Advertisement

ಕೇಂದ್ರ ಬಜೆಟ್ ನ ಟಾಪ್ 10 ನಿರೀಕ್ಷೆಗಳು

06:17 AM Jan 31, 2019 | |

ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಸರಕಾರ ಮಧ್ಯಾಂತರ ಬಜೆಟ್‌ ಮಂಡನೆಗೆ ಸಿದ್ಧವಾಗುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಈ ಬಾರಿ ಜನಪ್ರಿಯ ಯೋಜನೆಗಳಿಗೆ  ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಮವರ್ಗ ಹಾಗೂ  ಸರಕಾರಿ ಉದ್ಯೋಗಿಗಳನ್ನೇ  ದೃಷ್ಟಿಯಲ್ಲಿಟ್ಟುಕೊಂಡು 
ಹಲವು ಕಾರ್ಯಕ್ರಮಗಳನ್ನು ಮತ್ತು ಸುಧಾರಣೆಗಳನ್ನು  ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ವ್ಯಕ್ತವಾಗಿದೆ.  
ಅಂತಹ ಪ್ರಮುಖ ನಿರೀಕ್ಷೆಗಳ ಪಟ್ಟಿ ಇಲ್ಲಿವೆ. 

Advertisement

1.ಚುನಾವಣಾ ಅನಿವಾರ್ಯತೆಗಳಿಂದಾಗಿ ಮೋದಿ ಸರಕಾರ ದೊಡ್ಡ ಕಂಪೆನಿಗಳಿಗೆ ತೆರಿಗೆ ಕಡಿತದಂಥ ಪ್ರಮುಖ ವಿತ್ತ ಸುಧಾರಣೆಗಳಿಗೆ ಕೈಯಿಕ್ಕದೆ ಕೃಷಿ ಪರಿಹಾರ ಕ್ರಮಗಳು ಹಾಗೂ ತೆರಿಗೆ ಕಡಿತಗಳ ಮೂಲಕ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಮಧ್ಯಮ ವರ್ಗದವರನ್ನು ಓಲೈಸಲು ಯತ್ನಿಸಬಹುದು.

2. ಸರಕಾರಿ ನೌಕರರು ಏಳನೇ ವೇತನ ಆಯೋಗದ ಶಿಫಾರಸುಗಳಿಗಿಂತ ಹೆಚ್ಚಿಗೆ ವೇತನ ಏರಿಕೆಗಾಗಿ ಆಗ್ರಹಿಸುತ್ತಿದ್ದು ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆ ಇದೆ. ಕೇಂದ್ರ ನೌಕರರು ಕನಿಷ್ಠ ವೇತನ ಶ್ರೇಣಿಯನ್ನು 18,000 ರೂ.ಗಳಿಂದ 26,000 ರೂ.ಗಳಿಗೆ ಹಾಗೂ ಫಿಟ್‌ಮೆಂಟ್‌ ಅಂಶವನ್ನು 2.57ರಿಂದ 3.68ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

3. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.50 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವ ನಿರೀಕ್ಷೆಯಿದೆ. ಅಂತೆಯೇ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗಳಿಂದ 3.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವ ಸಂಭವವಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂದು ಭಾರತೀಯ ಉದ್ದಿಮೆಗಳ ಮಹಾಒಕ್ಕೂಟ(ಸಿಐಐ) ಸರಕಾರಕ್ಕೆ ಮನವಿ ಸಲ್ಲಿಸಿದೆ.

4. ರೈತರು ಹಾಗೂ ಸಣ್ಣ ಉದ್ದಿಮೆದಾರರ ಸಮಸ್ಯೆ ನಿವಾರಣೆಗೆ ಹೊಸ ನೆರವು ಘೋಷಿಸುವ ನಿರೀಕ್ಷೆ ಇದೆ. ರೈತರ ಆದಾಯ ಸುಧಾರಣೆಗೆ ಮಾರುಕಟ್ಟೆ ಬೆಲೆ ಮತ್ತು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ನಡುವಣ ವ್ಯತ್ಯಸ್ಥ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾಯಿಸುವ ಅಥವಾ ರೈತರಿಗೆ ಸಾಮಾನ್ಯ ಮೂಲ ಆದಾಯ ಕಾರ್ಯಕ್ರಮ ಘೋಷಿಸುವ ಸಾಧ್ಯತೆ ಇದೆ.

Advertisement

5. ಸೆಕ್ಷನ್‌ 80 ಸಿಯಡಿ ಮಿತಿ ಹೆಚ್ಚಳ: ಸೆಕ್ಷನ್‌ 80ಸಿಯಡಿ ಕಳೆದ ಬಾರಿ 2014-15ರಲ್ಲಿ ಆದಾಯ ತೆರಿಗೆ ವಿನಾಯಿತಿಗೆ ಹೂಡಿಕೆ ಮಿತಿಯನ್ನು 1 ಲಕ್ಷ ರೂ.ಗಳಿಂದ 1.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ಮಿತಿಯನ್ನು 1.50 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಏರಿಸಲಾಗುವ ವ್ಯಾಪಕ ನಿರೀಕ್ಷೆ ಹೊಂದಲಾಗಿದೆ.

6. ಸ್ವಂತ ಮನೆ ಹೊಂದುವುದು ಮಧ್ಯಮ ವರ್ಗದ ಪ್ರತಿ ಕುಟುಂಬದ ಕನಸಾಗಿದೆ. ಇದನ್ನು ಗಮನದಲ್ಲಿಟ್ಟು ಮೋದಿ ಸರಕಾರ ಗೃಹ ಕ್ಷೇತ್ರವನ್ನು ಉತ್ತೇಜಿಸುವ ಕ್ರಮಗಳನ್ನು ಘೋಷಿಸಬಹುದು. ಗೃಹ ಸಾಲಗಳ ಬಡ್ಡಿ ಪಾವತಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂ,ಗಳಿಂದ 2.5ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವ ನಿರೀಕ್ಷೆಯಿದೆ.

7. ಪುಣೆ, ಬೆಂಗಳೂರು, ಹೈದರಾಬಾದ್‌ ಮತ್ತು ಗುರ್ಗಾಂವ್‌ನಂಥ ದ್ವಿತೀಯ ಸ್ತರದ ನಗರಗಳಲ್ಲಿ ಮನೆ ಬಾಡಿಗೆ ಭತ್ತೆ (ಎಚ್‌ಆರ್‌ಎ) ಮಿತಿಯನ್ನು ಮೆಟ್ರೋ ನಗರಗಳ ಮಟ್ಟಕ್ಕೆ ಹೆಚ್ಚಿಸಲಾಗುವ ನಿರೀಕ್ಷೆಯಿದೆ. ಮುಂಬಯಿ, ದಿಲ್ಲಿ, 
ಕೋಲ್ಕತ ಮತ್ತು ಚೆನ್ನೈ ಮೆಟ್ರೋ ನಗರಗಳಲ್ಲಿ ಎಚ್‌ಆರ್‌ಎಯಡಿ ಶೇ. 50 ವೇತನ ಪರಿಗಣನೆಗೆ ಅವಕಾಶವಿದೆ.

8. ಪಾಲುದಾರಿಕೆ ಉದ್ಯಮ ಮತ್ತು ಎಲ್‌ಎಲ್‌ಪಿಗಳಿಗೆ ಕಾರ್ಪೊರೇಟ್‌ ತೆರಿಗೆ ಪ್ರಮಾಣವನ್ನು ಶೇ. 30ರಿಂದ ಶೇ. 25ಕ್ಕೆ ಇಳಿಸಲಾಗುವ ಸಾಧ್ಯತೆಯಿದೆ. ವಿತ್ತ ಸಚಿವ ಅರುಣ್‌ ಜೇಟ್ಲೀ ಅವರು 2015ರ ಬಜೆಟ್‌ ಮಂಡನೆ ವೇಳೆ ತಾನು ಕಾರ್ಪೊರೇಟ್‌ ತೆರಿಗೆಯನ್ನು ಮುಂದಿನ ವರ್ಷಗಳಲ್ಲಿ ಶೇ. 30ರಿಂದ ಶೇ. 25ಕ್ಕೆ ಇಳಿಸುವುದಾಗಿ ಆಶ್ವಾಸನೆ ನೀಡಿದ್ದರು.

9. ರಸ್ತೆ, ರೈಲು ಸೌಲಭ್ಯ ಕ್ಷೇತ್ರಗಳಿಗೆ ಮೋದಿ ಸರಕಾರ ಪ್ರಸಕ್ತ ಬಜೆಟ್‌ನಲ್ಲಿ ವಿಂಗಡನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಚುನಾವಣಾ ಬಜೆಟ್‌ ಆಗಿರುವುದರಿಂದ ರೈಲು ಪ್ರಯಾಣಿಕರಿಗೆ ಕೆಲ ವಿನಾಯಿತಿಗಳನ್ನು ಘೋಷಿಸಿದರೂ ಅಚ್ಚರಿಯಿಲ್ಲ. ಆದರೆ ಹಿಂದಿನ ವರ್ಷಗಳಂತೆ ಹೊಸ ರೈಲು ಯೋಜನೆಗಳನ್ನು ಘೋಷಿಸಲಾಗುವ ಸಾಧ್ಯತೆ ಇಲ್ಲ.

10.ಕಳೆದ ತಿಂಗಳು ಪ್ರಕಟಿಸಲಾದ ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆ ನಿಯಮ ಬಜೆಟ್‌ ಮಂಡನೆ ಬಳಿಕ ಜಾರಿಗೆ ಬರಲಿವೆ. ನೌಕರರಿಗೆ ಸರಕಾರದ ಎನ್‌ಪಿಎಸ್‌ ಪಾಲಿನಲ್ಲಿ ಶೇ.4 ಹೆಚ್ಚಳವಾಗಿದೆ. ಎನ್‌ಪಿಎಸ್‌ ಹಿಂದೆಗೆತವನ್ನು ಶೇ. 60ರ ತನಕ ತೆರಿಗೆಮುಕ್ತವನ್ನಾಗಿಸಲಾಗುವುದು. ಉಳಿದ ಹಣವನ್ನು ಪಿಂಚಣಿ ನಿಧಿಯಲ್ಲಿ ಹೂಡ‌ಬೇಕಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next