ಗೌರಿಬಿದನೂರು: ಇಲ್ಲಿನ ಸೇಂಟ್ ಆನ್ಸ್ ಶಾಲೆಯಲ್ಲಿ ಪೋಷಕರಿಂದ ಶಾಲಾ ಶುಲ್ಕದ (ಟ್ಯೂಷನ್ ಫೀ) ಜೊತೆಗೆ ಡೊನೇಷನ್ ಪಡೆಯುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.
ಹಣ ಪಡೆದ ಬಗ್ಗೆ ಶಾಲೆಯಲ್ಲಿ ಶುಲ್ಕ ಪಡೆದು ಅಧಿಕೃತ ರಶೀದಿ ನೀಡುತ್ತಿಲ್ಲ. ಬದಲಿಗೆ ಚೀಟಿಯಲ್ಲಿ ಬರೆದು ಕೊಡುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಶಾಲಾ ಶುಲ್ಕ ಹಾಗೂ ಪುಸ್ತಕಗಳನ್ನು ಕೊಂಡ ನಂತರ ಪೂರ್ಣ ರಶೀದಿ ನೀಡಲಾಗುವುದು ಎಂದು ಹೇಳಿದ್ದಾರೆ ಎಂದು ಪೋಷಕರು ತಿಳಿಸಿದರು.
ಏಕಾಏಕಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆವಿಚಾರಿಸಲು ಬಂದರೆ ಪ್ರಾಂಶುಪಾಲರು, ಶಿಕ್ಷಕರಾಗಲೀ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ಬಂದು ಉಪಪ್ರಾಂಶುಪಾಲರನ್ನು ವಿವರ ಕೇಳಿದರೆ ನಮ್ಮದು ಐಸಿಎಸ್‌ಸಿ ಶಾಲೆ, ಶಿಕ್ಷಣ ಇಲಾಖೆಗೆ ಯಾವುದೇ ಉತ್ತರ ನೀಡುವ ಪ್ರಮೇಯವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಡಿಡಿಪಿಐಗೆ ಸಲ್ಲಿಕೆ: ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿ ಹನುಮಂತರೆಡ್ಡಿ ಮಾತನಾಡಿ, ಸೇಂಟ್ ಆನ್ಸ್ ಶಾಲೆಯ ಉಪ ಪ್ರಾಂಶುಪಾಲರನ್ನು ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಏಕೆ ಸಮಸ್ಯೆ ಮಾಡುತ್ತಿದ್ದೀರಿ, ಶುಲ್ಕ ಪಾವತಿ ಬಗ್ಗೆ ವಿವರ ನೀಡಿ ಎಂದು ಪ್ರಶ್ನಿಸಿದರೆ ಐಸಿಎಸ್‌ಸಿ ಶಾಲೆಯಾಗಿರುವುದರಿಂದ ರಾಜ್ಯದ ಶಿಕ್ಷಣ ಇಲಾಖೆಗೆ ವಿವರ ನೀಡುವ ಅಗತ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಲಿಖೀತ ದೂರನ್ನು ಬಿಇಒ ಮೂಲಕ ಡಿಡಿಪಿಐ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪೋಷಕರಾದ ಶ್ರೀನಿವಾಸರೆಡ್ಡಿ ಹಾಗೂ ಸುರೇಶ್ ಮಾತನಾಡಿ, ಶಾಲೆಯಲ್ಲಿ ಆನ್ ಲೈನ್ ಕ್ಲಾಸ್ ಮಾಡುತ್ತಿದ್ದು, ಶುಲ್ಕ ಕಟ್ಟಿದವರಿಗೂ ಆನ್‌ಲೈನ್ ಕ್ಲಾಸ್ ಸ್ಥಗಿತಗೊಳಿಸಿದ್ದಾರೆ. ಶುಲ್ಕದ ಜೊತೆಗೆ ಡೊನೇಷನ್ ಸಹ ಪಡೆಯುತ್ತಿದ್ದಾರೆ. ಈ ಬಗ್ಗೆ ವಿಚಾರಿಸಲು ಬಂದರೆ ಪ್ರಾಂಶುಪಾಲರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.