Advertisement

ಸರಳ ಆಚರಣೆಗೆ ಅದ್ಧೂರಿ ಶಾಮಿಯಾನ

02:56 PM Nov 02, 2020 | Suhan S |

ಚನ್ನರಾಯಪಟ್ಟಣ: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಸರಳವಾಗಿ ಆಚರಿಸಲು ತಾಲೂಕು ಆಡಳಿತ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿತ್ತು. ಆದರೆ, ಬೃಹತ್‌ ಶಾಮಿಯಾನ ಹಾಕುವ ಮೂಲಕ ದುಂದು ವೆಚ್ಚ ಮಾಡುವುದು ಎಷ್ಟು ಸರಿ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

Advertisement

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಎಂದಿನಂತೆ ನೂರಾರು ಚೇರು, ಬೃಹತ್‌ ಶಾಮಿಯಾನ ಹಾಕಲಾಗಿತ್ತು. ಆದರೆ, ಬೆರಳೇಣಿಕೆಯಷ್ಟು ಮಂದಿ ಮಾತ್ರ ಸಮಾರಂಭದಲ್ಲಿ ದ್ದರು. ಎಲ್ಲಾ ಕಡೆ ಒಳಾಂಗಣದಲ್ಲಿ ಸರಳವಾಗಿ ಸಮಾರಂಭ ಮಾಡಲಾಗಿದೆ. ಆದರೆ, ಇಲ್ಲಿ ಮಾತ್ರ ಶಾಮಿಯಾನ ಹಾಕಲಾಗಿತ್ತು. ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿ ಬಿಟ್ಟರೆ ಶಾಸಕರಾದಿಯಾಗಿ ಬಹುತೇಕ ಮಂದಿ ಗೈರಾಗಿದ್ದರು.

ರಾಜ್ಯೋತ್ಸವ ಮರೆತ ಶಾಸಕ: ಅ.31ರಿಂದ ನಿರಂತರ ಸರ್ಕಾರಿ ರಜೆ ಇದ್ದ ಕಾರಣ ಇಲಾಖೆ ಅಧಿಕಾರಿಗಳು ರಾಜ್ಯೋತ್ಸವ ಸಮಾರಂಭಕ್ಕೆ ಗೈರಾಗಿದ್ದರು. ಇನ್ನು ಶಾಸಕ ಬಾಲಕೃಷ್ಣ ಶಿರಾ ಉಪ ಚುನಾವಣೆ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಸಮಾರಂಭಕ್ಕೆ ಬಂದಿರಲಿಲ್ಲ. ಕಸಾಪ ಅಧ್ಯಕ್ಷ ಪ್ರಕಾಶ ಜೈನ್‌, ಜಿಲ್ಲಾ ಪಂಚಾಯಿತಿ ಕೆಲ ಸದಸ್ಯರು ಸಹ ರಾಜ್ಯೋತ್ಸವ ಸಮಾರಂಭ ಮರೆತಿದ್ದರು.

ಶಾಸಕ ಸಹೋದರ ಸಭೆ ಅಧ್ಯಕ್ಷತೆ: ಸರ್ಕಾರಿ ಸಭೆ ಸಮಾರಂಭಕ್ಕೆ ಶಾಸಕರು ಗೈರಾದರೆ ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ ಸಭೆಯ ಅಧ್ಯಕ್ಷತೆ ನೀಡಬೇಕು. ಆದರೆ, ತಾಲೂಕು ಆಡಳಿತ ಮಾತ್ರ ಶಾಸಕರ ಸಹೋದರ ಜಿಪಂ ಸದಸ್ಯ ಸಿ.ಎನ್‌.ಪುಟ್ಟಸ್ವಾಮಿಗೌಡ ಅವರನ್ನು ಸಭೆಯ ಅಧ್ಯಕ್ಷರನ್ನಾಗಿ ಮಾಡಿದಲ್ಲದೆ, ಅವರಿಂದಲೇ ಕನ್ನಡ ಧ್ವಜಾರೋಹಣ ಮಾಡಿಸಿತು.

ಸಭೆಗೆ ಆಹ್ವಾನಿಸಲ್ಲ: ಸಮಾರಂಭ ಮುಗಿದ ಮೇಲೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಪಂ ಅಧ್ಯಕ್ಷೆ ಶ್ಯಾಮಲಾ, ರಾಷ್ಟ್ರೀಯ ಹಬ್ಬಗಳಿಗೆ ತಹಶೀಲ್ದಾರ್‌ ಜೆ.ಬಿ.ಮಾರುತಿ ನೇರವಾಗಿ ದೂರವಾಣಿ ಕರೆ ಮಾಡಿ ನಮಗೆ ಆಹ್ವಾನಿಸಿಲ್ಲ, ಕಂದಾಯ ಇಲಾಖೆ ಸಿಬ್ಬಂದಿ ಆಹ್ವಾನ ಪತ್ರಿಕೆ ಯಾವಾಗ ನೀಡುತ್ತಾರೆ ಎನ್ನುವುದು ತಿಳಿಯುತ್ತಿಲ್ಲ, ಕಚೇರಿ ಬೀಗ ಹಾಕಿದ್ದ ವೇಳೆ ಬಾಗಿಲಿಗೆ ಹಾಕಿಹೋಗುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

Advertisement

ಎರಡು ನಿಮಿಷ ಕಾಯಬೇಕಿತ್ತು: ತಾಪಂನಲ್ಲಿ 9.15ಕ್ಕೆ ರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ತಾಲೂಕು ಆಡಳಿತದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರುವುದಾಗಿ ದೂರವಾಣಿ ಮೂಲಕ ತಿಳಿಸಿದ್ದರೂ ತಾಲೂಕು ಆಡಳಿತ ನನ್ನ ಮಾತಿಗೆ ಮನ್ನಣೆ ನೀಡದೆ, ಶಾಸಕರ ಸಹೋದರರ ಮೂಲಕ ಧ್ವಜಾ ರೋಹಣ ಮಾಡಿಸಿದೆ. ನಾನು ಕಾರ್ಯಕ್ರಮಕ್ಕೆ ಬಂದ ಮೇಲೂ ಅಧ್ಯಕ್ಷತೆ ನೀಡದೆ ಶಾಸಕರ ಸಹೋದರ ಜಿಪಂ ಸದಸ್ಯ ಪುಟ್ಟ ಸ್ವಾಮಿಗೌಡರಿಂದ ಸಮಾರಂಭದ ಅಧ್ಯಕ್ಷೀಯ ನುಡಿ ಗಳನ್ನು ಮಾಡಿಸಿದ್ದು ಎಷ್ಟು ಸರಿ ಎಂದು ಮಾಧ್ಯಮದ ಮೂಲಕ ಪ್ರಶ್ನಿಸಿದ್ದಾರೆ.

ಸರಳ ಸಮಾರಂಭ ಎಂದು ಪೂರ್ವಭಾವಿ ಸಭೆಯಲ್ಲಿ ತಿಳಿಸಿದ್ದರು. ಆದರೆ, ಶಾಮಿಯಾನ ಹಾಕುವಂತೆ ತಾಲೂಕು ಆಡಳಿತ ಪತ್ರ ರವಾನೆ ಮಾಡಿತ್ತು. ಇಷ್ಟು ಕಡಿಮೆ ಮಂದಿ ಆಗಮಿಸುವುದು ತಿಳಿದಿರುವ ಆಡಳಿತ ಮಂಡಳಿ, ಮಿನಿವಿಧಾನ ಸೌಧದ ಆವರಣದಲ್ಲಿ ಸಭೆ ಮಾಡಬಹುದಿತ್ತು. ಎಂ.ಕುಮಾರ್‌, ಪುರಸಭೆ ಮುಖ್ಯಾಧಿಕಾರಿ.

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next