ಗೌರಿಬಿದನೂರು: ಕಳೆದ 2-3 ತಿಂಗಳುಗಳಿಂದ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತಹಬದಿಗೆ ಬಂತು ಎನ್ನುವ ಹೊತ್ತಿನಲ್ಲಿಯೇ, ಮತ್ತೆ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತು ಹೋಟೆಲ್ ಮಾಲೀಕರಿಗೆ ಅಶ್ರುಧಾರೆ ತರಿಸುತ್ತಿದೆ.
ಮತ್ತಷ್ಟು ಏರಿಕೆ ಸಾಧ್ಯತೆ: ತಿಂಗಳ ಹಿಂದೆಯಷ್ಟೇ ಒಂದು ಕೆ.ಜಿ.ಗೆ 40 ರಿಂದ 60ರ ಆಸುಪಾಸಿನಲ್ಲಿದ್ದ ಬೆಲೆ, ನೆರೆ ಪ್ರವಾಹದಿಂದ ಬೆಳೆ ಹಾನಿಯ ಬೆನ್ನಲ್ಲೇ ದುಪ್ಪಟ್ಟಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ 100ರಿಂದ 120 ರೂ.ವರೆಗೆ ಮಾರಾಟವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಏರುಗತಿಯಲ್ಲಿ ಸಾಗಲಿದೆ ಎಂಬುದು ವರ್ತಕರ ಅಭಿಪ್ರಾಯ.
ಬೆಲೆ ನಿರಂತರವಾಗಿ ಏರುಗತಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಕಳಪೆ ದರ್ಜೆಯ ನಿಂಬೆಹ ಣ್ಣಿನ ಗಾತ್ರದ ಈರುಳ್ಳಿ ಯನ್ನು ಕೆ.ಜಿ.ಗೆ 60 ವರೆಗೆ ಬಿಕರಿಯಾಗುತ್ತಿದೆ. ಗಗನಮುಖೀಯಾಗಿದ್ದ ಈರುಳ್ಳಿ ಬೆಲೆ ಕೇಂದ್ರ ಸರ್ಕಾರ ರಫ್ತು ನಿಷೇಧ ಹೇರಿದ ಬಳಿಕ ಸಹಜ ಸ್ಥಿತಿಗೆ ಬಂದು ಗ್ರಾಹಕರಲ್ಲಿ ನೆಮ್ಮದಿಯ ನಿಟ್ಟುಸಿರು ತಂದಿ ದ್ದರೂ ಈರುಳ್ಳಿ ಹೆಚ್ಚು ಸ್ಟಾಕ್ ಇಲ್ಲದಿರುವುದರಿಂದ ಬೆಲೆ ನಿರಂತರ ವಾಗಿ ಏರುತ್ತಿದೆ. ಗೌರಿ ಬಿದನೂರು ಮಾರುಕಟ್ಟೆಗೆ ಮುಖ್ಯವಾಗಿ ಮಹಾರಾಷ್ಟ್ರ, ಸೊಲ್ಲಾಪುರ, ಪುಣೆ ಮಾರುಕಟ್ಟೆಯಿಂದ ಈರುಳ್ಳಿ ಆವಕವಾಗುತ್ತದೆ. ಗೌರಿಬಿದನೂರು ತಾಲೂಕಿನಲ್ಲಿ ಈರುಳ್ಳಿಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಹೀಗಾಗಿ, ನಗರದ ವರ್ತಕರು ಈರುಳ್ಳಿ ಗಾಗಿ ಹೊರಗಿನ ಮಾರುಕಟ್ಟೆಯನ್ನು ಎದುರು ನೋಡಬೇಕಾದ ಸ್ಥಿತಿ ಇದೆ.
ಸ್ವಲ್ಪವೇ ಖರೀದಿ: ಪ್ರತಿಯೊಂದು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಈರುಳ್ಳಿ. ತರಕಾರಿಗಳು ಮುಖ್ಯ. ಇವುಗಳನ್ನು ಬಳಸದೆ ಸ್ವಾದಿಷ್ಟ ಅಡುಗೆ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ಎಷ್ಟೇ ಬೆಲೆ ಏರಿಕೆಯಾದರೂ ಖರೀದಿಸಲೇ ಬೇಕಾಗುತ್ತದೆ. ಬೆಲೆ ಕಡಿಮೆ ಯಾಗಿದ್ದ ವೇಳೆ ಹೆಚ್ಚು ಕೊಳ್ಳುತ್ತಿದ್ದೆವು. ಈಗ ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತೇವೆ ಎಂದು ಗ್ರಾಹಕರು ಹೇಳಿದರೆ, ಹೋಟೆಲ್‌ನವರು ಈರುಳ್ಳಿಯನ್ನು ಹೆಚ್ಚಾಗಿ ಖರೀದಿಸುತ್ತಿಲ್ಲ. ಬದಲಿಗೆ ಕೋಸನ್ನು ಬಳಸುತ್ತಿದ್ದಾರೆ. ಅದೇ ರೀತಿ ಬೋಂಡಾ ಮತ್ತು ಪಕೋಡಾ ಮಾರಾಟ ಮಾಡುವವರೂ ಸಹ ಈರುಳ್ಳಿ ಬೆಲೆ ಹೆಚ್ಚಳವಾಗಿರುವುದರಿಂದ ಮೆಣಸಿನಕಾಯಿ ಬಜ್ಜಿ ಮಾರಾಟ ಮಾಡುತ್ತಿದ್ದು, ಈರುಳ್ಳಿ ಪಕೋಡ ಮಾರಾಟ ಮಾಡುವುದನ್ನೇ ಸ್ಥಗಿತಗೊಳಿಸಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆ ಆಯಿತು ಎನ್ನುವಷ್ಟರಲ್ಲಿ ದುಪ್ಪಟ್ಟಾಗಿದೆ. ಜತೆಗೆ ಶುಂಠಿ ಬೆಲೆ ಕೂಡ ವಿಪರೀತವಾಗಿ ಏರಿಕೆಯಾಗಿದೆ. ಹಾಗಂತ ನಾವು ಏಕಾಏಕಿ ಆಹಾರ ಪದಾರ್ಥಗಳು, ಖಾದ್ಯಗಳ ಬೆಲೆ ಏರಿಸಲು ಆಗುವುದಿಲ್ಲ. ಇದರಿಂದ ಹೋಟೆಲ್ ಮಾಲೀಕರ ಖರ್ಚು ಹೆಚ್ಚಾಗುತ್ತಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು .
-ವಿ.ಡಿ.ಗಣೇಶ್ ಗೌರಿಬಿದನೂರು