ಬರ್ಲಿನ್: ಮೂರು ತಿಂಗಳ ಬಳಿಕ ಐರೋಪ್ಯ ಒಕ್ಕೂಟದ ದೇಶಗಳ ಗಡಿಗಳು ತೆರೆದುಕೊಂಡರೂ ಅಲ್ಲಿನ ಪ್ರವಾಸೋದ್ಯಮ ಮತ್ತೆ ಹಾದಿಗೆ ಮರಳುವುದಕ್ಕೆ ಹಲವು ಸಮಯವೇ ಬೇಕಾಗಿದೆ. ಈ ವರ್ಷ ಯುರೋಪಿಯನ್ನರು ರಜೆ ಕಾಲದಲ್ಲಿ ಪ್ರವಾಸ ಮಾಡುತ್ತಾರಾ? ಅಮೆರಿಕನ್ನರು ಯುರೋಪ್‌ಗೆ ಬರುತ್ತಾರಾ? ಏಷ್ಯನ್ನರು ಬರಬಹುದಾ ಎಂಬ ವಿಚಾರ ಈಗ ಅಲ್ಲಿನ ಪ್ರವಾಸೋದ್ಯಮಿಗಳ ತಲೆಯಲ್ಲಿ ಕೊರೆಯುತ್ತಿದೆ.
ಕೋವಿಡ್‌ನಿಂದಾಗಿ ಗಡಿಯಲ್ಲಿ ಸಂಚಾರಕ್ಕೆ ನಿಯಂತ್ರಣ ಹೇರಲಾಗಿತ್ತು. ಈಗ ಅದನ್ನು ತೆರವುಗೊಳಿಸಲಾಗಿದ್ದು, ಯಾವುದೇ ದಾಖಲೆ ಪರೀಕ್ಷೆ ಇತ್ಯಾದಿಗಳನ್ನು ನಡೆಸುತ್ತಿಲ್ಲ. ಕೋವಿಡ್‌ನಿಂದಾಗಿ ಐರೋಪ್ಯ ಒಕ್ಕೂಟದ ಎಲ್ಲ ದೇಶಗಳು ತೀವ್ರ ಆರ್ಥಿಕ ಹಾನಿಗೆ ಒಳಗಾಗಿದ್ದು, ತತ್‌ಕ್ಷಣ ಚೇತರಿಕೆಗೆ ಎದುರು ನೋಡುತ್ತಿವೆ. ಇದಕ್ಕಾಗಿ ಇನ್ನು ಶುರುವಾಗುವ ರಜಾ ಸಮಯ ಪ್ರಶಸ್ತವಾಗಿದ್ದು, ಪ್ರವಾಸೋದ್ಯಮದ ಮೂಲಕ ತುಸು ಚೇತರಿಕೆಯಾಗುವ ಆಶಾವಾದ ಹೊಂದಲಾಗಿದೆ.
ಇತ್ತ ಗ್ರೀಸ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಆಗಮನಕ್ಕೆ ಹಸಿರು ನಿಶಾನೆ ತೋರಲಾಗಿದೆ. ಪ್ರವಾಸಿಗರಿಗೆ ವೈರಸ್ ಟೆಸ್ಟ್ ಕಡ್ಡಾಯ ಎಂದು ಅದು ಹೇಳಿದೆ. ಸ್ಪೇನ್ ಕೂಡ ಜರ್ಮನ್ ಪ್ರವಾಸಿಗರನ್ನು ತನ್ನ ದ್ವೀಪಗಳಿಗೆ ಬರಮಾಡಿಕೊಂಡಿದೆ.
ಡೆನ್ಮಾರ್ಕ್ ಕೂಡ ಜರ್ಮನಿ ಪ್ರವಾಸಿಗರಿಗೆ ಮುಕ್ತವಾಗಿದ್ದು ತನ್ನ ಗಡಿಯನ್ನು ತೆರೆದಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಗಡಿಯಲ್ಲಿ ಸೋಮವಾರ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಕ್ಯೂ ನಿಂತಿದ್ದವು. ಆದರೆ ಡೆನ್ಮಾರ್ಕ್ ಗೆ ಹೋಗುವ ಪ್ರವಾಸಿಗರು ಕನಿಷ್ಠ 6 ದಿನ ಮುಂಗಡ ಹೊಟೇಲ್ ಬುಕ್ಕಿಂಗ್ ಮಾಡಿರುವುದು ಕಡ್ಡಾಯವಾಗಿದೆ. ಬ್ರಿಟನ್ ಐರೋಪ್ಯ ಒಕ್ಕೂಟದವರನ್ನು ದೇಶಕ್ಕೆ ಬರಲು ಅನುಮತಿಸಿದ್ದರೂ ಬಂದವರು 14 ದಿನ ಕ್ವಾರಂಟೈನ್‌ಗೆ ಒಳಪಡಬೇಕಾದ್ದು ಕಡ್ಡಾಯ ಎಂದು ಹೇಳಿದೆ. ಇತ್ತ ಫ್ರಾನ್ಸ್ ಕೂಡ ಗಡಿಯನ್ನು ತೆರೆದುಕೊಂಡಿದ್ದು, ಅಲ್ಲಿಗೆ ಹೋದವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಡಚ್ ಸರಕಾರವೂ ತನ್ನ ಪ್ರಜೆಗಳು ಯುರೋಪಿನಲ್ಲಿ ಎಲ್ಲಿ ಬೇಕಾದರೂ ಸಂಚರಿಸಬಹುದು ಎಂದು ಹೇಳಿದ್ದರೂ, ತೀವ್ರ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಆರ್ಥಿಕತೆಯನ್ನು ಮೇಲೆತ್ತುವ ದೃಷ್ಟಿಯಿಂದ ಈ ಮೊದಲು ಐರೋಪ್ಯ ಒಕ್ಕೂಟ, ದೇಶಗಳ ಮಧ್ಯೆ ಗಡಿಯನ್ನು ತೆರೆಯಲು ಪ್ರಯತ್ನಿಸುವುದಾಗಿ ಹೇಳಿತ್ತು. ಅದರಂತೆ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಭೆಯೂ ನಡೆದಿದ್ದು, ಗಡಿ ತೆರೆಯುವ ನಿರ್ಧಾರಕ್ಕೆ ಬರಲಾಗಿದೆ.
ಐರೋಪ್ಯ ಒಕ್ಕೂಟದಲ್ಲಿ ಈವರೆಗೆ 1.82 ಲಕ್ಷ ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, 20 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗಿದ್ದಾರೆ. ಕೋವಿಡ್ ಸೋಂಕು ಇಟಲಿ, ಜರ್ಮನಿ, ಸ್ವೀಡನ್‌ಗಳಲ್ಲಿ ವ್ಯಾಪಕವಾಗಿದ್ದು ಇತರೆಡೆಗೆ ಹರಡುವ ಭೀತಿ ಇದ್ದರೂ ಸದ್ಯದ ಕ್ರಮದಲ್ಲಿ ಗಡಿಯನ್ನು ತೆರೆಯದೆ ಬೇರೆ ದಾರಿಯಿಲ್ಲ ಎಂದು ಐರೋಪ್ಯ ಒಕ್ಕೂಟ ತೆರೆಯಲು ತೀರ್ಮಾನಿಸಿದೆ. ಆದರೆ ವಿವಿಧ ದೇಶಗಳ ನಾಯಕರು ಜನರು ಎಚ್ಚರಿಕೆಯಿಂದ ಇರುವಂತೆಯೂ ಸೂಚನೆ ನೀಡಿದ್ದಾರೆ.