ರೋಣ: ನೆರೆಯಿಂದ ಈ ಬಾರಿ ಜೋಳದ ದರ ಗಗನಕ್ಕೇರಿದ್ದು, ಕ್ವಿಂಟಲ್‌ಗೆ ಐದು ಸಾವಿರ ಆಸುಪಾಸು ಬಂದು ನಿಂತಿದೆ. ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಸತತ ಮೂರು ಬಾರಿ ಪ್ರವಾಹ ಬಂದು ಕೈಗೆ ಬರುವ ಜೋಳ ಬಾಯಿಗೆ ಬರದಂತಾಗಿದೆ. ಪ್ರವಾಹಕ್ಕೆ ಸಿಕ್ಕು ರೈತರು ಹೊಲಗಳಲ್ಲಿ ಬೆಳೆದಿದ್ದ ಬೆಳೆ ಹಾಗೂ ಮನೆಗಳಲ್ಲಿ ಕೂಡಿಟ್ಟ ವಿವಿಧ ಧಾನ್ಯಗಳು ಕೊಳೆತು ಹೋಗಿದ್ದರಿಂದ ಜೋಳ, ಸಜ್ಜೆ,ನವಣೆ ಸೇರಿದಂತೆ ಅನೇಕ ಆಹಾರ ಧಾನ್ಯಗಳ ಧಾರಣಿಯಲ್ಲಿ ಜಿಗಿತ ಕಂಡಿದೆ.
ಕಳೆದ ತಿಂಗಳು ಕ್ವಿಂಟಲ್ ಗೆ 2000-2500 ರೂ. ಇದ್ದ ಜೋಳದ ಬೆಲೆಯಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಸದ್ಯ ಕ್ವಿಂಟಲ್ ಬಿಳಿ ಜೋಳ 4000-5000 ರೂ. ದರದಲ್ಲಿ ಮಾರಾಟವಾಗುತ್ತಿದೆ. ಉತ್ತರ ಕರ್ನಾಟಕದ ಪ್ರಮುಖ ಆಹಾರವಾಗಿರುವ “ರೊಟ್ಟಿ’ಯನ್ನು ಇನ್ನು ಎಣಿಸಿ ತಿನ್ನುವಂತಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಜೋಳದ ರೊಟ್ಟಿ ಮಾಡಿ ಮಾರಾಟ ಮಾಡುತ್ತ ಬಂದಿರುವ ಕೆಲ ವ್ಯಾಪಾರಸ್ಥರು ಜೋಳದ ಮಾಡುವುದಾ, ಬಿಡುವುದಾ ಅಥವಾ ಸಜ್ಜಿ ರೊಟ್ಟಿ ಮಾಡುವುದಾ ಎಂಬ ಚಿಂತೆಯಲ್ಲಿದ್ದಾರೆ.
ಪಟ್ಟಣದಲ್ಲಿ ಮೊದಲು 4-5 ರೂ.ಗಳಿಗೆ ಮಾರಾಟವಾಗುತ್ತಿದ್ದ ರೊಟ್ಟಿ ಈಗ 8-10 ರೂ.ಗಳಿಗೆ ಮಾರಾಟವಾಗುತ್ತಿವೆ. ಬರಲಿಲ್ಲ ನೀರಿಕ್ಷಿಸಿದಷ್ಟು ಫಲ: ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭದಲ್ಲಿ ತುಸು ಹಿನ್ನಡೆಯಾಗಿ ಆ ನಂತರ ಘರ್ಜಿಸಿದ್ದರಿಂದ ಮುಂಗಾರು ಬೆಳೆಗಳು ಸಂಪೂರ್ಣ ಕೊಳೆತು ಹೋದವು. ಇತ್ತ ಹಿಂಗಾರು ಮಳೆ ವಿಪರೀತವಾಗಿ ಸುರಿದ ಪರಿಣಾಮ ಹಿಂಗಾರಿ ಬೆಳೆಗಳಾದ ಜೋಳ, ಕಡಲೆ, ಕುಸುಬಿ ಸೇರಿದಂತೆ ಅನೇಕ ಬೆಳೆಗಳನ್ನು ಎರಡು ಬಾರಿ ಬಿತ್ತನೆ ಮಾಡಿದ್ದಾರೆ. ಎರಡು ಬಾರಿ ಬಿತ್ತನೆ ಮಾಡಿದರೂ ಸರಿಯಾಗಿ ಮೊಳಕೆ ಒಡೆಯದ ಕಾರಣ ನಿರೀಕ್ಷಿಸಿದಷ್ಟು ಫಲ ಬರದೇ ರೈತರನ್ನು ಚಿಂತೆಗೀಡು ಮಾಡಿದೆ.
ತ್ರಿಶಂಕು ಸ್ಥಿತಿಯಲ್ಲಿ ರೈತರು: ಕಳೆದ ವರ್ಷದಲ್ಲಿ ಅಲ್ಪಸ್ವಲ್ಪ ಮಳೆಯಲ್ಲಿ ಬೆಳೆದ ಜೋಳವನ್ನು ರೈತರು ತಮ್ಮ ತಮ್ಮ ಹಗೆಗಳಲ್ಲಿ ಕೂಡಿಟ್ಟಿದ್ದರು. ಆದರೆ ಭಾರೀ ಪ್ರಮಾಣದ ಮಳೆ ಸುರಿದು ಗ್ರಾಮಗಳಲ್ಲಿ ನೀರು ನುಗ್ಗಿದ್ದರಿಂದ ಅವು ಕೊಳೆತು ಹೋಗಿವೆ. ಅದರಲ್ಲಿಯೇ ಅಳಿದುಳಿದ ಅಲ್ಪ ಸ್ವಲ್ಪ ಜೋಳದ ಧಾರಣಿ ಚೆನ್ನಾಗಿದೆ. ಆದರೆ ಈಗ ಮಾರಾಟ ಮಾಡಬೇಕೋ ಅಥವಾ ಈ ಬಾರಿಯ ಜೋಳ ಬರುವವರೆಗೆ ಅವುಗಳನ್ನು ಆಹಾರಕ್ಕೆ ಬಳಸಬೇಕೋ ಎಂಬುದು ತಿಳಿಯದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ರೈತರು.
ರೊಟ್ಟಿ ರುಚಿಗೆ ವಿದೇಶಿಗರ ಮೆಚ್ಚುಗೆ: ಉತ್ತರ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ವಿದೇಶಿಗರು ಈ ಭಾಗದಲ್ಲಿ ದೊರೆಯುವ ಜೋಳದ ರೊಟ್ಟಿ ರುಚಿ ಸವಿಯುತ್ತಾರೆ. ಅಷ್ಟೇ ಅಲ್ಲ ಅದನ್ನು ಮಾಡುವ ವಿಧಾನವನ್ನು ಸಹ ತಿಳಿಯುತ್ತಾರೆ. “ರೊಟ್ಟಿ ರುಚಿಗೆ ನಾವು ಮಾರು ಹೋಗಿದ್ದೇವೆ. ರೊಟ್ಟಿ ಮಾಡುವ ವಿಧಾನವನ್ನು ತಿಳಿದುಕೊಂಡು ನಮ್ಮ ದೇಶದಲ್ಲೂ ತಯಾರಿಸುವ ಪ್ರಯತ್ನ ಮಾಡುತ್ತೇವೆ ಎನ್ನುತ್ತಾರೆ ಬದಾಮಿ ಗುಹೆ ವೀಕ್ಷಿಸಲು ಬಂದ ಫ್ರಾನ್ಸ್ ದೇಶದ ಪ್ರವಾಸಿ ಡಾ| ಪೈನಾಸ್.
ದಲ್ಲಾಳಿಗಳಿಗೇ ಹೆಚ್ಚು ಲಾಭ: ರೈತರು ತಮ್ಮ ಹತ್ತಿರವಿರುವ ಜೋಳವನ್ನು ಮಾರುಕಟ್ಟೆಗೆ ತರದೆ ಇರುವುದರಿಂದ ದಲ್ಲಾಳಿಗಳು ತಮ್ಮಲ್ಲಿ ಸಂಗ್ರಹ ಮಾಡಿರುವ ಜೋಳವನ್ನು ಸುಮಾರು 4500-5000 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಷ್ಟ ಪಟ್ಟ ಬೆಳೆದ ರೈತರಿಗೆ ಈ ಬೆಲೆ ರೈತರಿಂದಲೇ ಖರೀದಿಸುವ ದಲ್ಲಾಳಿಗಳಿಗೆ ಸಿಗುತ್ತದೆ ಎನ್ನುತ್ತಾರೆ ಹಿರೇಹಾಳ ಗ್ರಾಮದ ರೈತ ಶಿವುಕುಮಾರ ಸಾಲಮನಿ
-ಯಚ್ಚರಗೌಡ ಗೋವಿಂದಗೌಡ್ರ