Advertisement
ಬರ–ಅತಿವೃಷ್ಟಿ, ನೆರೆ ನಡುವೆ ರೈತರಿಗೆ ದಕ್ಕಿದ್ದ ಅಷ್ಟು ಇಷ್ಟು ಉಳ್ಳಾಗಡ್ಡಿಯಲ್ಲಿ ಬಹುತೇಕ ಮಾರುಕಟ್ಟೆಗೆ ಬಂದು ಮಾರಾಟವಾದ ಕೆಲವೇ ದಿನಗಳಲ್ಲಿ ಬೆಲೆ ನಾಲ್ಕೈದು ಪಟ್ಟು ಹೆಚ್ಚಳವಾಗಿರುವುದು ಕಂಡು ರೈತರು, ಈಗ ಉಳ್ಳಾಗಡ್ಡಿ ಇದ್ದಿದ್ದರೆ ಒಂದಿಷ್ಟು ಹಣವಾದರೂ ಕೈಗೆ ಹತ್ತುತ್ತಿತ್ತು ಎಂದು ನೋವು ಪಡುವಂತಾಗಿದೆ. ಉಳ್ಳಾಗಡ್ಡಿ ಕೇವಲ ರೈತರು ಹಾಗೂ ಗ್ರಾಹಕರಿಗಷ್ಟೇ ಸಂಕಷ್ಟ–ನೋವು ತರುತ್ತಿಲ್ಲ. ಬದಲಾಗಿ ದೇಶದ ರಾಜಕೀಯ ಮೇಲು ಪರಿಣಾಮ ಬೀರುತ್ತ ಬಂದಿದ್ದು, ಹಲವು ಚುನಾವಣೆಗಳಲ್ಲಿ ಉಳ್ಳಾಗಡ್ಡಿ ದರವೇ ಚುನಾವಣಾ ಪ್ರಮುಖ ಪ್ರಚಾರದ ವಿಷಯವಾಗಿದ್ದು, ಹಲವು ಸರಕಾರಗಳನ್ನು ಏರುಪೇರು ಮಾಡಿದ್ದು ಇದೆ. 80ರ ದಶಕದಿಂದಲೂ ಉಳ್ಳಾಗಡ್ಡಿ ಒಂದಿಲ್ಲ ಒಂದು ರೀತಿಯಲ್ಲಿ ರಾಜಕೀಯದಲ್ಲಿ ಪ್ರಭಾವ ತೋರುತ್ತ ಬಂದಿದೆ. ಈ ಬಾರಿ ಉಳ್ಳಾಗಡ್ಡಿ ದರ ಸರ್ವಕಾಲಿಕ ದಾಖಲೆ ಎನ್ನುವಂತಾಗಿದೆ.
Related Articles
Advertisement
ಭಾರತದಲ್ಲಿ ಮಹಾರಾಷ್ಟ್ರದ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ಓಡಿಶಾ, ಉತ್ತರ ಪ್ರದೇಶ ಇನ್ನಿತರ ರಾಜ್ಯಗಳಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತಿದೆ. ಇದರಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೊಡುಗೆ ಹೆಚ್ಚಿನದಾಗಿದೆ. ಮಹಾರಾಷ್ಟ್ರದ ಲಾಸಲ್ ಗಾಂವ್ ದೇಶದ ಅತಿದೊಡ್ಡ ಉಳ್ಳಾಗಡ್ಡಿ ಮಾರುಕಟ್ಟೆಯಾಗಿದೆ. 1951-52ರಲ್ಲಿಯೇ ಭಾರತ ಸುಮಾರು 5,000 ಟನ್ ಉಳ್ಳಾಗಡ್ಡಿ ರಫ್ತು ಮಾಡಿತ್ತು. ರಾಜ್ಯದಲ್ಲಿ ಹುಬ್ಬಳ್ಳಿ ಹಾಗೂ ಬೆಳಗಾವಿ ಉಳ್ಳಾಗಡ್ಡಿಗೆ ದೊಡ್ಡ ಮಾರುಕಟ್ಟೆಯಾಗಿವೆ.
ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ರಾಯಚೂರು, ದಾವಣಗೆರೆ, ಚಿತ್ರದುರ್ಗಗಳಲ್ಲಿ ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆಯಲಾಗುತ್ತದೆ. ಈ ಬಾರಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ ಕಾರಣದಿಂದಾಗಿ ಉಳ್ಳಾಗಡ್ಡಿ ಬೆಳೆ ಶೇ.10 ಸಹ ಬಂದಿಲ್ಲವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಒಂದು ಎಕರೆಗೆ ಸುಮಾರು 50 ಪಿಸಿ(ಅಂದಾಜು 55-60ಕೆಜಿ ಚೀಲ)ಬರಬೇಕಾದ ಉಳ್ಳಾಗಡ್ಡಿ ಫಸಲು ಕೇವಲ 5 ಚೀಲದಷ್ಟು ಮಾತ್ರ ಬಂದಿದೆ ಎಂಬುದು ರೈತರ ಅನಿಸಿಕೆಯಾಗಿದೆ. ಈ ಬಾರಿ ಆರಂಭದಲ್ಲಿ ಉಳ್ಳಾಗಡ್ಡಿ ಮಾರುಕಟ್ಟೆಗೆ ಬಂದಾಗ 500ರೂ.ನಿಂದ ದರ ಆರಂಭವಾಗಿತ್ತು. 3,000ರೂ. ನಿಂದ 4,000-4,500ರೂ.ವರೆಗೆ ಮಾರಾಟ ಆಗಿದ್ದು, ಇದೀಗ 9,000ರಿಂದ 10,000 ರೂ. ದಾಟಿದೆ.
–ಅಮರೇಗೌಡ ಗೋನವಾರ