Advertisement

100ರ ಗಡಿ ದಾಟಿದ ಈರುಳ್ಳಿ ಬೆಲೆ

04:25 PM Dec 10, 2019 | Suhan S |

ಟೇಕಲ್‌: ಕಳೆದ ವಾರ 60 ರಿಂದ 80 ರೂ. ಇದ್ದ ಈರುಳ್ಳಿ ಬೆಲೆ ಈಗ 1 ಕೆ.ಜಿ. 90 ರೂ.ರಿಂದ 160 ರೂ.ವರೆಗೂ ಮಾರಾಟವಾಗುತ್ತಿದ್ದು, ಗ್ರಾಮೀಣ ಜನರು ತತ್ತರಿಸಿದ್ದಾರೆ. ಈರುಳ್ಳಿ ಬೆಲೆ ಕೇಳಿ ಗ್ರಾಹಕರು ಬಾಯಿ ಮೇಲೆ ಕೈಯಿಟ್ಟು ಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಈರುಳ್ಳಿ ಸಹವಾಸವೇ ಬೇಡ ಎಂದು ಬಂದ ದಾರಿಗೆ ಸುಂಕವಿಲ್ಲದಂತೆ ಗ್ರಾಹಕರು ವಾಪಸಾಗುತ್ತಿದ್ದ ದೃಶ್ಯ ಇಲ್ಲಿನ ಸಂತೆಯಲ್ಲಿ ಕಂಡು ಬಂತು. ಕೆಲವರು ಅನಿವಾರ್ಯವಂತೆ ಪ್ರತಿ ವಾರ ಕೆ.ಜಿ.ಗಟ್ಟಲೆ ಈರುಳ್ಳಿ ಕೊಳ್ಳುತ್ತಿದ್ದವರು 1 ಕೆ.ಜಿ. ಸಾಕು ಎಂದು ಚೌಕಾಸಿ ಮಾಡುತ್ತಿದ್ದರು. ಗ್ರಾಮದ ಸಂತೆಯಲ್ಲಿ ಈರುಳ್ಳಿಯನ್ನು ಈ ಬೆಲೆಗೆ ಮಾರುತ್ತಿರುವುದು ಇತಿಹಾಸವಾಗಿದೆ.ಸಂತೆ ಎಂದರೆ ಎಲ್ಲಾ ವಿಧವಾದ ತರಕಾರಿ ದಿನಸಿಗಳು ಅಗ್ಗವಾಗಿರುತ್ತವೆ ಹಾಗೂ ಗುಣಮಟ್ಟದಿಂದ ಕೂಡಿರುತ್ತವೆ ಎಂದು ಅಕ್ಕಪಕ್ಕದ ಗ್ರಾಮಗಳ ಜನರು ಇಲ್ಲಿಗೆ ಬರುತ್ತಾರೆ. ಆದರೆ, ಈ ರೀತಿ ಬೆಲೆ ಏರಿರುವುದನ್ನುಕಂಡು, ಜೇಬಲ್ಲಿ ದುಡ್ಡು ಎಷ್ಟು ಇದೆ ಎಂದು ಮುಟ್ಟಿ ನೋಡಿಕೊಳ್ಳುವಂತಾಗಿದೆ.

ಗ್ರಾಮೀಣ ಜನರೇ ಹೆಚ್ಚು: ಟೇಕಲ್‌ ಸಂತೆಗೆ ಬರುವುದು ಬಹುತೇಕ ಗ್ರಾಮೀಣ ಜನರೇ ಆಗಿದ್ದು, ಅಕ್ಕಪಕ್ಕದ ರೈತರು ಬೆಳೆದ ಬೆಳೆಯನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ. ವಾರ ವಿಡೀ ದುಡಿದ ಕೂಲಿ ಹಣದಲ್ಲಿ ಕೂಲಿ ಕಾರ್ಮಿಕರು, ರೈತರು ಮನೆಗೆ ಬೇಕಾ ದಷ್ಟು ತಾವು ಬೆಳೆಯದೇ ಇರುವ ತರಕಾರಿ, ಅಡುಗೆ ಪದಾರ್ಥಗಳನ್ನು ಖರೀದಿ ಮಾಡುತ್ತಾರೆ.

ಬೆಲೆ ಏರಿಕೆಯಿಂದ ಖರೀದಿಯಲ್ಲಿ ಕಡಿತ: ಮೊದಲು 100 ರೂ. ತಂದರೆ ಅದಲ್ಲೇ ಈರುಳ್ಳಿ, ಬೆಳ್ಳುಳ್ಳಿ, ತರಕಾರಿ ಹೀಗೆ ಇತರೆ ಪದಾರ್ಥಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಈಗ ಈರುಳ್ಳಿ ಬೆಲೆಯೇ 100 ರೂ.ನ ಗಡಿ ದಾಟಿರುವ ಕಾರಣ, ಗ್ರಾಹಕರು, ಪ್ರತಿಬಾರಿ ಖರೀದಿ ಮಾಡುತ್ತಿದ್ದ ಕೆಲವು ಪದಾರ್ಥಗಳನ್ನು ಕೈಬಿಟ್ಟು, ಅದರ ದುಡ್ಡನ್ನು ಈರುಳ್ಳಿ ಖರೀದಿಗೆ ಬಳಸುತ್ತಿದ್ದ ದೃಶ್ಯ ಸಂತೆಯಲ್ಲಿ ಕಂಡು ಬಂತು. ಕೆಲವರು, ಒಂದು ಕೇಜಿ ಬದಲಿಗೆ ಅರ್ಧ ಕೇಜಿ ಈರುಳ್ಳಿ ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next