ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶ್ವಾನಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಪಂಚದ ಬೇರೆ ಬೇರೆ ತಳಿಗಳ ಶ್ವಾನಗಳನ್ನು ಖರೀದಿಸಿ ಸಾಕುವಂಥ ಟ್ರೆಂಡ್ ಕೂಡ ಶುರುವಾಗಿದೆ. ಬೆಂಗಳೂರಿನಲ್ಲೇ ಸೈಬೀರಿಯನ್ ಹಸ್ಕಿಯಿಂದ ಹಿಡಿದು ಟಿಬೆಟ್‌ನ ಶಿಹ್‌ಟ್ಜು ವರೆಗೆ ವಿವಿಧ ಬ್ರೀಡ್‌ನ ಶ್ವಾನಗಳನ್ನ ದುಬಾರಿ ಬೆಲೆಗೆ ಖರೀದಿಸಿರುವ ಶ್ವಾನ ಪ್ರೇಮಿಗಳೂ ಇದ್ದಾರೆ. ಅಂಥ ಶ್ವಾನಗಳ ಬೆಲೆ ಬರೀ ಸಾವಿರಗಳಲ್ಲಿ ಅಲ್ಲ, ಲಕ್ಷಗಳಲ್ಲೂ ಅಲ್ಲ, ಕೋಟಿಗಳವರೆಗೆ ತಲುಪಿದೆ ಎನ್ನುವುದೇ ಆಶ್ಚರ್ಯ!
ಹೌದು, ಬೆಂಗಳೂರಿನ ವ್ಯಕ್ತಿ ಯೊಬ್ಬರ ಬಳಿ ಇರುವ ಶ್ವಾನದ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 20 ಕೋಟಿ ರೂ. ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಸತೀಶ್ ಅವರು ಕಕಾಶಿಯನ್ ಶೆಫರ್ಡ್ ಎನ್ನುವ ತಳಿಯ ಶ್ವಾನವನ್ನು ಹೈದರಾಬಾದ್ ಉದ್ಯಮಿಯಿಂದ 20 ಕೋಟಿ ರೂ. ನೀಡಿ ಖರೀದಿಸಿದ್ದಾರೆ. ನೋಡೋದಕ್ಕೆ ಸಿಂಹದಂತೆ ಕಾಣುವ ಈ ದೈತ್ಯದೇಹಿ ಶ್ವಾನಕ್ಕೆ ಅವರು ಇಟ್ಟ ಹೆಸರು “ಕಾಡಬೋಮ್ಸ್ ಹೇಡರ್’. ಶ್ವಾನ ಪ್ರೇಮಿ ಸತೀಶ್ ಅವರು ಈ ಹಿಂದೆ ತಲಾ 1 ಕೋಟಿ ರೂ. ನೀಡಿ ಎರಡು ಕೊರಿಯನ್ ಮ್ಯಾಸ್ಟಿಫ್ ಎಂಬ ತಳಿಯ ಶ್ವಾನಗಳನ್ನು ಚೀನಾ ದಿಂದ ಖರೀದಿಸಿ, ವಿಮಾನದಲ್ಲಿ ತಂದಿದ್ದರು.
ಯಾವ ದೇಶದ್ದು ಗೊತ್ತಾ? : ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರದ ನಡುವಿನ ಪ್ರದೇಶವಾದ ಕಕೇಶಿಯಾ ಎಂಬ ಪ್ರಾಂತ್ಯದ ಬ್ರೀಡ್ ಶ್ವಾನ ಇದಾಗಿದ್ದು, ಅರ್ಮೇನಿಯಾ, ಜಾರ್ಜಿಯಾ ಹಾಗೂ ರಷ್ಯಾದ ಕೆಲ ಭಾಗದಲ್ಲೂ ಈ ಶ್ವಾನಗಳನ್ನ ಕಾಣಬಹುದು. ಆದರೆ, ಭಾರತದಲ್ಲಿ ಈ ಬ್ರಿàಡ್ ಅಪರೂಪ ವಾಗಿದ್ದು, ಸತೀಶ್ ಕೂಡ ಈ ಶ್ವಾನಕ್ಕಾಗಿ ಕಳೆದ 20 ವರ್ಷಗಳಿಂದ ಹುಡುಕಾಟ ನಡೆಸಿದ್ದಾರೆ. ವಿಶ್ವಾದ್ಯಂತ ಈ ಶ್ವಾನದ ಬ್ರಿàಡರ್‌ಗಳಿಗಾಗಿ ಹುಡುಕಾಟ ನಡೆಸಿದ್ದು, ಅಂತಿಮವಾಗಿ ಈ ಶ್ವಾನ ಸಿಕ್ಕಿದೆ. ತೀರಾ ಅಪರೂಪದ ತಳಿಯಾಗಿರುವ ಕಾರಣ ಇದನ್ನು ದುಬಾರಿ ಹಣ ನೀಡಿ ಖರೀದಿಸಿರುವುದಾಗಿ ಸತೀಶ್ ತಿಳಿಸಿದ್ದಾರೆ.
32ಕ್ಕೂ ಅಧಿಕ ಪದಕ ಗೆದ್ದಿರುವ ಶ್ವಾನ! : ಕಕಾಶಿಯನ್ ಶೆಫರ್ಡ್ ಒಂದು ಅಪರೂಪದ ತಳಿಯಾಗಿದ್ದು, ಬರೀ ಒಂದೂವರೆ ವರ್ಷದ ಈ ಶ್ವಾನದ ದೇಹತೂಕ ಬರೋಬ್ಬರಿ 100 ಕೆ.ಜಿ. ಇದರ ತಲೆಯೇ 38 ಇಂಚುಗಳಷ್ಟಿದ್ದು, ಭುಜದ ಅಳತೆ 34 ಇಂಚುಗಳಷ್ಟು ಉದ್ದವಿದೆ. ಕಾಲುಗಳು 2 ಲೀಟರ್ ಪೆಪ್ಸಿ ಬಾಟಲ್‌ನಷ್ಟು ಉದ್ದವಾಗಿದ್ದು, ಕಾಡಬೋಮ್ಸ್ ಹೇಡರ್ ಈವರೆಗೆ ವಿವಿಧ ಶ್ವಾನ ಸ್ಪರ್ಧೆಗಳಲ್ಲಿ ಭಾಗವಹಿಸಿ, 32ಕ್ಕೂ ಅಧಿಕ ಪದಕಗಳನ್ನು ಗೆದ್ದಿದೆ.
ಪ್ರೊಟೆಕ್ಟಿವ್ ನೇಚರ್: ಕಕಾಶಿಯನ್ ಶೆಫರ್ಡ್ ತಳಿಗಳು ಗಾರ್ಡಿಯನ್ ಶ್ವಾನಗಳಾಗಿದ್ದು, ಮಾಲೀಕರ ರಕ್ಷಣೆ, ಜಾನುವಾರುಗಳ ರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಸ್ವಭಾವ ಹೊಂದಿರುತ್ತವೆ ಎನ್ನಲಾಗಿದೆ.