ಸಿರುಗುಪ್ಪ: ಆಯುರ್ವೇದಿಕ ಅಂಶಗಳುಳ್ಳ ನೇರಳೆ ಹಣ್ಣು ಮಾರುಕಟ್ಟೆಗೆ ಬಂದಿದ್ದು, ಈ ಹಣ್ಣಿನ ಬೆಲೆ ಒಂದು ಕೆಜಿಗೆ ರೂ. 200 ಇದ್ದು ಹಣ್ಣು ತಿನ್ನುವವರ ಬಾಯಲ್ಲಿ ನೀರೂರಿಸುತ್ತಿವೆ. ಆದರೆ ಹಣ್ಣಿನ ಬೆಲೆ ಕೇಳಿದರೆ ಮಾತ್ರ ಈ ಹಣ್ಣು ನಮ್ಮ ಕೈಗೆಟುಕುವುದಿಲ್ಲ ಎನ್ನುವ ಪರಿಸ್ಥಿತಿ ಸದ್ಯ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ.
ಕೊಪ್ಪಳ ಜಿಲ್ಲೆಯ ತಾವರಗಿ ಸುತ್ತುಮುತ್ತಲಿನ ಹಳ್ಳಿಗಳು ಮತ್ತು ಆದೋನಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ನಗರದಲ್ಲಿ ನೇರಳೆ ಹಣ್ಣು ಮಾರಾಟ ಮಾಡಲು ಬರುತ್ತಿದ್ದು, ಈ ವ್ಯಾಪಾರಿಗಳು ಸ್ವಂತ ಹೊಲದಲ್ಲಿ ಬೆಳೆದ ನೇರಳೆ ಹಣ್ಣನ್ನು ತರುವುದಿಲ್ಲ, ಆದರೆ ರೈತರ ಹೊಲದಲ್ಲಿ ಬೆಳೆದ ನೇರಳೆ ಹಣ್ಣನ್ನು ಮಾರಾಟ ಮಾಡಲು ಗುತ್ತಿಗೆ ಪಡೆದ ಗುತ್ತಿಗೆದಾರರಿಂದ ಹಣ್ಣುಗಳನ್ನು ಖರೀದಿಸಿ ಮಾರಾಟ ಮಾಡಲು ತರುತ್ತಿದ್ದಾರೆ. ತಮ್ಮ ನಿತ್ಯದ ವ್ಯಾಪಾರದಲ್ಲಿ ಲಾಭದೊಂದಿಗೆ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಈ ಹಣ್ಣಿನ ದರ ಹೆಚ್ಚಾಗಲು ಕಾರಣವೆಂದು ಹೇಳಲಾಗುತ್ತಿದೆ.
ತಾಲೂಕಿನಲ್ಲಿ ನೇರಳೆ ಹಣ್ಣು ಬೆಳೆಯುವ ರೈತರೇ ಇಲ್ಲ. ಆದ್ದರಿಂದ ಬೇರೆ ಕಡೆಯಿಂದ ಬಂದ ವ್ಯಾಪಾರಿಗಳು ತಮ್ಮ ಭರ್ಜರಿ ಲಾಭದೊಂದಿಗೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಕ್ಕರೆ ಖಾಯಿಲೆ ಇರುವವರು ಈ ಹಣ್ಣನ್ನು ತಿನ್ನುವುದರಿಂದ ಖಾಯಿಲೆ ಕಡಿಮೆಯಾಗುತ್ತದೆ ಎನ್ನುವ ಕಾರಣದಿಂದ ವರ್ಷಕ್ಕೊಮ್ಮೆ ಬರುವ ಈ ಹಣ್ಣನ್ನು ತಿನ್ನುವವರ ಸಂಖ್ಯೆ ಹೆಚ್ಚಾಗಿದೆ.
ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದ್ದರೂ ಕೊಳ್ಳುವ ಗ್ರಾಹಕರಿಗೆ ಕೊರತೆ ಇಲ್ಲ. ಮಕ್ಕಳಿಗೆ ಇಷ್ಟವಾಗುವ ಈ ಹಣ್ಣನ್ನು ತೊಳೆದು ಉಪ್ಪು ಬೆರೆಸಿ ತಿಂದರೆ ಅದರ ಸ್ವಾದವೇ ಬೇರೆಯಾಗಿರುತ್ತದೆ. ಕಳೆದ ಬಾರಿ ನೇರಳೆ ಹಣ್ಣಿನ ಬೆಲೆಯು ಒಂದು ಕೆಜಿಗೆ ರೂ.180 ಇತ್ತು. ಆದರೆ ಈ ವರ್ಷ ರೂ. 200ಕ್ಕೇರಿದೆ.
ಇದಕ್ಕೆ ಮುಖ್ಯಕಾರಣ ಸಕಾಲಕ್ಕೆ ಮಳೆಯಾಗಿ ಗಿಡಗಳಲ್ಲಿ ಹಣ್ಣುಗಳು ಸಾಕಷ್ಟು ಸಂಖ್ಯೆಯಲ್ಲಿ ಬಿಟ್ಟಿದ್ದರೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸಂಪೂರ್ಣ ಲಾಕ್‌ಡೌನ್ ನಿಂದ ವ್ಯಾಪಾರ ಮಾಡಲು ಅವಕಾಶವಿಲ್ಲದೇ ಇರುವುದು, ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿರುವುದರಿಂದ ಇಷ್ಟೊಂದು ದುಬಾರಿ ಬೆಲೆಗೆ ಕಾರಣವೆಂದು ಹೇಳಲಾಗುತ್ತಿದೆ