Advertisement

ಹೊಸ ತಾಲೂಕಿನ ಸಮಗ್ರ ಅಭಿವೃದ್ಧಿಯ ನಿರೀಕ್ಷೆ: ಪುತ್ತೂರು ಜಿಲ್ಲೆಯಾದರೆ ಕಡಬಕ್ಕೂ ಅನುಕೂಲ

10:48 PM Mar 01, 2021 | Team Udayavani |

ಪುತ್ತೂರು ಹೊಸ ಜಿಲ್ಲೆಯಾದರೆ ಹೊಸ ತಾಲೂಕು ಆಗಿರುವ ಕಡಬದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. 120 ಕಿ.ಮೀ. ದೂರದ ಈಗಿನ ಜಿಲ್ಲಾ ಕೇಂದ್ರದ ಬದಲು ಕೇವಲ 40 ಕಿ.ಮೀ.ಯಲ್ಲಿಯೇ ಆಡಳಿತ ವ್ಯವಸ್ಥೆ ಸಿಗುವಂತಾದರೆ ಹಲವಾರು ಕೆಲಸಗಳು ಸುಲಭದಲ್ಲಿ ನಡೆಯಬಹುದು, ಅಭಿವೃದ್ಧಿಯೂ ವೇಗ ಪಡೆಯಬಹುದು, ಮೂಲ ಸೌಕರ್ಯ ಕೂಡ ವೃದ್ಧಿ ಕಾಣಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ.

Advertisement

ಕಡಬ: ಜಿಲ್ಲೆಯಲ್ಲಿ ಉದಯವಾಗಿರುವ ಹೊಸ ತಾಲೂಕುಗಳ ಪೈಕಿ ಕಡಬವೂ ಒಂದಾಗಿದೆ. ಪುತ್ತೂರು ಜಿಲ್ಲೆಯಾದರೆ ತಾಲೂಕು ಕೇಂದ್ರವಾಗಿ ಗುರುತಿಸಲ್ಪಟ್ಟರೂ ಅಭಿವೃದ್ಧಿಯ ವಿಚಾರದಲ್ಲಿ ಹಿಂದುಳಿದಿರುವ ಕಡಬದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭಿಸಿ ವೇಗ ಸಿಗಲು ಸಾಧ್ಯ ಎನ್ನುವುದು ಕಡಬ ಭಾಗದ ಜನತೆಯ ನಿರೀಕ್ಷೆಯಾಗಿದೆ.

ಕಡಬವು ಪುತ್ತೂರು ತಾಲೂಕಿನಿಂದ ಬೇರ್ಪಟ್ಟು ಪುತ್ತೂರಿನ 35 ಗ್ರಾಮಗಳು ಹಾಗೂ ಪಕ್ಕದ ಸುಳ್ಯ ತಾಲೂಕಿನಿಂದಲೂ 7 ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟು 42 ಗ್ರಾಮಗಳ ಸ್ವತಂತ್ರ ತಾಲೂಕಾಗಿ ಅಸ್ತಿತ್ವ ಪಡೆದುಕೊಂಡಿದೆ. ಜಿಲ್ಲಾ ಕೇಂದ್ರ ಮಂಗಳೂರಿನಿಂದ ತಾಲೂಕು ಕೇಂದ್ರ ಕಡಬವು 80 ಕಿ.ಮೀ. ದೂರದಲ್ಲಿದೆ. ತಾಲೂಕಿನ ಗಡಿ ಭಾಗದಲ್ಲಿರುವ ಗ್ರಾಮಗಳ ಜನರು ಜಿಲ್ಲಾ ಕೇಂದ್ರವನ್ನು ಸಂಪರ್ಕಿಸಲು 120 ಕಿ.ಮೀ. ಗಿಂತಲೂ ಹೆಚ್ಚು ದೂರದ ದಾರಿಯನ್ನು ಕ್ರಮಿಸುವ ಅನಿವಾರ್ಯತೆ ಇದೆ. ಪುತ್ತೂರು ಜಿಲ್ಲೆಯಾದರೆ ಕೇವಲ 40 ಕಿ.ಮೀ. ದೂರ ಕ್ರಮಿಸುವ ಮೂಲಕ ಜಿಲ್ಲಾ ಕೇಂದ್ರವನ್ನು ಕಡಬ ತಾಲೂಕು ಕೇಂದ್ರದ ಪರಿಸರದ ಜನರು ಸೇರಬಹುದು. ಇಲ್ಲಿ ಪ್ರಯಾಣಕ್ಕೆ ಬೇಕಾದ ಸಮಯ ಹಾಗೂ ಹಣವೂ ಅರ್ಧದಷ್ಟು ಉಳಿಕೆಯಾಗಲಿದೆ. ಶಾಂತಿಮೊಗರು ಸೇತುವೆ ನಿರ್ಮಾಣವಾದ ಬಳಿಕ ಕಡಬದಿಂದ ಪುತ್ತೂರಿಗೆ ನೇರ ಬಸ್‌ ಸಂಪರ್ಕವೂ ಆರಂಭವಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪುತ್ತೂರು ಜಿಲ್ಲೆ ಯಾಗುವುದಿದ್ದರೆ ಅದು ಕಡಬ ತಾಲೂಕಿನ ಜನರಿಗೆ ಹೆಚ್ಚು ಸಂತಸದ ವಿಷಯವಾಗಿರುತ್ತದೆ.

ಕೃಷಿ ಪ್ರಧಾನ ತಾಲೂಕು
ಕಡಬ ಪ್ರದೇಶದಲ್ಲಿ ರಬ್ಬರ್‌ ಹಾಗೂ ಅಡಿಕೆ ಕೃಷಿ ಪ್ರಮುಖವಾದುದು. ಭತ್ತದ ಗದ್ದೆಗಳು ಹಾಗೂ ಅಡಿಕೆ ಕೃಷಿಯಿಂದ ಸಮೃದ್ಧವಾಗಿದ್ದ ಕಡಬ ಭಾಗದಲ್ಲಿ ಇಂದು ಭತ್ತದ ಗದ್ದೆಗಳು ಅಡಿಕೆ ತೋಟವಾಗಿ ಮಾರ್ಪಾಟಾಗಿವೆ. ಈ ಭಾಗಕ್ಕೆ ಕೇರಳ ದಿಂದ ವಲಸೆ ಬಂದ ಮಲಯಾಳಿ ಬಂಧು ಗಳಿಂದಾಗಿ ರಬ್ಬರ್‌ ಕೃಷಿ ಬಹುತೇಕ ಪ್ರದೇಶದಲ್ಲಿ ಆವರಿಸಿಕೊಂಡಿದೆ. ಐತ್ತೂರು, ಮರ್ದಾಳ, ಬಿಳಿನೆಲೆ, ನೆಟ್ಟಣ, ಕೊಂಬಾರು, ಕೊಣಾಜೆ ಭಾಗಗಳಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸಾವಿರಾರು ಎಕರೆ ರಬ್ಬರ್‌ ತೋಟಗಳಿವೆ. ಅಲ್ಲಿ ಶ್ರೀಲಂಕಾದಿಂದ ಬಂದ ತಮಿಳು ನಿರಾಶ್ರಿತರಿಗೆ ಕೆಲಸ ನೀಡಲಾಗಿದೆ. ಪುತ್ತೂರು ಜಿಲ್ಲೆಯಾದರೆ ಕಡಬದ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭಿಸಿ ಕೈಗಾರಿಕೆ, ಉದ್ಯಮಗಳ ಸ್ಥಾಪನೆಗೂ ಅವಕಾಶಗಳು ಹೆಚ್ಚಲಿವೆ.

ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿ
ತಾಲೂಕು ಕೇಂದ್ರ ಕಡಬದಲ್ಲಿ ಸರಕಾರಿ ಹಾಗೂ ಖಾಸಗಿ ವಲಯದ ವೈದ್ಯಕೀಯ ಸೇವೆಗಳು ತೀರಾ ಹಿಂದುಳಿದಿವೆ. ಕಡಬ ಕೇಂದ್ರದಲ್ಲಿ ಸಮುದಾಯ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ನಿರೀಕ್ಷಿತ ವೈದ್ಯಕೀಯ ಸವಲತ್ತುಗಳ ಇಲ್ಲ ಎಂದೇ ಹೇಳಬಹುದು. ಖಾಸಗಿ ವಲಯದ ವೈದ್ಯಕೀಯ ಸೇವೆಗಳೂ ಇಲ್ಲಿ ಸಣ್ಣ ಪ್ರಮಾಣದ ಚಿಕಿತ್ಸಾಲಯಗಳಿಗಿಂತ ಮೇಲೇರಿಲ್ಲ. ಕಡಬ ಕೇಂದ್ರಿತವಾಗಿ ಖಾಸಗಿ ಹಾಗೂ ಸರಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಪ.ಪೂ. ಮಟ್ಟದ ಶಿಕ್ಷಣ ಸಿಗುತ್ತಿದೆಯೇ ಹೊರತು ಹೆಚ್ಚಿನ ಕಲಿಕೆಗೆ ಇಲ್ಲಿನ ವಿದ್ಯಾರ್ಥಿಗಳು ಅಕ್ಕಪಕ್ಕದ ಊರುಗಳನ್ನೇ ಆಶ್ರಯಿಸಬೇಕಿದೆ. ಆದುದರಿಂದ ಪುತ್ತೂರು ಜಿಲ್ಲಾ ಕೇಂದ್ರವಾದರೆ ಕಡಬ ತಾಲೂಕಿನ ಜನರು ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ
ಧಾರ್ಮಿಕವಾಗಿ ಸುಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಕಡಬ ತಾಲೂಕಿಗೆ ಮುಕುಟಪ್ರಾಯವಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿರುವ ಬಿಳಿನೆಲೆಯ ಕೇಂದ್ರೀಯ ತೆಂಗು ತಳಿ ಸಂಶೋಧನ ಕೇಂದ್ರ, ಐತ್ತೂರು ಸುಂಕದಕಟ್ಟೆಯಲ್ಲಿರುವ ರಬ್ಬರ್‌ ಮಂಡಳಿಯ ರಬ್ಬರ್‌ ತಳಿ ಸಂಶೋಧನ ಕೇಂದ್ರ, ಕೊçಲದ ವಿಶಾಲ ಪ್ರದೇಶದಲ್ಲಿ ರುವ ಪಶು ಸಂಗೋಪನಾ ಇಲಾಖೆಯ ಸಂಶೋಧನ ಕೇಂದ್ರಗಳು, ನಿರ್ಮಾಣ ಹಂತದಲ್ಲಿರುವ ಪಶು ವೈದ್ಯàಕಿಯ ಕಾಲೇಜು, ಇಚ್ಲಂಪಾಡಿಯ ಸೈಂಟ್‌ ಜಾರ್ಜ್‌ ತೀರ್ಥಾಟನ ಕೇಂದ್ರ, ಕಡಬದ ಐತಿಹಾಸಿಕ ಹಿನ್ನೆಲೆಯ ಕೇಂದ್ರ ಜುಮ್ಮಾ ಮಸೀದಿ, ಬೇಳ್ಪಾಡಿ, ಬೈತಡ್ಕ ಮಸೀದಿಗಳು, ಸವಣೂರು, ಮರ್ದಾಳ ಮತ್ತು ಇಚ್ಲಂಪಾಡಿ ಬಸದಿಗಳು, ಚಾರಿತ್ರಿಕ ವೀರರಾದ ಕೋಟಿ ಚೆನ್ನಯರ ಎಣ್ಮೂರು ಗರಡಿ, ಎಣ್ಮೂರು ಮಸೀದಿ ಮುಂತಾದ ಧಾರ್ಮಿಕ ಕೇಂದ್ರಗಳು ಕಡಬ ತಾಲೂಕಿನ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹತ್ತಿರದಲ್ಲಿಯೇ ಜಿಲ್ಲಾ ಕೇಂದ್ರವೂ ಇದ್ದರೆ ಕಡಬ ತಾಲೂಕಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೂ ಪೂರಕ ವಾತಾವರಣ ನಿರ್ಮಾಣವಾಗಲಿದೆ.

–  ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next