ಚಿನ್ನದ ಬೆಲೆಯ ನೀರಿನ ಬಾಟಲಿ: ಹೆಚ್ಚೇನಲ್ಲ, ಬರೀ 20 ವರ್ಷಗಳ ಹಿಂದೆ, ನೀರನ್ನು ಬಾಟಲಿಯಲ್ಲಿ ಹಾಕಿ ಮಾರುತ್ತಾರೆಂದರೆ ಜನ ನಗುತ್ತಿದ್ದರು. ನೀರು ಮಾರಾಟದ ವಸ್ತುವಲ್ಲ ಎಂಬ ನಂಬಿಕೆ, ಆ ನಗೆಯ ಹಿಂದಿತ್ತು. ಆದರೆ ಈಗ, ನೀರು ಮಾರುವ ವಸ್ತು ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಹತ್ತಿಪ್ಪತ್ತು ಪಾಯಿಗಳಿಗೆ, ಪ್ಯಾಕೇಜ್ಡ್ ಬಾಟಲಿ ನೀರು ಲಭ್ಯ. ಹೀಗಿರುವಾಗ, ಒಂದು ಬಾಟಲಿ ನೀರಿಗೆ 36,000 ರೂ. ಬೆಲೆಯಿದೆ ಎಂದು ಹೇಳಿದರೆ, ಅಚ್ಚರಿಯಾಗದೆ ಇದ್ದೀತೇ? ಅಲ್ಲಿರುವ ನೀರಿನ ಪ್ರಮಾಣವಾದರೂ ಎಷ್ಟು ಅಂತೀರಿ? ಮುಕ್ಕಾಲು ಲೀಟರ್ ಅಥವಾ 750 ಎಂ.ಎಲ್!
ಬರೀ ಮುಕ್ಕಾಲು ಲೀಟರ್ ನೀರಿಗೆ ಅಷ್ಟು ದುಬಾರಿ ಬೆಲೆ ಇರಬೇಕಾದರೆ, ಆ ಬಾಟಲಿ ಚಿನ್ನದ್ದೋ, ವಜ್ರದ್ದೋ ಆಗಿರಬೇಕು ಎಂದಿರಾ? ಅದೂ ಇಲ್ಲ. ಸಾದಾ ಪ್ಲಾಸ್ಟಿಕ್ ಬಾಟಲಿ ನೀರದು. ಈ ನೀರು ಕೊಡುವ ಕಂಪನಿಯ ಹೆಸರು- ಕೋನಾ ನಿಗಾರಿ. ಅಷ್ಟು ದುಬಾರಿ ಬೆಲೆ ಏಕೆಂದರೆ, ಅದರಲ್ಲಿನ ನೀರು ತುಂಬಾ ವಿಶೇಷವಾದುದು. ಅದು, ಎಲೆಕ್ಟ್ರೊಲೈಟ್ ಮತ್ತು ಖನಿಜಗಳಿಂದ ಕೂಡಿದೆ. ಹವಾಯಿ ದ್ವೀಪದ ಬಳಿಯ ಸಮುದ್ರದಾಳದ ಒರತೆಯೊಂದರಿಂದ ಸಂಗ್ರಹಿಸಲ್ಪಟ್ಟ ಶುದ್ನೀಧರು, ಕೋನಾ ನಿಗಾರಿ ಬಾಟಲಿಯಲ್ಲಿದೆ. ಬಾಟಲಿಗೆ ತುಂಬುವ ಮುನ್ನ, ಅದನ್ನು ಸಂಸ್ಕರಿಸಲಾಗುತ್ತದೆ. ದುಬಾರಿ ಬೆಲೆ ತೆತ್ತು ಅದನ್ನು ಖರೀದಿಸುವವರ ದೊಡ್ಡ ದಂಡೇ ಜಗತ್ತಿನಾದ್ಯಂತ ಹರಡಿಕೊಂಡಿದೆ. ಜಪಾನ್ ದೇಶವೊಂದರಲ್ಲೇ ದಿನಕ್ಕೆ 80,000 ಬಾಟಲ್‌ಗಳು ಖರ್ಚಾಗುತ್ತಿದ್ದವು ಎಂದರೆ, ಇದರ ಜನಪ್ರಿಯತೆಯನ್ನು ಊಹಿಸಬಹುದು.
* ಬೆಲೆ: 36,000 ರೂ.
ವೆಸ್ಪಾ ಸ್ಕೂಟರ್: ವೆಸ್ಪಾ ಸ್ಕೂಟರ್, ರೆಟ್ರೊ ಸ್ಟೈಲಿನ ಸಂಕೇತ. ಭಾರತದಲ್ಲಿ ಬಜಾಜ್ ಸ್ಕೂಟರ್‌ಗಳು ಜನಪ್ರಿಯತೆ ಗಳಿಸಿದ್ದ ಸಮಯದಲ್ಲೇ, ವೆಸ್ಪಾ ಸ್ಕೂಟರ್‌ಗಳೂ ದೊಡ್ಡ ಗ್ರಾಹಕ ವರ್ಗವನ್ನು ಹೊಂದಿದ್ದವು. ಮಧ್ಯಮ ವರ್ಗದ ಜನರ ಕಣ್ಮಣಿಯಾಗಿದ್ದ ವೆಸ್ಪಾ, 12 ಲಕ್ಷ ರೂ. ಬೆಲೆಯ ಸ್ಕೂಟರ್ ಅನ್ನೂ ತಯಾರಿಸಿದೆ! ಅದರ ಕಥೆ ಹೀಗೆ: ವೆಸ್ಪಾ ಸ್ಕೂಟರ್‌ಗಳ ನಿರ್ಮಾತೃಸಂಸ್ಥೆ, ಇಟಲಿಯ ಪಿಯಾಜಿಯೋ. ಅದು ತನ್ನ 70ನೇ ವರ್ಷದ ಸಂಭ್ರಮಾಚರಣೆಯ ವೇಳೆ, ಪ್ರಖ್ಯಾತ ಫ್ಯಾಷನ್ ಬ್ರ್ಯಾಂಡ್ ಆದ ಎಂಪೊರಿಯೊ ಅರ್ಮಾನಿ ಜೊತೆ ಕೈಜೋಡಿಸಿತು.
ಅವೆರಡೂ ಸಂಸ್ಥೆಗಳು ಸೇರಿ, ವೆಸ್ಪಾ946 ಎಂಬ ಸ್ಕೂಟರ್ ಅನ್ನು ನಿರ್ಮಿಸಿದವು. ಅದರ ಬೆಲೆಯೇ 12 ಲಕ್ಷ. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವಾಗಲಿ, ಸೂಪರ್ ಫಾಸ್ಟ್ ಎಂಜಿನ್ ಆಗಲಿ ಇಲ್ಲ. ಎಲ್ಲಾ ಸ್ಕೂಟರ್‌ಗಳಲ್ಲಿರುವ ತಾಂತ್ರಿಕ ಅಂಶಗಳೇ, ವೆಸ್ಪಾ946 ಸ್ಕೂಟರ್‌ನಲ್ಲೂ ಇರುವುದು. ಇದರ ರೆಟ್ರೊ ಶೈಲಿಯ ವಿನ್ಯಾಸವನ್ನು, ಜಗದ್ವಿಖ್ಯಾತ ವಿನ್ಯಾಸಕಾರರು ರೂಪಿಸಿದ್ದಾರೆ ಎಂಬುದಷ್ಟೇ ವಿಶೇಷ. ಜೊತೆಗೆ, ಸ್ಕೂಟರ್‌ನ ಬಾಡಿ ಮೇಲೆ ಅಲ್ಲಲ್ಲಿ, ಎಂಪೊರಿಯೊ ಅರ್ಮಾನಿಯ ಬ್ರ್ಯಾಂಡಿಂಗ್ ನೀಡಲಾಗಿದೆ. ಅಂದಹಾಗೆ, ವೆಸ್ಪಾ946 ಹೆಸರಿನಲ್ಲಿರುವ ಸಂಖ್ಯೆ, ಪಿಯಾಜಿಯೋ ಸಂಸ್ಥೆ ಸ್ಥಾಪನೆಯಾದ ಇಸವಿ 1946ಅನ್ನು ಸೂಚಿಸುತ್ತದೆ.
* ಬೆಲೆ: 12,00,000 ರೂ.