Advertisement

48 ಗಂಟೆಗಳಲ್ಲಿ ಭಾರೀ ಮಳೆ ನಿರೀಕ್ಷೆ

06:50 AM Sep 21, 2018 | Team Udayavani |

ಬೆಂಗಳೂರು: ಬಂಗಾಳಕೊಲ್ಲಿಯ ಪಶ್ಚಿಮ ಮಧ್ಯಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಕಂಡು ಬಂದಿದ್ದು, ಇದು
ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಪರಿಣಾಮ ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ
ಭಾರೀ ಮಳೆಯಾಗುವ ನಿರೀಕ್ಷೆ ಇದೆ.

Advertisement

ದಕ್ಷಿಣ ಒಡಿಶಾ ಮತ್ತು ಉತ್ತರ ಆಂಧ್ರ ಪ್ರದೇಶ ನಡುವೆ ತೀವ್ರ ವಾಯುಭಾರ ಕುಸಿತ ಉಂಟಾಗಿದೆ. ಕಲಿಂಗಪಟ್ಟಣಂ ನಿಂದ ಸುಮಾರು 250 ಕಿ.ಮೀ.ದೂರದಲ್ಲಿ ಗಂಟೆಗೆ 12 ಕಿ.ಮೀ.ವೇಗದಲ್ಲಿ ಇದು ಚಲಿಸುತ್ತಿದೆ. ಚಂಡಮಾರುತವಾಗಿ
ಪರಿವರ್ತನೆಯಾಗುವ ಸಾಧ್ಯತೆ ಇರುವುದರಿಂದ ವೇಗದ ಗತಿ ಹೆಚ್ಚಲಿದೆ.

ಇದು ರಾಜ್ಯದ ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಭಾರೀ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಈ ಮಳೆಯ ಅಬ್ಬರ ಕಡಿಮೆ ಇದ್ದು, ಹಗುರವಾದ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌. ಪಾಟೀಲ “ಉದಯವಾಣಿ’ಗೆ ತಿಳಿಸಿದರು.

ಈ ಮಧ್ಯೆ, ಗುರುವಾರ ಹುಬ್ಬಳ್ಳಿ, ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ
ಮಳೆಯಾಯಿತು. ಹಾವೇರಿಯಲ್ಲಿ 161.3 ಮತ್ತು ದಾವಣಗೆರೆಯಲ್ಲಿ 138 ಮಿ.ಮೀ.ಮಳೆ ದಾಖಲಾಗಿದೆ. ಉಳಿದಂತೆ ತುಮಕೂರಿನಲ್ಲಿ 46, ಮೈಸೂರು 32, ಗದಗ 39.5, ಬೆಳಗಾವಿ 41, ಶಿವಮೊಗ್ಗ 91.5, ಬಳ್ಳಾರಿ 56, ಬೆಂಗಳೂರು ನಗರ 33, ಕೊಪ್ಪಳ 50.8, ರಾಯಚೂರು 19, ಧಾರವಾಡ 40 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next