Advertisement

ಉಂಡಿ ಹಬ್ಬಕ್ಕೆ ಜೇಬಿಗೆ ಕಿರು ಕಿಂಡಿ!

02:52 PM Aug 03, 2019 | Suhan S |

ಹುಬ್ಬಳ್ಳಿ: ಉಂಡಿಗಳ ಹಬ್ಬವಾದ ನಾಗರ ಪಂಚಮಿಗೆ ಬೆಲೆ ಏರಿಕೆ ಬಿಸಿ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ಪ್ರಮಾಣದಲ್ಲಿ ತಟ್ಟಿದೆ. ಶೇಂಗಾ ಕೆಜಿಗೆ 120ರೂ. ಇದ್ದರೆ, ಪುಟಾಣಿ 80ರೂ., ಕಡಲೆಬೇಳೆ 55-60 ರೂ. ಇದ್ದು, ಶೇಂಗಾ ದರ ತುಸು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

Advertisement

ಕಳೆದ ವರ್ಷ ಬರದ ಕಾರಣ ಶೇಂಗಾ ಬಿತ್ತನೆ ಕುಂಠಿತವಾಗಿ ಸಹಜವಾಗಿಯೇ ಶೇಂಗಾ ಫ‌ಸಲು ಕೊರತೆ ಉಂಟಾಗಿತ್ತು. ಈ ವರ್ಷ ಶೇಂಗಾ ಬಿತ್ತನೆ ಬೀಜವೂ ದೊರಕದೆ ದರದಲ್ಲಿ ದುಬಾರಿಯಾಗಿತ್ತು. ಇದೀಗ ಶ್ರಾವಣದಲ್ಲೂ ಮಾರುಕಟ್ಟೆಯಲ್ಲಿ ಶೇಂಗಾ ತೇಜಿಯಾಗಿದೆ. ಶ್ರಾವಣ ಬಂತೆಂದರೆ ಸಹಜವಾಗಿಯೇ ಆಹಾರ ಪದಾರ್ಥ ಇನ್ನಿತರ ವಸ್ತುಗಳ ಬೆಲೆಯಲ್ಲಿಯೂ ಕೊಂಚ ಏರಿಕೆ ಕಂಡು ಬರುತ್ತಿದೆ.

ಎಷ್ಟಿತ್ತು-ಎಷ್ಟಾಗಿದೆ?: ಕಳೆದ ವರ್ಷದ ದರಗಳಿಗೆ ಹೋಲಿಸಿದರೆ ಕೆಲವೊಂದು ಪದಾರ್ಥಗಳ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿವೆ. ಯಾಲಕ್ಕಿ, ಗಸಗಸೆ, ಶೇಂಗಾದ ಬೆಲೆ ಕೊಂಚ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಶೇಂಗಾ ಕೆಜಿಗೆ 90ರೂ. ಇದ್ದರೆ ಈ ಬಾರಿ 115-120ರೂ. ಆಗಿದೆ. ಕಡಲೆಬೇಳೆ 54 ರೂ. ಇದ್ದು, ಕಳೆದ ವರ್ಷ 62-65 ರೂ. ಇತ್ತು. ಪುಟಾಣಿ 80 ರೂ. ಇದ್ದು, ಕಳೆದ ವರ್ಷ 93-100ರೂ. ವರೆಗೆ ಇತ್ತು. ಕಡಲೆಕಾಳು 55-60 ಇದ್ದರೆ, ಕಳೆದ ವರ್ಷ 60-65 ರೂ. ಇತ್ತು. ಸಕ್ಕರೆ ಕೆಜಿಗೆ 35ರೂ. ಇದ್ದು, ಕಳೆದ ವರ್ಷ 40ರೂ. ಇತ್ತು. ಕೆಜಿ ಬೆಲ್ಲ 35-40 ರೂ. ಸ್ಥಿರವಾಗಿದೆ.

ಶೇಂಗಾ ಎಣ್ಣೆ ದರದಲ್ಲಿ ಹೆಚ್ಚಳವಾಗಿಲ್ಲ. ಕಳೆದ ಬಾರಿ ಶೇಂಗಾ ಎಣ್ಣೆ ಕೆಜಿ 96 ರೂ.ಗಳಿದ್ದರೆ ಈ ವರ್ಷವೂ ಅಷ್ಟೇ ಇದೆ. ಫಾಮ್‌ ಎಣ್ಣೆ ಕಳೆದ ವರ್ಷ ಕೆಜಿಗೆ 76 ರೂ. ಇತ್ತು. ಈ ವರ್ಷ 66 ರೂ. ಆಗಿದೆ. ಸೋಯಾಬಿನ್‌ ಎಣ್ಣೆ ಕಳೆದ ವರ್ಷ ಕೆಜಿಗೆ 76 ರೂ. ಇತ್ತು. ಈ ವರ್ಷ 82 ರೂ.ಗೆ ಹೆಚ್ಚಳವಾಗಿದೆ.

ಮಸಾಲೆ ರಾಜ ದುಬಾರಿ: ಮಸಾಲೆಗಳ ರಾಜ ಯಾಲಕ್ಕಿ ಹಾಗೂ ಗಸಗಸೆ ದರಗಳಲ್ಲಿ ತುಂಬಾ ಏರಿಕೆಯಾಗಿದೆ. ಕಳೆದ ವರ್ಷ ಯಾಲಕ್ಕಿ ಕೆಜಿಗೆ 1500 -1700 ರೂ.ಗಳಿದ್ದರೆ, ಈ ವರ್ಷ 4600-5000 ರೂ.ಗೆ ಕೆಜಿಯಾಗಿದೆ. ಗಸಗಸೆ ಕಳೆದ ವರ್ಷ ಕೆಜಿಗೆ 600-700 ರೂ. ಇದ್ದರೆ, ಈ ವರ್ಷ 900-1000 ರೂ.ಗೆ ಹೆಚ್ಚಳವಾಗಿದೆ.

Advertisement

ಉಂಡಿ ಮಾಡುವ ದಾನಿ-ಗುಳಗಿ ಕೆಜಿಗೆ 140ರಿಂದ 160 ರೂ. ದರ ನಿಗದಿ ಮಾಡಲಾಗಿದೆ. ವಿವಿಧ ಆಹಾರ ಧಾನ್ಯ ಹಾಗೂ ಇನ್ನಿತರ ಪದಾರ್ಥಗಳ ದರ ಹೆಚ್ಚಳ ಸಹಜವಾಗಿಯೇ ಖರೀದಿಯ ಮೇಲೆ ಪರಿಣಾಮ ಬೀರಲಿದೆ. ಅದೇ ರೀತಿ ಹೂವಿನ ದರದಲ್ಲೂ ಹೆಚ್ಚಳವಾಗಿದೆ. ಅಮಾವಾಸ್ಯೆ ದಿನದಂದು ಮಲ್ಲಿಗೆ ಹೂ 30-40 ರೂ.ಗೆ ಮಾರು ಮಾರಾಟವಾಗಿದ್ದು, ಶ್ರಾವಣ ಮುಗಿಯುವವರೆಗೂ ಹೂವಿನ ದರ ತಗ್ಗುವ ಸಾಧ್ಯತೆ ಕಡಿಮೆ.

ಕಳೆದ ಬಾರಿ ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳ ದರದಲ್ಲಿ ಕೊಂಚ ಏರಿಕೆ ಕಂಡಿದ್ದು, ಈ ಬಾರಿ ಶೇಂಗಾ, ಯಾಲಕ್ಕಿ, ಗಸಗಸೆ ಬಿಟ್ಟರೆ ಇನ್ನುಳಿದ ವಸ್ತುಗಳ ದರ ಯಥಾಸ್ಥಿತಿಯಲ್ಲಿದೆ.• ಮಹಾಲಿಂಗಪ್ಪ ಹರ್ತಿ, ಕಿರಾಣಿ ವ್ಯಾಪಾರಸ್ಥ

ಕಳೆದ ಬಾರಿ ಶೇಂಗಾ ದರ 90 ರೂ. ಇದ್ದರೆ ಈ ಬಾರಿ 120 ರೂ. ಮುಟ್ಟಿದೆ. ಇನ್ನುಳಿದ ವಸ್ತುಗಳ ದರ ಯಥಾಸ್ಥಿತಿಯಲ್ಲಿದೆ. ಗ್ರಾಹಕರಿಗೂ ಹೆಚ್ಚಿನ ಹೊರೆ ಇಲ್ಲದೆ, ಇರುವಷ್ಟರಲ್ಲಿಯೇ ಹಬ್ಬ ಆಚರಣೆಗೆ ಮುಂದಾಗುತ್ತಿದ್ದಾರೆ.• ಸತೀಶ ದೋಂಗಡಿ, ಕಿರಾಣಿ ವ್ಯಾಪಾರಸ್ಥ

 

•ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next