Advertisement
ಹವಾಮಾನ ಇಲಾಖೆಯು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿಯಲ್ಲಿ ಬುಧವಾರ ಉತ್ತಮ ಮಳೆಯಾಗಿತ್ತು. ಮಂಗಳೂರು ನಗರದಲ್ಲಿ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದ್ದು, ಸಂಜೆ, ರಾತ್ರಿ ವೇಳೆಗೆ ಮಳೆ ಬಿರುಸು ಪಡೆದಿತ್ತು. ಪುತ್ತೂರು, ಬಂಟ್ವಾಳ, ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಯಾಗಿದೆ. ಗೋವಾ ಗಡಿ ಸಮೀಪ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಸುವರ್ಣ ಜ್ಯೋತಿ ಬೋಟಿನಿಂದ ಸಮುದ್ರಕ್ಕೆ ಧುಮುಕಿ ಕಣ್ಮರೆ ಯಾಗಿರುವ ಒಡಿಶಾದ ಮೀನುಗಾರ ಚೋಟುವಿನ ದೇಹ ಇನ್ನೂ ಪತ್ತೆಯಾಗಿಲ್ಲ.
ಕಾಸರಗೋಡು: ಜಿಲ್ಲೆಯಲ್ಲಿ ಅ. 31 ಮತ್ತು ನಾಳೆ ನ. 1ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಎಲ್ಲೋ ಅಲೆರ್ಟ್ ಘೋಷಿಸಲಾಗಿದೆ ಎಂದು ತಿರುವನಂತಪುರ ಹವಾಮಾನ ನಿಗಾ ಕೇಂದ್ರ ತಿಳಿಸಿದೆ. ಸಮುದ್ರ ಅಬ್ಬರಿಸುತ್ತಿರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ತೆರಳಬಾರದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದಾರೆ. ಮುಂದಿನ ಆದೇಶ ಬರುವ ತನಕ ಪ್ರವಾಸಿಗಳು ಬೀಚ್‌ಗಳಿಗೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ. ಕರಾವಳಿ ಪ್ರದೇಶದಲ್ಲಿ ವಾಸಿಸುವವರು ಜಾಗ್ರತೆ ಪಾಲಿಸಬೇಕೆಂದೂ, ಕಡಲ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾದ ಸಂದರ್ಭ ಬಂದಲ್ಲಿ ಶಿಬಿರಗಳನ್ನು ಆರಂಭಿಸಲು ಅಗತ್ಯದ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಾಧಿಕಾರಿಗಳಿಗೆ ಸೂಚಿಸಿದ್ದಾರೆ.