ಕುಮಟಾ: ಬಿಸಿಲಿನ ಕಾವು ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು, ತಂಪ ಪಾನೀಯಗಳ ವ್ಯಾಪಾರ ಜೋರಾಗಿದೆ. ಆದರೆ ಎಳನೀರು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ದರ ಅಧಿಕವಾಗುವ ಸಾಧ್ಯತೆಯಿದ್ದು,ಗ್ರಾಹಕರು ಕಂಗಾಲಾಗುವಂತಾಗಿದೆ. ಬಿಸಿಲಿನ ಪ್ರಖರತೆಗೆ ಬೆಂದವರು
ಇತರ ತಂಪು ಪಾನೀಯಗಳಿಗಿಂತ ಎಳನೀರನ್ನು ಹೆಚ್ಚಾಗಿ ಅವಲಂಬಿಸತೊಡಗಿದ್ದಾರೆ. ಆದರೆಎಳನೀರು ಪೂರೈಕೆ ಕೊರತೆಯಿಂದ ಇವುಗಳ ಬೆಲೆ ಗಗನಕ್ಕೇರಿದೆ. ಜನ ಸಾಮಾನ್ಯರಿಗೆ ಸುಲಭದ ದರದಲ್ಲಿಕೈಗೆಟುಕುತ್ತಿಲ್ಲ. ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಕುಡಿಯ ಬೇಕಾದ ಅನಿವಾರ್ಯತೆ ಎದುರಾಗಿದೆ.
ಪಟ್ಟಣದ ಮಾರುಕಟ್ಟೆಯಲ್ಲಿ ತಲಾಒಂದು ಎಳನೀರು 35 ರಿಂದ 40ರೂ.ಗಳಿಗೆ ಮಾರಾಟವಾಗುತ್ತಿವೆ. ಕಳೆದ ವರ್ಷಕ್ಕಿಂತ ದರ ದುಪ್ಪಟ್ಟಾಗುವ ಸಾಧ್ಯತೆಯಿದೆ. ಈ ಬಾರಿ ಸುರಿದ ಭೀಕರ ಮಳೆಯಿಂದ ತೆಂಗಿನಕಾಯಿ ಹಾಗೂ ಎಳನೀರಿನ ಬೆಳೆ ಇಳಿಮುಖವಾಗಿದ್ದು,ಪೂರೈಕೆ ಕೊರತೆಯಿಂದ ಬೆಲೆಅಧಿಕಗೊಂಡಿದೆ.
ಕರಾವಳಿ ಭಾಗದ ವಿವಿಧ ಪ್ರದೇಶಗಳು ತೆಂಗಿನ ಬೆಳೆಗೆ ಹೆಸರುವಾಸಿ. ಹೆಚ್ಚಿನ ರೈತರು ತೆಂಗಿನ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅದಲ್ಲದೇ, ತೆಂಗಿನ ಬೆಳೆಯೇ ಕೆಲ ಕುಟುಂಬಗಳ ಮೂಲ ಆದಾಯ. ಕಾಡು ಪ್ರಾಣಿಗಳ ವಿಪರೀತ ಕಾಟ ಹಾಗೂ ಹಲವು ರೋಗಗಳ ಬಾಧೆಯಿಂದ ತೆಂಗಿನಬೆಳೆ ಕುಂಠಿತಗೊಳ್ಳುತ್ತಿದೆ ಎಂಬುದು ಹಲವು ರೈತರ ಅಭಿಪ್ರಾಯ. ಈ ಹಿಂದೆ ತಾಲೂಕಿನ ಕೆಲ ಗ್ರಾಮೀಣ ಭಾಗಗಳಿಂದ ಹಾಗೂ ಹೊನ್ನಾವರದ ಕರ್ಕಿ, ಇಡಗುಂಜಿ ಪ್ರದೇಶಗಳಿಂದ ಮಾರುಕಟ್ಟೆಗೆ ಎಳನೀರು ಅಧಿಕವಾಗಿ ಪೂರೈಕೆಯಾಗುತ್ತಿತ್ತು.
ಆದರೆ ಈಬಾರಿ ಮಳೆ ಅಧಿಕವಾಗಿದ್ದರಿಂದ ಎಳನೀರು ಪೂರೈಕೆಯಲ್ಲಿ ಭಾರೀ ಇಳಿಮುಖವಾಗಿದೆ. ಬಯಲುಸೀಮೆ ಹಾಗೂ ಹೊನ್ನಾವರದ ವಿವಿಧ ಪ್ರದೇಶಗಳಿಂದ ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೂಲಿ ಹಾಗೂ ಸಾರಿಗೆ ವೆಚ್ಚವೂ ದುಬಾರಿಯಾಗಿದೆ. ಒಂದಿಷ್ಟು ಆದಾಯ ಬರಬೇಕಾದರೆ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವುದು ನಮಗೆ ಅನಿವಾರ್ಯ ಎನ್ನುತ್ತಾರೆ ಸ್ಥಳೀಯ ಎಳನೀರು ವ್ಯಾಪಾರಸ್ಥ ದಾಮೋದರ ನಾಯ್ಕ
ಕೆ. ದಿನೇಶ ಗಾಂವ್ಕರ