡಿಗೆ ಏರಿದರೆ ಮೀನು ಇನ್ನಷ್ಟು ತುಟ್ಟಿಯಾಗಲಿದೆ. ಮೀನು ಗಾರರಿಗೆ ಸಬ್ಸಿಡಿ ಡೀಸೆಲ್‌, ವಿಮೆ, ಸಾಲಮನ್ನಾ ಸೌಲಭ್ಯಗಳಿವೆ. ಅದಕ್ಕೆ ಪೂರಕ ಉದ್ಯಮವಾದ ಲಾರಿಗಳನ್ನು ಆಧರಿಸಿದವರಿಗೆ ಏನೂ ಇಲ್ಲ ಎಂಬುದು ಮಾಲಕರ ಅಳಲು.

Advertisement

ಗೋವಾದಿಂದ ಕಾಸರಗೋಡಿಗೆ 393 ಕಿ.ಮೀ. ಪ್ರಯಾಣಕ್ಕೆ ಒಟ್ಟು 1,295 ರೂ. ಸುಂಕ ನೀಡಬೇಕಾಗುತ್ತದೆ. ಧಾರೇಶ್ವರದ ಹೊಳ್ಳೆಗದ್ದೆ, ಅಂಕೋಲಾದ ಹಟ್ಟಿಕೇರಿ ಮೊದಲಾದೆಡೆ ಇನ್ನಷ್ಟೇ ಟೋಲ್‌ಗ‌ಳು ಆರಂಭವಾಗಲಿದ್ದು ಲಾರಿ ಮಾಲಕರಿಗೆ ಇನ್ನಷ್ಟು ಹೆಚ್ಚು ಹೊರೆಯಾಗುವುದಲ್ಲಿ ಅನುಮಾನವಿಲ್ಲ.

ಆದಾಯಕ್ಕಿಂತ
ಖರ್ಚೇ ಹೆಚ್ಚು
ಮಂಗಳೂರಿನಿಂದ ಗೋವಾಕ್ಕೆ ಹೋಗಬೇಕಾದರೆ ನಿರ್ವಹಣೆ ಸೇರಿ ಸರಿಸುಮಾರು 10,000 ರೂ. ಆಗುತ್ತದೆ. ಆದರೆ ಗೋವಾದಿಂದ ಮಂಗಳೂರಿಗೆ ಇರುವ ಬಾಡಿಗೆ ದರ 8,000ದಿಂದ 9,000 ರೂ. ಮಾತ್ರ! ಒಟ್ಟಾರೆ ಸರಕು ಮಾರುಕಟ್ಟೆ ತಲುಪುವಾಗ ಲಾರಿ ಮಾಲಕ ತನ್ನ ಕೈಯ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ.

ಮಾಲಕರಿಗೂ ದೊರೆಯಲಿ
ಲಾರಿಗಳನ್ನು ನಂಬಿ ಜೀವನ ಮಾಡುವ ಲಾರಿ ಮಾಲಕರು, ಚಾಲಕರು, ಇತರ ಕುಟುಂಬಗಳು ಹೇಗೆ ಬದುಕುವುದು ಎನ್ನುವುದೇ ಪ್ರಶ್ನೆಯಾಗಿದೆ. ಸರಕಾರ ಮತ್ತು ಮೀನುಗಾರಿಕಾ ಇಲಾಖೆ ಇದನ್ನು ಪರಿಗಣಿಸಿ ಮೀನುಗಾರಿಕಾ ಇಲಾಖೆಯಲ್ಲಿ ಬರುವ ಸವಲತ್ತುಗಳನ್ನು ಲಾರಿ ಮಾಲಕರಿಗೂ ಒದಗಿಸಬೇಕು.
-ರಾಜೇಶ್‌ ಕಾವೇರಿ,
ಉಡುಪಿ ಜಿಲ್ಲಾ ಲಾರಿ ಮಾಲಕರ
ಸಂಘದ ಅಧ್ಯಕ್ಷ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next