Advertisement

ಜಿಲ್ಲೆಯಲ್ಲಿ ಗೇರು ಕೃಷಿ ಖುಷಿ ತರುವ ನಿರೀಕ್ಷೆ

10:38 PM May 14, 2020 | Sriram |

ಉಡುಪಿ: ಯಾವ ಕೃಷಿ ಮಾಡಬೇಕೆಂಬ ಚಿಂತೆಯಲ್ಲಿರುವ ಕೃಷಿಕರು ಗೇರು ಬೆಳೆದು ಸೈ ಎನಿಸಿಕೊಳ್ಳಬಹುದು. ಉಡುಪಿ ಜಿಲ್ಲೆಯ ತೋಟಗಾರಿಕೆ ಇಲಾಖೆಯ 8 ಸಸ್ಯ ಕ್ಷೇತ್ರಗಳಲ್ಲಿ 70,000 ಕಸಿ ಗೇರು ಸಸಿಗಳು ಮಾರಾಟಕ್ಕೆ ಲಭ್ಯವಿವೆ.

Advertisement

ಉಡುಪಿ. ಕಾರ್ಕಳ, ಕುಂದಾಪುರ ತಾಲೂಕುಗಳ ಗೇರು ಸಸ್ಯ ಸಂರಕ್ಷಣಾ ಕೇಂದ್ರಗಳಲ್ಲಿ ಗೇರು ಬೆಳೆಯನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 17,386 ಹೆಕ್ಟೇರ್‌ ವಿಸ್ತೀರ್ಣದಲ್ಲಿ 34,772 ಮೆಟ್ರಿಕ್‌ ಟನ್‌ ಗೇರು ಉತ್ಪಾದನೆಯಾಗುತ್ತಿದೆ. ಗೇರುಬೀಜ ಬೆಳೆ ಬೆಳೆಯುವ ಕೃಷಿಕರಿಗೆ ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ಸಸಿಗಳನ್ನು ಕೃಷಿಕರು ಪಡೆದುಕೊಳ್ಳಬಹುದಾಗಿದೆ.

ಉಡುಪಿ ತಾ|ನ ಶಿವಳ್ಳಿ ತೋಟಗಾರಿಕೆ ಕ್ಷೇತ್ರ, ಬ್ರಹ್ಮಾವರ ತಾ|ನ ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರ, ಕುಂದಾಪುರ ತಾ|ನ ಕೆದೂರು ತೋಟಗಾರಿಕಾ ಕ್ಷೇತ್ರ, ಕುಂಭಾಶಿ ತೋಟಗಾರಿಕಾ ಕ್ಷೇತ್ರ, ಸಸ್ಯಸಾಗರ ಕೇಂದ್ರ, ಕಾರ್ಕಳ ತಾ|ನ ರಾಮಸಮುದ್ರ ತೋಟಗಾರಿಕಾ ಕ್ಷೇತ್ರ, ಕುಕ್ಕುಂದೂರು ತೋಟಗಾರಿಕಾ ಕ್ಷೇತ್ರ, ಸಸ್ಯ ಸಾಗರ ಕಚೇರಿಗಳ ಸಸ್ಯ ಕೇಂದ್ರಗಳಲ್ಲಿ 70, 000ಸಸಿಗಳು ಕೃಷಿಕರಿಗೆ ವಿತರಣೆಗೆ ಲಭ್ಯವಿವೆ.

ತೋಟ ವಿಸ್ತರಣೆಗೆ
ಸಹಾಯಧನ
ತೋಟಗಾರಿಕಾ ಇಲಾಖೆ ಮೂಲಕ ಗೇರುತೋಟ ವಿಸ್ತರಣೆಗೆ ಸಹಾಯ ಧನವನ್ನು ನೀಡಲಾಗುತ್ತಿದೆ. ಒಂದು ಹೆಕ್ಟೇರ್‌ (2.5 ಎಕ್ರೆ) ಪ್ರದೇಶದಲ್ಲಿ 277 ಗೇರು ಸಸಿಗಳನ್ನು ನೆಟ್ಟರೆ ಇದಕ್ಕೆ 57,640 ರೂ. ಖರ್ಚು ತಗಲುತ್ತದೆ. ಸಾಮಾನ್ಯ ವರ್ಗದವರಾದರೆ ಇದರ ಶೇ.50 ಸಹಾಯಧನ (28,820 ರೂ.), ಪರಿಶಿಷ್ಟರಿಗಾದರೆ ಶೇ.90 (51,878 ರೂ.) ಸಹಾಯಧನವನ್ನು ಈ ಹಿಂದಿನ ವರ್ಷಗಳಲ್ಲಿ ನೀಡುತ್ತ ಬರಲಾಗಿತ್ತು. 2020-21 ಸಾಲಿನಲ್ಲಿ ಸಹಾಯಧನ ಬಗ್ಗೆ ಇನ್ನು ಯಾವುದೇ ಘೋಷಣೆಯಾಗಿಲ್ಲ.

ಉದ್ಯೋಗ ಖಾತರಿ ಸದ್ಬಳಕೆ
ತೋಟಗಾರಿಕೆ ಇಲಾಖೆ ಹನಿ ನೀರಾವರಿ ಘಟಕ ಸ್ಥಾಪನೆಗೂ ಸಹಾಯಧನ ನೀಡಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಾದರೆ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಖರ್ಚನ್ನು ಭರಿಸುವ ಅವಕಾಶವಿರುವುದರಿಂದ ಸಂಪೂರ್ಣ ಉಚಿತವಾಗಿ ಗೇರು ತೋಟವನ್ನು ಅಭಿವೃದ್ಧಿಪಡಿಸಬಹುದು.

Advertisement

ಗೇರು ಅಭಿವೃದ್ಧಿಗೆ ಒತ್ತು
ದ.ಕ., ಉಡುಪಿ, ಉ.ಕ., ಶಿವಮೊಗ್ಗ ಈ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ 26,000 ಹೆ. ಭೂಪ್ರದೇಶವನ್ನು ಹೊಂದಿದ್ದು ಗೇರು ಅಭಿವೃದ್ಧಿಗೆ ಒತ್ತು ನೀಡುತ್ತಿದೆ.

ಸಂಪರ್ಕ ಸಂಖ್ಯೆ
ತೋಟಗಾರಿಕೆ ಉಪನಿರ್ದೇಶಕರು (ಜಿಲ್ಲಾ ಪಂಚಾಯತ್‌ ಉಡುಪಿ) 0820-2531950, ಮಾಹಿತಿ ಮತ್ತು ಸಲಹಾ ಕೇಂದ್ರ ಉಡುಪಿ: 0820-2520590, ಹಿ.ಸ. ತೋಟಗಾರಿಕೆ ನಿರ್ದೇಶಕರು ಉಡುಪಿ ತಾ|: 0820-2522837, ಹಿ.ಸ. ತೋಟಗಾರಿಕೆ ನಿರ್ದೇಶಕರು ಕುಂದಾಪುರ: 08254-230813, ಹಿ.ಸ. ತೋಟಗಾರಿಕೆ ನಿರ್ದೇಶಕರು ಕಾರ್ಕಳ: 08258-230288

ಕೇಂದ್ರ ಕೃಷಿ ಸಚಿವಾಲಯ ಒತ್ತು
ದೇಶದಲ್ಲಿ 11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗೇರು ತೋಟವಿದ್ದು 8 ಲಕ್ಷ ಟನ್‌ ಗೇರುಬೀಜ ಉತ್ಪಾದನೆಯಾಗುತ್ತಿದೆ. 4,000 ಗೇರು ಬೀಜ ಉತ್ಪಾದನೆಯ ಕೈಗಾರಿಕಾ ಘಟಕಗಳಿಗೆ 17 ಲಕ್ಷ ಟನ್‌ ಸರಾಸರಿ ಗೇರುಬೀಜದ ಅಗತ್ಯವಿರುತ್ತದೆ. ಉತ್ಪಾದನೆ ಕೊರತೆಯಿಂದ ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳಿಂದಲೂ ಆಮದು ಮಾಡಿಕೊಳ್ಳಲಾಗುತ್ತಿದೆ. ಹೆಚ್ಚು ಖರ್ಚು ಆಗುವುದನ್ನು ತಡೆಯಲು ಕೇಂದ್ರ ಕೃಷಿ ಸಚಿವಾಲಯ ಕಳೆದ ವರ್ಷ 1.2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಗೇರು ತೋಟವನ್ನು ವಿಸ್ತರಿಸಲು ಯೋಜನೆಯನ್ನು ಹಾಕಿಕೊಂಡಿತ್ತು.

ಗೇರು ಸಸಿಗಳು ಲಭ್ಯವಿವೆ
ಗೇರುಬೀಜ ಕೃಷಿ ನಡೆಸುವ ಕೃಷಿಕರಿಗೆ ವಿತರಿಸಲು ನಮ್ಮಲ್ಲಿ ಗೇರು ಸಸಿಗಳು ಲಭ್ಯವಿದೆ. ಗೇರುಬೀಜ ಕೃಷಿಕರು ಇದರ ಸದುಪಯೋಗಪಡಿಸಿಕೊಳ್ಳಲು ಅವಕಾಶವಿದೆ. ಹತ್ತಿರದ ಸಸ್ಯ ಕ್ಷೇತ್ರಗಳಿಂದ ಸಸಿಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಯನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.
-ಭುವನೇಶ್ವರಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next