ಆಲಮಟ್ಟಿ: ಒಂದೆಡೆ ಕೊರೊನಾ, ಇನ್ನೊಂದು ಅತಿವೃಷ್ಟಿ ಹೊಡೆತದಿಂದ ಪೂಜಾ ಸಾಮಗ್ರಿಗಳ ದರ ಗಗನಕ್ಕೇರಿದ್ದು ದೀಪಾವಳಿ ಹಬ್ಬ ಈ ಬಾರಿ ಬಡ ಹಾಗೂ ಮಧ್ಯಮ ವರ್ಗದವರಿಗೆ ದುಬಾರಿಯಾಗಿದೆ.
ರಾಜ್ಯದಲ್ಲಿ ಕೋವಿಡ್ ಮಹಾಮಾರಿಯಿಂದ ರೈತರು ಹೂವು, ಹಣ್ಣು ಬೆಳೆಯಲು ಹಾಗೂ ಅವುಗಳ ಕಟಾವಿಗೆ ಕೂಲಿ ಕಾರ್ಮಿಕರು ಸಿಗದೇ ಇರುವುದರಿಂದ ಬೆಳೆ ತೋಟದಲ್ಲಿಯೇ ಉಳಿಯುವಂತಾಗಿದೆ. ಇನ್ನೊಂದೆಡೆ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ದಲ್ಲಾಳಿಗಳು ಕಡಿಮೆ ದರದಲ್ಲಿ ಮಾರ್ಗ ಮಧ್ಯದಲ್ಲಿಯೇ ಖರೀದಿಸುತ್ತಿರುವುದರಿಂದ ರೈತರಿಗೆ ಮಾರುಕಟ್ಟೆಯ ದರ ತಿಳಿಯದಂತಾಗಿದೆ.
ಅತಿವೃಷ್ಟಿ ಪರಿಣಾಮದಿಂದ ಹೂವಿನ ಬೆಳೆ ಕುಂಠಿತವಾಗಿರುವುದಲ್ಲದೇ ಕೀಟ ಬಾಧೆಯಿಂದ ರೈತರು ತೊಂದರೆಗೀಡಾಗಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಚೆಂಡು ಹೂವಿನ ಪ್ರತಿ ಕಿಗ್ರಾಂಗೆ 300ರಿಂದ 400ರೂ., ಇನ್ನು ಸೇವಂತಿಗೆ ಹೂವು ಪ್ರತಿ ಕಿಗ್ರಾಂಗೆ 250 ರೂ.ಗಳಿಂದ 300 ರೂ.ಗಳವರೆಗೆ, ಬಾಳೆಹಣ್ಣು ಡಜನಗೆ 35ರಿಂದ 40ರೂ, ಸೇಬು ಹಣ್ಣು 50 ರೂ.ಗಳಿಗೆ 3 ಹಣ್ಣು, 15 ರೂ.ಗೆ 1 ಮೋಸಂಬಿ. ಹೀಗೆ ದರ ಇರುವುದರಿಂದ ಸಂಪ್ರದಾಯದಂತೆಪೂಜೆ ಮಾಡುವುದಾದರೂ ಹೇಗೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಬಾರದ ಹೂ ಹಣ್ಣು: ಪ್ರತಿ ವರ್ಷವೂ ಆಲಮಟ್ಟಿಯ ಸಂತೆ ಆವರಣ, ರಾಮಲಿಂಗೇಶ್ವರ ವೃತ್ತ ಹಾಗೂ ರಾಷ್ಟ್ರೀಯ ಹೆದ್ದಾರಿ ಬಳಿ ನೂರಾರು ವಾಹನಗಳಲ್ಲಿ ಹಾಗೂ ಎರಡೂ ರಸ್ತೆಯ ಬದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಹೂವು, ಬಾಳೆಗಿಡ, ಹಣ್ಣು, ಸೇಬು, ಪೇರಲ, ದಾಳಿಂಬೆ, ಚಿಕ್ಕು, ಸೀತಾಫಲ, ಚೆಂಡು ಹೂವು, ಸೇವಂತಿಗೆ ಸೇರಿದಂತೆ ವಿವಿಧ ಬಗೆಯ ಹೂವು, ಹಣ್ಣುಗಳ ಮಾರುಕಟ್ಟೆಯೇ ನಿರ್ಮಾಣವಾಗುತ್ತಿತ್ತು.
ಆದರೆ ಈ ಬಾರಿ ಬೆರಳೆಣಿಕೆ ರೈತರು ಹಾಗೂ ಮಾರಾಟಗಾರರು ಆಲಮಟ್ಟಿಗೆ ಆಗಮಿಸಿದ್ದರಿಂದ ಪೂಜಾ ಸಾಮಗ್ರಿಗಳ ದರದಲ್ಲಿ ವ್ಯಾಪಕವಾಗಿ ಏರಿಕೆಯಾಗಿರುವದರಿಂದ ಬಡವ, ಮಧ್ಯಮ,ಶ್ರೀಮಂತರೆನ್ನದೇ ಎಲ್ಲರೂ ದೀಪಾವಳಿ ಹಬ್ಬವನ್ನು ದುಬಾರಿಯಾಗಿ ಆಚರಿಸುವಂತಾಗಿದೆ.
ಪ್ರತಿ ಸಲ ನಮ್ಮ ಅಂಗಡಿಗಳಿಗೆ ಹಾಗೂ ಮನೆಗಳಲ್ಲಿ ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಮಾಡುತ್ತಿದ್ದೇವು.ಆದರೆ ಈ ಬಾರಿ ಹೂವು, ಹಣ್ಣು ಹೆಚ್ಚಿಗೆ ಬರದಿರುವದರಿಂದ ಸರಳವಾಗಿ ಆಚರಣೆ ಮಾಡುವಂತಾಗಿದೆ. ಶಾಂತಾಬಾಯಿ ಚವ್ಹಾಣ
–ಶಂಕರ ಜಲ್ಲಿ