ಮಾಗಡಿ: ಮಾಗಡಿಯ ಸುತ್ತಮುತ್ತಲು ಎಲ್ಲೆಲ್ಲೂ ಮೈದುಂಬಿದ ಹೂವು ಗೊಂಚಲು ಸುವಾಸನೆ ಬೀರುತ್ತಿವೆ. ತಾಲೂಕಿನಲ್ಲಿ ಸುಮಾರು 7,420 ಹೆಕ್ಟರ್‌ನಲ್ಲಿ ರೈತರು ಮಾವು ಬೆಳೆದಿದ್ದು, ಮಾವಿನ ಮರಗಳು ಹೂವಿನಿಂದ ಮೈದುಂಬಿ ತೂಗುತ್ತಿವೆ.
ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತರಿದ್ದಾರೆ. ಮಲಗೋಪ, ರಸಪೂರಿ, ಸೇಂದೂರ, ಬಾದಾಮಿ, ರಾಮಗೋಲ್ಟ್ ಸೇರಿದಂತೆ ವಿವಿಧ ತಳಿಗಳನ್ನು ರೈತರು ಬೆಳೆದಿದ್ದಾರೆ. ರಸಭರಿತ ಮಾವು ಬೆಳೆಗೆ ಹೇಳಿ ಮಾಡಿಸಿದ ಭೂಮಿ. ಕಡಿಮೆ ನೀರಿದ್ದರೂ ಸಹ ಮಾವಿನ ಗಿಡಬೆಳೆಸಲು ಉತ್ತಮ ಭೂಮಿಯಾಗಿದೆ.
ಹಣ್ಣುಗಳ ರಾಜ ಮಾವು, ಈ ಬಾರಿ ಮಾವು ಬೆಳೆಗಾರರ ಪಾಲಿಗಂತೂ ಬದುಕು ಬಂಗಾರವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನಬಹುದು. ಕಳೆದ ವರ್ಷಕ್ಕಿಂತ ಈ ವರ್ಷ ಮಾವು ಬೆಳೆ ಚೆನ್ನಾಗಿ ಬಂದಿದೆ. ಮಳೆ ಕೊರತೆಯ ನಡುವೆಯೂ ಇಷ್ಟೊಂದು ಹೂ ಬಿಟ್ಟಿರುವುದು ನಿಜಕ್ಕೂ ರೈತರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಈಗ ಮಾವು ಹೂಬಿಡುವ ಕಾಲ, ರೈತರ ತೋಟಗಳ ಕಡೆ ಕಣ್ಣಾಯಿಸಿದರೆ ಸಾಕು. ಮಾವಿನ ಗಿಡಗಳು ಮೈದುಂಬಿ ಹೂವು ಬಿಟ್ಟಿದ್ದು, ಹೂವಿನ ವಾಸನೆ ಗಮಗಮಿಸುತ್ತದೆ.
ರೋಗಬಾಧೆ ಭೀತಿ: ಹಿಂಗಾರು ಮಳೆ ಬಿದ್ದ ಪರಿಣಾಮ ಹೂವು ಹೆಚ್ಚು ಬಿಟ್ಟಿದೆ. ಆದರೆ, ರೋಗದ ಬಾಧೆ ಇಲ್ಲದಿದ್ದರೆ ಮಾವು ತಮ್ಮ ಬದುಕಿಗೆ ನೆರವಾಗುತ್ತದೆ ಎಂದು ರೈತರು ನಂಬಿಕೊಂಡಿದ್ದಾರೆ. ಮಾವಿನ ಮರ ಹೂವಿನಿಂದ ಮೈದುಂಬಿ ಕಂಗೊಳಿಸುತ್ತಿದೆ. ಆದರೆ, ರೋಗಬಾಧೆಯ ಭೀತಿಯಲ್ಲಿ ರೈತರಿದ್ದಾರೆ. ಈಗಾಗಲೇ ಬಹುತೇಕ ಮಾವಿನ ಮರಗಳಲ್ಲಿ ಹೂಗಳು ಮೋಡದ ಕದ ವಾತಾವರಣಕ್ಕೆ ಬೂದು ಬಣ್ಣಕ್ಕೆ ತಿರುಗುತ್ತಿದೆ. ಕೆಲ ಮರಗಳಲ್ಲಿ ಹೂವುಗಳು ಒಣಗುತ್ತಿವೆ.
ರೈತರಿಗೆ ಅಗತ್ಯ ಮಾರ್ಗದರ್ಶ: ಮಾವು ಬೆಳೆಗಾರರ ಗ ತೋಟಗಳಿಗೆ ತೋಟಗಾರಿಕಾ ಅಧಿಕಾರಿಗಳು ಮತ್ತು ಸಂಬಂಧಪಟ್ಟ ವಿಜ್ಞಾನಿಗಳು ಭೇಟಿ ಕೊಟ್ಟು, ಮಾವಿನ ಗಿಡ, ಹೂವು, ಹಣ್ಣುಗಳ ರಕ್ಷಣೆ, ರೋಗಬಾಧೆ ತಡೆಗೆ ಸೂಕ್ತ ಔಷಧ ತರಣೆ, ಕಾಲಕಾಲಕ್ಕೆ ಸಿಂಪಡಣೆ ಮಾಡಿಸುವುದು, ತಾಂತ್ರಿಕವಾದ ಬೇಸಾಯ ಪದ್ಧತಿ ಹೀಗೆ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ.
ತಾಲೂಕಿನಲ್ಲಿ 7,400 ಹೆಕ್ಟರ್‌ನಲ್ಲಿ ರೈತರು ಮಾವಿನಗಿಡ ನೆಟ್ಟಿದ್ದಾರೆ. ರೈತರ ಮಾವಿನ ತೋಟಗಳಿಗೆ ಕೆವಿಕೆ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ಮಾವು ಬೆಳೆಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಆಗತ್ಯ ಔಷಧಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.
– ನಾಗರಾಜು, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಕಳೆದ ಬಾರಿಗಿಂತ ಈ ಬಾರಿ ಮಾವಿನ ಮರಗಳು ಭರ್ಜರಿ ಹೂವು ಬಿಟ್ಟಿವೆ. ಭರ್ಜರಿ ಬೆಳೆ ಕಾಣಬಹುದು. ಕಳೆದ ಬಾರಿ ರೋಗಬಾಧೆಯಿಂದ ತುಂಬಾ ನಷ್ಟ ಅನುಭವಿಸಿದ್ದೆವು. ರೋಗಬಾಧೆ, ಅಕಾಲಿಕ ಮಳೆ ಬೀಳದಿದ್ದರೆ ಮಾವು ಬೆಳೆಯಲ್ಲಿ ಉತ್ತಮ ಲಾಭಗಳಿಸ ಬಹುದು ಎಂದು ನಿರೀಕ್ಷೆಯಲ್ಲಿದ್ದೇವೆ.
– ಎಸ್.ವಿ.ರಾಜಣ್ಣ, ಮಾವು ಬೆಳೆಗಾರ