Advertisement

ದಿನಬಳಕೆ ವಸ್ತುಗಳು ತುಟ್ಟಿ : ದೈನಂದಿನ ಬದುಕಿನ ಮೇಲೂ ಪರಿಣಾಮ

10:28 AM Aug 30, 2018 | Team Udayavani |

ಮಹಾನಗರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್‌ ಬೆಲೆ 80 ರೂ. ಗಡಿದಾಟಿದ್ದು, ಡೀಸೆಲ್‌ ಕೂಡ 71 ರೂ. ದಾಟಿದೆ. ಇದರಿಂದ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊಡಗು ಮತ್ತು ಕೇರಳದ ಅತಿವೃಷ್ಟಿಯಿಂದಾಗಿ ಹೂವು ಸಹಿತ ದಿನಸಿ ಸಾಮಾನು ಬೆಲೆ ಈಗಾಗಲೇ ಹೆಚ್ಚಳವಾಗಿದ್ದು, ಇದರ ಜತೆ ಕಚ್ಚಾತೈಲ ಬೆಲೆ ಏರಿಕೆಯಾಗಿರುವುದು ಕೂಡ ಸಾರ್ವಜನಿಕರ ದೈನಂದಿನ ಬದುಕಿನ ಮೇಲೂ ಪರಿಣಾಮ ಬೀರಲಿದೆ.

Advertisement

ಏರಿಕೆ ಸಾಧ್ಯತೆ
ಒಂದು ತಿಂಗಳಿನಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗುತ್ತಲೇ ಇದೆ. ಆ. 20ರಂದು 79.35 ರೂ. ಇದ್ದ ಪೆಟ್ರೋಲ್‌ ಬೆಲೆ ಆ. 29ಕ್ಕೆ 80.07 ರೂ.ಗೆ ತಲುಪಿದೆ. ಅದೇ ರೀತಿ ಆ. 20ರಂದು 70.62 ರೂ. ಇದ್ದ ಡೀಸೆಲ್‌ ಬೆಲೆ ಆ. 29ಕ್ಕೆ 71.36 ರೂ. ತಲುಪಿದೆ. ಇದರೊಂದಿಗೆ ಒಂಬತ್ತು ದಿನಗಳಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ಗೆ 72 ಪೈಸೆ, ಡೀಸೆಲ್‌ ಗೆ 74 ಪೈಸೆ ಹೆಚ್ಚಳವಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣಲಿದೆ.

ಜಿಲ್ಲೆಯಲ್ಲಿ ಪ್ರತೀ ದಿನ ಪೆಟ್ರೋಲ್‌ ಗಿಂತ ಡೀಸೆಲ್‌ ಬಳಕೆಯೇ ಹೆಚ್ಚು. ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಶನ್‌ನಿಂದ ಜಿಲ್ಲೆಯಲ್ಲಿ 62 ಸಾವಿರ ಕಿಲೋ ಲೀಟರ್‌ ಪೆಟ್ರೋಲ್‌ ಮತ್ತು 153 ಸಾವಿರ ಕಿಲೋ ಲೀಟರ್‌ ಡೀಸೆಲ್‌ ಮಾರಾಟವಾಗುತ್ತದೆ. ಅದರಂತೆಯೇ ಇಂಡಿಯನ್‌ ಆಯಿಲ್‌ ಸಂಸ್ಥೆಯಿಂದ ಪ್ರತೀದಿನ ಜಿಲ್ಲೆಯಲ್ಲಿ 190 ಸಾವಿರ ಕಿಲೋ ಲೀಟರ್‌ ಪೆಟ್ರೋಲ್‌ ಮತ್ತು 550 ಸಾವಿರ ಕಿ.ಲೀ. ಡೀಸೆಲ್‌ ಮಾರಾಟವಾಗುತ್ತದೆ.

ಹೂವಿನ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
ವರಮಹಾಲಕ್ಷ್ಮೀ ಹಬ್ಬದ ವೇಳೆ ತುಟ್ಟಿಯಾಗಿದ್ದ ಹೂವಿನ ಬೆಲೆ ಇನ್ನೂ ಚೇತರಿಕೆಯಾಗಿಲ್ಲ. ವ್ಯಾಪಾರಿಗಳ ಪ್ರಕಾರ ಡೀಸೆಲ್‌ ಬೆಲೆ ಜಾಸ್ತಿಯಾದಂತೆ ಸಾಗಾಟ ವೆಚ್ಚ ಹೆಚ್ಚಾಗುತ್ತದೆ. ಪರಿಣಾಮ ಹೂವುಗಳು ತುಟ್ಟಿಯಾಗುತ್ತವೆ. ಕಚ್ಚಾತೈಲ ಬೆಲೆ ಏರಿಕೆಯಾದ ಕಾರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು. ಸದ್ಯ ಮಂಗಳೂರಿಗೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನ, ಬಳ್ಳಾರಿ, ಕುಣಿಗಲ್‌, ಹೊಸೂರು ಸಹಿತ ಹಲವೆಡೆಗಳಿಂದ ಬಸ್‌ ಮೂಲಕ ಹೂವುಗಳು ಬರುತ್ತಿವೆ. ವ್ಯಾಪಾರಿಗಳು 10-15 ಕೆ.ಜಿ. (ಒಂದು ಬಾಕ್ಸ್‌) ಹೂವು ಸಾಗಾಟಕ್ಕೆ ಸದ್ಯ 200ರಿಂದ 300 ರೂ. ನೀಡುತ್ತಿದ್ದಾರೆ. ಒಬ್ಬ ವ್ಯಾಪಾರಿ ಸಾಮಾನ್ಯವಾಗಿ ದಿನದಲ್ಲಿ 12ಕ್ಕೂ ಹೆಚ್ಚು ಬಾಕ್ಸ್‌ ಹೂವು ತರಿಸುತ್ತಾರೆ.

ಶೇ. 75ರಷ್ಟು ಹಣ ಡೀಸೆಲ್‌ಗೆ ಖರ್ಚು
ಡೀಸೆಲ್‌ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಿಟಿ ಬಸ್‌ ಮಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನದಲ್ಲಿ ಸಂಗ್ರಹವಾದ ಹಣದ ಶೇ.75ರಷ್ಟು ಡೀಸೆಲ್‌ಗೆ ಖರ್ಚಾಗುತ್ತದೆ. ಉಳಿದಂತೆ ತೆರಿಗೆ, ವಾಹನ ನಿರ್ವಹಣೆ ಸೇರಿ ಉಳಿತಾಯವಾಗುವುದಿಲ್ಲ ಎನ್ನುತ್ತಾರೆ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ.

Advertisement

ಮಂಗಳೂರು ನಗರ: ಪೆಟ್ರೋಲ್‌ ಬೆಲೆ- 80.07 ರೂ., ಡೀಸೆಲ್‌ ಬೆಲೆ- 71.36 ರೂ.

ಮೂರೂವರೆ ತಿಂಗಳಲ್ಲಿ 3.81 ರೂ. ಹೆಚ್ಚಳ:  ಮೂರೂವರೆ ತಿಂಗಳಿನಲ್ಲಿ ನಗರದಲ್ಲಿ ಪೆಟ್ರೋಲ್‌ ಬೆಲೆ 3.81 ರೂ. ಹೆಚ್ಚಳವಾಗಿದೆ. ಅದೇ ರೀತಿ ಡೀಸೆಲ್‌ ಬೆಲೆಯು 3.72 ರೂ. ಹೆಚ್ಚಳವಾಗಿದೆ.

ಮತ್ತಷ್ಟು ಹೆಚ್ಚಳ  ಸಾಧ್ಯತೆ: ಪೆಟ್ರೋಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬುಧವಾರ ಪೆಟ್ರೋಲ್‌ ಬೆಲೆ 80 ರೂ. ತಲುಪಿದೆ. ಸದ್ಯದ ಪರಿಸ್ಥಿತಿಯ ಪ್ರಕಾರ ಮುಂದಿನ ಕೆಲವು ದಿನಗಳು ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.
– ಸತೀಶ್‌ ಎನ್‌. ಕಾಮತ್‌,
ಅಧ್ಯಕ್ಷ, ದ.ಕ. ಉಡುಪಿ ಪೆಟ್ರೋಲ್‌
ಡೀಸೆಲ್‌ ಅಸೋಸಿಯೇಶನ್‌ 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next